ನಿಮ್ಮ ಮುಂದೆ ಹಾವು ಬಂದು ನಿಂತಾಗ ಹೀಗೆ ಮಾಡಿ : ತನ್ನ ಪಾಡಿಗೆ ಸರಿದು ಬಿಡುತ್ತದೆ ನಾಗರ

ನಿಮ್ಮ ಮುಂದೆ ಹಾವು ಬಂದು ನಿಂತಾಗ ಹೀಗೆ ಮಾಡಿ : ತನ್ನ ಪಾಡಿಗೆ ಸರಿದು ಬಿಡುತ್ತದೆ ನಾಗರ

ನಿಮ್ಮ ಮುಂದೆ ಹಾವು ಬಂದು ನಿಂತಾಗ ಹೀಗೆ ಮಾಡಿ : ತನ್ನ ಪಾಡಿಗೆ ಸರಿದು ಬಿಡುತ್ತದೆ ನಾಗರ

ಹಾವುಗಳೆಂದರೆ ಭಯಪಡದವರು ಬಹಳ ಕಡಿಮೆ. ಹಾವು ಸಣ್ಣದಿರಲಿ, ದೊಡ್ಡದಿರಲಿ ಅದನ್ನು ನೋಡಿದ ತಕ್ಷಣ ಒಮ್ಮೆ ಮೈ, ಕೈ ತಣ್ಣಗಾಗುವುದಂತೂ ಸತ್ಯ. ಎಲ್ಲಾ ಹಾವುಗಳು ವಿಷಕಾರಿಯಾಗಿರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೂ, ಕೆರೆ ಹಾವು ಕೂಡಾ ನಮಗೆ ಭಯ ಹುಟ್ಟಿಸಿ ಬಿಡುತ್ತದೆ. ಒಂದು ವೇಳೆ ನಿಜ ನಾಗರವೇ ನಿಮ್ಮ ಮುಂದೆ ಹೇಳುವುದೇ ಬೇಡ. ಅದರಲ್ಲಿಯೂ ಹೆಡೆ ಎತ್ತಿದ ಹಾವನ್ನು ನೋಡಿದರಂತೂ ಕೈ ಕಾಲು ಆಡುವುದೇ ಇಲ್ಲ.

ಈಗ ಮುಂಗಾರು. ಮುಂಗಾರಿನ ಋತುವಿನಲ್ಲಿ ಎಲ್ಲಿ ನೋಡಿದರೂ ಹಾವುಗಳು ಕಣ್ಣಿಗೆ ಬೀಳುತ್ತವೆ. ಹಾವನ್ನು ಕಂಡ ತಕ್ಷಣ ಒಂದು ನಿರ್ದಿಷ್ಟ ರೀತಿಯ ಭಯ ಆವರಿಸಿಬಿಡುತ್ತದೆ. ಮುಂದೆ ಏನು ಮಾಡಬೇಕು ಎನ್ನುವುದು ಕೂಡಾ ತೋಚುವುದಿಲ್ಲ. ಕೆಲವೊಮ್ಮೆ ಮೈಂಡ್‌ ಫ್ರೀಜ್‌ ಆಗುವುದೂ ಇದೆ. ಇನ್ನು ಕೆಲವೊಮ್ಮೆ ಹಾವನ್ನು ನೋಡಿದ ತಕ್ಷಣ ಕಿಟಾರನೆ ಕಿರುಚುವುದು, ಆ ಜಾಗದಿಂದ ಎದ್ನೋ ಬಿದ್ನೋ ಎನ್ನುವಂತೆ ಓಡುವ ಘಟನೆಗಳು ಕೂಡಾ ನಡೆಯುತ್ತವೆ.

ಆದರೆ ಹಾವನ್ನು ನೋಡಿದ ತಕ್ಷಣ ಗಾಬರಿಯಾಗುವ ಬದಲು ಆ ಕ್ಷಣದಲ್ಲಿ ನಿಜವಾಗಿಯೂ ಏನು ಮಾಡಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ನಾಗರಹಾವುಗಳು ಯಾವತ್ತೂ ಮನುಷ್ಯರೊಂದಿಗೆ ಮುಖಾಮುಖಿಯಾಗಲು ಇಷ್ಟಪಡುವುದಿಲ್ಲ. ಮನುಷ್ಯರು ಹಾವುಗಳ ಬೇಟೆಯೂ ಅಲ್ಲ. ಅವು ಅತ್ಯಂತ ನಾಚಿಕೆ ಸ್ವಭಾವದ ಜೀವಿಗಳು. ಅವು ಯಾರಿಗಾದರೂ ಕಚ್ಚುವ ಬದಲು ಮನುಷ್ಯರಿದ್ದ ಜಾಗದಿಂದ ಜಾಗ ಖಾಲಿ ಮಾಡಲು ಇಷ್ಟಪಡುತ್ತವೆ. ಹಾವು ಯಾವಾಗಲೂ ತಾನು ಭಯಗೊಂಡಾಗ ಅಥವಾ ತನಗೆ ಅಪಾಯ ಎದುರಾದಾಗ ಮಾತ್ರ ಎದುರಿಗಿದ್ದವರ ಮೇಲೆ ದಾಳಿ ಮಾಡುತ್ತದೆ.

