
ಉತ್ತರ ಕನ್ನಡದಲ್ಲಿ ಕೊಂಕಣಿ ರಂಗಭೂಮಿಗೆ ಹೊಸ ಚೈತನ್ಯ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಿಕ್ಕನಗೋಡು ಗ್ರಾಮ ಪಂಚಾಯಿತಿಯ ಗುಂಡಬಾಳದ ವಿನಾಯಕ ಶಾನುಭಾಗ್ ಅವರಿಗೆ ರಂಗಭೂಮಿಯ ಮೇಲೆ ವಿಶೇಷ ಆಸಕ್ತಿ. ಈಗಾಗಲೇ ನಾಲ್ಕು ನಾಟಕಗಳು ಪ್ರದರ್ಶನ ಕಂಡಿವೆ. ಆದರೆ ಅಭಿನಯದ ಆಚೆಗಿನ ರಂಗತಂತ್ರಗಳನ್ನು ಕಲಿಯಲು ಸಾಧ್ಯವಾಗದ ಕೊರಗು ಅವರನ್ನು ಕಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ಅವರಿಗೆ ಸಿಕ್ಕ ಅವಕಾಶವೇ ‘ಕೊಂಕಣಿ ರಂಗಾಂತರಂಗ’ ಶಿಬಿರ.
ಕುಮಟಾದ ರಂಗ ಸಾರಸ್ವತ ಹಾಗೂ ಕೊಂಕಣ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಈ ಶಿಬಿರ ವಿನಾಯಕ ಅವರ ಆಸಕ್ತಿಗೆ ಹೊಸ ಆಯಾಮ ನೀಡಿದೆ. ಈಗ ರಂಗಭೂಮಿಯಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಆತ್ಮವಿಶ್ವಾಸ ಅವರಲ್ಲಿ ಮೂಡಿದೆ. ವಿನಾಯಕ ಅವರಂತೆ ಕರಾವಳಿ ಭಾಗದ ಅನೇಕ ಯುವಜನರು ಹಾಗೂ ರಂಗಾಸಕ್ತರಿಗೆ ‘ರಂಗಾಂತರಂಗ’ ಹೊಸ ಭರವಸೆಯ ವೇದಿಕೆಯಾಗುತ್ತಿದೆ.
ಚಿತ್ರನಟ, ರಂಗಕರ್ಮಿ ಹಾಗೂ ಕೊಂಕಣಿ ನಾಟಕಕಾರ ಕಾಸರಗೋಡು ಚಿನ್ನಾ ಅವರ ಪರಿಕಲ್ಪನೆಯ ಈ ಶಿಬಿರವನ್ನು ಪ್ರಕಾಶ್ ನಾಯಕ್ ಮತ್ತು ಜಗನ್ ಪವಾರ್ ಜೊತೆಗೂಡಿ ನಡೆಸುತ್ತಿದ್ದಾರೆ. ಕೊಂಕಣಿ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಮೂರು ತಿಂಗಳ ಹಿಂದೆ ಮಂಗಳೂರಿನಲ್ಲಿ ಇದರ ಆರಂಭವಾಗಿತ್ತು. ಬಳಿಕ ಉಡುಪಿಯಲ್ಲಿ ಅನಂತ ವೈದಿಕ ಕೇಂದ್ರದ ಆಶ್ರಯದಲ್ಲಿ ಶಿಬಿರ ನಡೆಯಿತು. ಆಗಸ್ಟ್ ಕೊನೆಯ ವಾರ ಅಥವಾ ಅಕ್ಟೋಬರ್ ಆರಂಭದಲ್ಲಿ ಶಿರಸಿಯಲ್ಲಿ ಶಿಬಿರ ಆಯೋಜಿಸುವ ಯೋಜನೆಯಿದೆ. ಅಲ್ಲದೆ ಆಗಸ್ಟ್–ಸೆಪ್ಟೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಕ್ಕೂ ಶಿಬಿರ ವಿಸ್ತರಿಸಿ, ನಂತರ ರಾಜ್ಯದ ಇತರ ಭಾಗಗಳಿಗೂ ಕೊಂಡೊಯ್ಯುವ ಉದ್ದೇಶವಿದೆ.