ನಾಗರಹಾವು ಎದುರಾದಾಗ ತೆಗೆದುಕೊಳ್ಳಬಹುದಾದ ಕ್ರಮಗಳು

ನೀವು ಹಾವನ್ನು ಕಂಡ ತಕ್ಷಣ ಗಲಿಬಿಲಿಯಾಗಿ ಕಿರುಚುವುದು ಓಡಲು ಯತ್ನಿಸುವುದು ತಪ್ಪು. ಇದರಿಂದ ತನ್ನ ಮೇಲೆ ದಾಳಿಯಾಗುತ್ತಿದೆ ಎನ್ನುವ ಭಾವ ಹಾವಿಗೆ ಮೂಡುತ್ತದೆ. ಹಾಗಾಗಿ ಹಾವನ್ನು ಕಂಡ ತಕ್ಷಣ ನೀವು ನಿಂತ ಜಾಗದಲ್ಲಿಯೇ ನಿಲ್ಲಿ. ಒಂದು ಚೂರೂ ಚಲಿಸಲು ಹೋಗಬೇಡಿ. ನಾಗರಹಾವುಗಳು ಸಾಮಾನ್ಯವಾಗಿ ಪ್ರತಿಕ್ರಿಯಿಸುವುದಿಲ್ಲ. ಅದಕ್ಕೆ ಬೆದರಿಕೆ ಒಡ್ಡಿದಾಗ ಮಾತ್ರ ಅದು ಹೆಡೆಯೆತ್ತುವುದು, ಕಚ್ಚುವುದು. ನೀವು ಅದಕ್ಕೆ ಏನೂ ಮಾಡುವುದಿಲ್ಲ ಎನ್ನುವುದು ಮನದಟ್ಟಾಗಬೇಕಾದರೆ ನೀವು ತಟಸ್ಥವಾಗಿ ನಿಲ್ಲಬೇಕು. ನಾಗರಹಾವುಗಳು ಪ್ರಚೋದನೆಗೊಂಡಾಗ ಹೆಚ್ಚಾಗಿ ಕಚ್ಚುತ್ತವೆ. ಆದ್ದರಿಂದ ಕೆಲವು ಸೆಕೆಂಡುಗಳ ಕಾಲ ಚಲನೆ ಇಲ್ಲದೆ ನಿಲ್ಲುವುದರಿಂದ ಸಂಭಾವ್ಯ ದಾಳಿಯನ್ನು ತಡೆಯಬಹುದು.

ಹಾವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ, ನಿಧಾನವಾಗಿ ಹಿಂದೆ ಸರಿಯಿರಿ

ನಾಗರಹಾವನ್ನು ನೇರವಾಗಿ ನೋಡುತ್ತಿದ್ದರೆ ಅದನ್ನು ಭಯ ಆವರಿಸಬಹುದು. ಹಾಗಾಗಿ ಹಾವು ನಿಮ್ಮ ಮುಂದೆ ಇದ್ದರೆ ನೇರವಾಗಿ ಅದನ್ನು ದಿಟ್ಟಿಸಿ ನೋಡದೆ ನಿಮ್ಮ ದೃಷ್ಟಿಯನ್ನು ಬೇರೆ ಕಡೆ ಹೊರಳಿಸಿ. ಇನ್ನು ಹಾವು ಇದೆ ಎಂದು ಗೊತ್ತಾದಾಗ ಬೆನ್ನು ಹಾಕಿ ಓಡಲು ನೋಡಬೇಡಿ. ಸ್ವಲ್ಪ ಹೊತ್ತು ಚಲನೆ ಇಲ್ಲದೆ ಇದ್ದು ನಂತರ ನಿಧಾನವಾಗಿ ಹೆಜ್ಜೆಯನ್ನು ಹಿಂದಕ್ಕೆ ಇಡಿ.