ವಾರಾಂತ್ಯದ ಎರಡು ದಿನ, ತಿಂಗಳಿಗೆ ಒಂದು ಬಾರಿ ನಡೆಯುವ ಈ ಶಿಬಿರದಲ್ಲಿ ಅಭಿನಯದ ಜೊತೆಗೆ ಮಾತುಗಾರಿಕೆ, ಸಂಭಾಷಣೆಗಳ ಸ್ಪಷ್ಟ ಉಚ್ಚಾರ, ಧ್ವನಿಯ ಏರಿಳಿತ, ಪ್ರಸಾಧನ, ಪೋಷಾಕು ಸಿದ್ಧಪಡಿಸುವುದು ಮತ್ತು ಧರಿಸುವ ವಿಧಾನ, ಮೂಕಾಭಿನಯ ಮುಂತಾದ ರಂಗಭೂಮಿಯ ಮೂಲ ಅಂಶಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಜೊತೆಗೆ ರಂಗದ ಮೇಲೆ ನಿಲ್ಲುವ ಶೈಲಿ, ಅಲ್ಪಪ್ರಾಣ–ಮಹಾಪ್ರಾಣಗಳ ಸರಿಯಾದ ಬಳಕೆ, ಕ್ಲಿಷ್ಟ ಪದಗಳ ಉಚ್ಚಾರ ಇತ್ಯಾದಿಗಳಿಗೂ ವಿಶೇಷ ತರಬೇತಿ ನೀಡಲಾಗುತ್ತದೆ.
‘ಐದು ವರ್ಷಗಳ ಹಿಂದೆ ನಾಟಕ ಬರೆಯಲು ಆರಂಭಿಸಿದ್ದೆ. ರಂಗದ ಮೇಲಿನ ಶಿಸ್ತು ಮತ್ತಿತರ ವಿಷಯಗಳನ್ನು ನಿರ್ದೇಶಕರೇ ನೋಡಿಕೊಳ್ಳುತ್ತಿದ್ದರು. ಅದರ ಬಗ್ಗೆ ನನಗೆ ತಿಳಿದಿರಲಿಲ್ಲ. ಈಗ ಮಾತು ಹೇಗಿರಬೇಕು, ಧ್ವನಿಯ ಏರಿಳಿತ ಹೇಗಿರಬೇಕು, ವೇದಿಕೆಯ ಮೇಲೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿತಿದ್ದೇನೆ’ ಎಂದು ವಿನಾಯಕ ಶಾನುಭಾಗ್ ಹೇಳುತ್ತಾರೆ.
ಕುಮಟಾದ ಶಿಬಿರದಲ್ಲಿ ಭಾಗವಹಿಸಿದ್ದ ಮತ್ತೊಬ್ಬರು ಪ್ರಿಯಾಂಕಾ. ಅವರು ಈವರೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡವರಲ್ಲ. ‘ವೇದಿಕೆ ಏರಿ ಪ್ರತಿಭೆ ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯುತ್ತಿದ್ದೆ. ಆದರೆ ಭಯ ಕಾಡುತ್ತಿತ್ತು. ರಂಗಾಂತರಂಗ ಶಿಬಿರದಲ್ಲಿ ಭಾಗವಹಿಸಿದ ನಂತರ ಸಾರ್ವಜನಿಕವಾಗಿ ಮಾತನಾಡುವ ಹಾಗೂ ಅಭಿನಯಿಸುವ ಧೈರ್ಯ ಬಂದಿದೆ. ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ಬಾರಿ ನಾನೂ ಭಾಗವಹಿಸಲು ಉತ್ಸುಕಳಾಗಿದ್ದೇನೆ’ ಎಂದು ಅವರು ಹೇಳುತ್ತಾರೆ.
‘ರಂಗದ ಮೇಲೆ ನಡೆಯುವ ಎಲ್ಲ ಚಟುವಟಿಕೆಗಳನ್ನು ಎರಡು ದಿನಗಳಲ್ಲಿ ಪ್ರಾತ್ಯಕ್ಷಿಕೆ ಸಹಿತ ಅಭ್ಯಾಸ ಮಾಡಿಸಲಾಯಿತು. ಆ ತರಬೇತಿ ಪರಿಣಾಮಕಾರಿಯಾಗಿದ್ದರಿಂದ ಆತ್ಮವಿಶ್ವಾಸ ಹೆಚ್ಚಿದೆ’ ಎಂದು ಅವರು ವಿವರಿಸುತ್ತಾರೆ.
ಕೊಂಕಣಿಯು ಗೌಡ ಸಾರಸ್ವತ ಬ್ರಾಹ್ಮಣ, ಕ್ಯಾಥಲಿಕ್ ಕ್ರೈಸ್ತರು, ಚಿತ್ರಾಪುರ ಸಾರಸ್ವತ, ನವಾಯತ, ದೇಶಭಂಡಾರಿ, ಕುಡುಬಿ, ಸಿದ್ದಿ ಸೇರಿದಂತೆ 42ಕ್ಕೂ ಹೆಚ್ಚು ಸಮುದಾಯಗಳ ಮನೆಭಾಷೆ. ಇವರಲ್ಲಿ ಹಲವರಿಗೆ ರಂಗಭೂಮಿ ಪ್ರಮುಖ ಸಾಂಸ್ಕೃತಿಕ ಹಾಗೂ ಮನರಂಜನಾ ಮಾಧ್ಯಮವಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅದರ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೊಂಕಣಿ ರಂಗಭೂಮಿಗೆ ಮರುಚೈತನ್ಯ ನೀಡುವ ಉದ್ದೇಶದಿಂದ ‘ರಂಗಾಂತರಂಗ’ ರೂಪುಗೊಂಡಿದೆ.
ಮಾತಿನ ಶೈಲಿ ಭಿನ್ನ; ರಂಗ ಪ್ರಕ್ರಿಯೆ ಒಂದೇ
‘ಇತರ ಭಾಷೆಗಳಿಗಿಂತ ಕೊಂಕಣಿ ರಂಗಭೂಮಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕ್ಷೀಣಿಸುತ್ತಿರುವುದನ್ನು ಗಮನಿಸಿ ರಂಗಪ್ರಜ್ಞೆ ಹಾಗೂ ರಂಗಾಸಕ್ತಿ ಮೂಡಿಸಲು ಈ ಯೋಜನೆ ರೂಪಿಸಲಾಗಿದೆ. ಇದರಿಂದ ಎಲ್ಲರೂ ರಂಗಕರ್ಮಿಗಳಾಗಬೇಕೆಂದಿಲ್ಲ; ಉತ್ತಮ ಪ್ರೇಕ್ಷಕರು ರೂಪುಗೊಂಡರೂ ಸಾಕು ಎಂಬುದು ನಮ್ಮ ಆಶಯ’ ಎಂದು ಕಾಸರಗೋಡು ಚಿನ್ನಾ ಹೇಳುತ್ತಾರೆ.
ರಮಾನಂದ ಚೂರಿ ಅವರ ನಂತರ ಕೊಂಕಣಿ ರಂಗಭೂಮಿಯ ಚಟುವಟಿಕೆಗಳು ಕುಂಠಿತವಾದವು. ಕ್ಯಾಥಲಿಕ್ ಕೊಂಕಣಿ ಭಾಷಿಕರು ಮಂಗಳೂರಿನ ಡಾನ್ ಬಾಸ್ಕೊ ಹಾಲ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೂ ಜಿಎಸ್‌ಬಿ ಹಾಗೂ ಇತರ ಕೊಂಕಣಿ ಸಮುದಾಯಗಳಲ್ಲಿ ರಂಗಾಸಕ್ತಿ ಕ್ರಮೇಣ ಕಡಿಮೆಯಾಯಿತು. ಸಮರ್ಪಕ ವೇದಿಕೆಯ ಕೊರತೆಯೂ ಕಾಡಿತು. ವಿವಿಧ ಸಮುದಾಯಗಳ ಮಾತಿನ ಶೈಲಿ ಭಿನ್ನವಾಗಿದ್ದರೂ ರಂಗಪ್ರಕ್ರಿಯೆ ಒಂದೇ ಎಂಬ ಅರಿವು ಮೂಡಿಸುವ ಪ್ರಯತ್ನವೂ ಅಗತ್ಯವಾಗಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿ ರಿಸಿಕೊಂಡು ‘ರಂಗಾಂತರಂಗ’ವನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸುತ್ತಾರೆ.