ಹಾವು ಹಿಮ್ಮೆಟ್ಟಲು ಸ್ಪಷ್ಟ ಮಾರ್ಗವನ್ನು ನೀಡಿ

ನಾಗರಹಾವುಗಳು ಯಾವಾಗಲೂ ಹೋರಾಡುವ ಬದಲು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದರೆ, ಅವುಗಳಿಗೆ ಅಲ್ಲಿಂದ ತೆರಳಲು ಸರಿಯಾದ ಜಾಗವಿದ್ದರೆ ಮಾತ್ರ ಅದು ಆ ಸ್ಥಳದಿಂದ ಸರಿಯುತ್ತದೆ. ಇಲ್ಲವಾದರೆ ದಾಳಿಗೆ ಮುಂದಾಗುತ್ತದೆ. ಹೀಗಿರುವಾಗ ನೋವು ನಿಧಾನವಾಗಿ ಸರಿದು ಅವುಗಳು ಹೋಗಲು ದಾರಿ ಮಾಡಿಕೊಡಿ. ಹೀಗೆ ಮಾಡುವುದರಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳುವುದು ಹಾವುಗಳಿಗೂ ಸಾಧ್ಯವಾಗುತ್ತದೆ.

ಎಲ್ಲಾ ಸಮಯದಲ್ಲೂ ಸುರಕ್ಷಿತ ಅಂತರ ಕಾಯ್ದುಕೊಳ್ಳಿ

ಒಂದು ನಾಗರಹಾವು ತನ್ನ ದೇಹದ ಉದ್ದದ ಸುಮಾರು ಮೂರನೇ ಒಂದು ಭಾಗದಷ್ಟನ್ನು ಬಗ್ಗಿಸಿ ಕಚ್ಚುವುದು ಸಾಧ್ಯವಾಗುತ್ತದೆ. ಆದ್ದರಿಂದ ಅದು ಈಗಾಗಲೇ ರಕ್ಷಣಾತ್ಮಕ ಭಂಗಿಯಲ್ಲಿ ತನ್ನ ಹೆಡೆಯನ್ನು ಎತ್ತಿದ್ದರೆ ಕನಿಷ್ಠ 6-8 ಅಡಿ ಹಿಂದಕ್ಕೆ ಇರಿ.

ಹಾವುಗಳು ಹತ್ತಿರ ಬಾರದಂತೆ ತಡೆಯುವುದು ಹೇಗೆ ?

ಇಲಿಗಳು ಹಾವುಗಳನ್ನು ಆಕರ್ಷಿಸುತ್ತವೆ. ಗೋಡೆಗಳು ಅಥವಾ ಬಾಗಿಲುಗಳಲ್ಲಿನ ಅಂತರಗಳು ಅವುಗಳನ್ನು ಒಳಗೆ ನುಸುಳಲು ಅವಕಾಶ ಮಾಡಿ ಕೊಡುತ್ತವೆ. ಎತ್ತರವಾಗಿ ಬೆಳೆದಿರುವ ಹುಲ್ಲು ಅವುಗಳ ಕೆಳಗೆ ನುಸುಳಿಕೊಂಡಿರಲು ಸಹಾಯ ಮಾಡುತ್ತದೆ.

ಆದ್ದರಿಂದ ನಿಮ್ಮ ಮನೆಯನ್ನು ಸ್ವಚ್ಛವಾಗಿ, ಇಲಿ, ಹೆಗ್ಗಣ ಮತ್ತು ಕೀಟಗಳಿಂದ ಮುಕ್ತವಾಗಿಡಿ. ಮನೆಯ ಮುಖ್ಯ ದ್ವಾರಗಳನ್ನು ಸರಿಯಾಗಿ ಮುಚ್ಚಿ. ಮನೆಯ ಸುತ್ತಮುತ್ತ ಸರೀಸೃಪಗಳಿವೆ ಎಂದಾದರೆ ಬೂಟುಗಳನ್ನು ಧರಿಸುವುದು ಮತ್ತು ಕತ್ತಲಾದ ನಂತರ ಬ್ಯಾಟರಿ ತೆಗೆದುಕೊಂಡು ಹೋಗಲು ಮರೆಯಬೇಡಿ. ಮಳೆಗಾಲದಲ್ಲಿ ಇನ್ನೂ ಹೆಚ್ಚು ಜಾಗರೂಕರಾಗಿರುವುದು ಅಗತ್ಯ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