ರಂಗಭೂಮಿ ಉಳಿಸುವ ಕಾಳಜಿ ಇರುವ ಅನೇಕರು ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಶಿಬಿರ ಆಯೋಜನೆಗಾಗಿ ಪ್ರಯಾಣ ವೆಚ್ಚ ಸೇರಿದಂತೆ ಇತರ ಖರ್ಚುಗಳಿಗೆ ಪಿ. ದಯಾನಂದ ಪೈ ಸಹಾಯಹಸ್ತ ನೀಡುವುದಾಗಿ ತಿಳಿಸಿದ್ದಾರೆ.
ಹದಿನಾರು ವರ್ಷ ಮೇಲ್ಪಟ್ಟವರಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಯುವಜನತೆಯ ಮೂಲಕ ಕೊಂಕಣಿ ರಂಗಭೂಮಿಗೆ ಪುನಶ್ಚೇತನ ನೀಡುವುದು ಪ್ರಮುಖ ಉದ್ದೇಶ. ಆದರೆ ಇದು ಕೊಂಕಣಿ ಭಾಷಿಕರಿಗೆ ಮಾತ್ರ ಸೀಮಿತವಾದ ಶಿಬಿರವಲ್ಲ ಎಂದು ಚಿನ್ನಾ ಸ್ಪಷ್ಟಪಡಿಸುತ್ತಾರೆ.
ಅಭಿನಯ, ಸ್ವರಶುದ್ಧಿ, ಪ್ರಸಾಧನದ ಜೊತೆಗೆ ಭರತನಾಟ್ಯದ ಮುದ್ರೆಗಳ ಪರಿಚಯವನ್ನೂ ಶಿಬಿರದಲ್ಲಿ ನೀಡಲಾಗುತ್ತದೆ. ಈ ತರಬೇತಿಗೆ ಶ್ರೇಯಾ ವಿಶ್ವನಾಥ್ ಸಹಕರಿಸುತ್ತಿದ್ದು, ಅಗತ್ಯವಿದ್ದರೆ ಸ್ಥಳೀಯ ನೃತ್ಯ ವಿದುಷಿಯರ ನೆರವೂ ಪಡೆಯಲಾಗುತ್ತದೆ. ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶಕುಂತಲಾ ಕಿಣಿ ನಾಟಕ ವಾಚನದ ಮೂಲಕ ಸಂಭಾಷಣೆಯ ಏರಿಳಿತ ಹಾಗೂ ಭಾವಪ್ರಕಟನೆಯ ಸೂಕ್ಷ್ಮತೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡುತ್ತಾರೆ. ನಾಟ್ಯವನ್ನು ಆಸ್ವಾದಿಸುವ ಹಾಗೂ ಮುದ್ರೆಗಳ ಮೂಲಕ ಭಾವವ್ಯಕ್ತೀಕರಣ ವಿಸ್ತರಿಸುವ ಸಾಧ್ಯತೆಗಳ ಪರಿಚಯವು ಇದರ ಉದ್ದೇಶ.
ಪ್ರತಿಯೊಬ್ಬರೊಳಗಿರುವ ರಂಗಕರ್ಮಿಯನ್ನು ಹೊರಗೆಳೆಯುವ ಪ್ರಯತ್ನವೇ ಈ ಶಿಬಿರ. ತರಬೇತಿ ಬಳಿಕ ಮನೆಯಲ್ಲಿಯೇ ಅಭ್ಯಾಸ ಮುಂದುವರಿಸಿ ತಮ್ಮನ್ನು ತಾವು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತದೆ. ರಂಗಭೂಮಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲವನ್ನು ಹುಟ್ಟಿಸುವ ಅಡಿಪಾಯವನ್ನು ಈ ಶಿಬಿರ ಹಾಕುತ್ತಿದೆ.
‘ಕೊಂಕಣಿ ರಂಗಭೂಮಿಯನ್ನು ಹೊಸ ದಿಸೆಯತ್ತ ಕೊಂಡೊಯ್ಯಲು ‘ರಂಗಾಂತರಂಗ’ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ ಎಂಬ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಕೊಂಕಣಿ ಭಾಷಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ರಂಗಭೂಮಿಯ ಪುನಶ್ಚೇತನಕ್ಕೆ ಕೈಜೋಡಿಸಬೇಕು’ ಎಂಬುದು ಸಂಘಟಕ ಕಾಗಾಲ ಚಿದಾನಂದ ಭಂಡಾರಿ ಅವರ ಆಶಯ.