ಬಸವನಬಾಗೇವಾಡಿ | ಹದ ಮಳೆ ನಂಬಿ ಬಿತ್ತನೆ; ಬಾಡಿದ ಬೆಳೆ

ಬಸವನಬಾಗೇವಾಡಿ | ಹದ ಮಳೆ ನಂಬಿ ಬಿತ್ತನೆ; ಬಾಡಿದ ಬೆಳೆ

ಬಸವನಬಾಗೇವಾಡಿ | ಹದ ಮಳೆ ನಂಬಿ ಬಿತ್ತನೆ; ಬಾಡಿದ ಬೆಳೆ

ಬಸವನಬಾಗೇವಾಡಿ: ಅಖಂಡ ಬಸವನಬಾಗೇವಾಡಿ ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಮಳೆಯಾಶ್ರಿತ ಕೃಷಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮೆಕ್ಕೆಜೋಳ, ತೊಗರಿ, ಹತ್ತಿ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಪ್ರಮುಖ ಬೆಳೆಗಳ ಬೆಳವಣಿಗೆ ಹಾಗೂ ಇಳುವರಿ ಭಾರಿ ಪ್ರಮಾಣದಲ್ಲಿ ಕುಂಠಿತವಾಗುವ ಆತಂಕ ರೈತರನ್ನು ಕಾಡುತ್ತಿದೆ.

ಅಖಂಡ ತಾಲ್ಲೂಕಿನ ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೊಲ್ಹಾರ ತಾಲ್ಲೂಕುಗಳಲ್ಲಿ ಶೇ 90ರಷ್ಟು ಬಿತ್ತನೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಬಳಿಕ ಬಿಸಿಲು ಹಾಗೂ ಗಾಳಿಯಿಂದ ಮಣ್ಣಿನಲ್ಲಿ ತೇವಾಂಶದ ಕೊರತೆ ಉಂಟಾಗಿದೆ. ಆಗಸ್ಟ್ ಮಧ್ಯಭಾಗದಲ್ಲಿಯೂ ಮಳೆ ಪ್ರಮಾಣ ತೀವ್ರವಾಗಿ ಕುಂಠಿತಗೊಂಡಿದ್ದು, ಹದ ಮಳೆ ನಂಬಿ ಬಿತ್ತನೆ ಮಾಡಿದ ರೈತರಿಗೆ ನಿರಾಸೆಯಾಗಿದೆ.

ಕಳೆದ ಬಾರಿ ಹತ್ತಿಗೆ ಉತ್ತಮ ದರ ದೊರೆತ ಹಿನ್ನೆಲೆಯಲ್ಲಿ ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ. ಅಂದಾಜು 3,200 ಹೆಕ್ಟೇರ್ ಬಿತ್ತನೆ ಗುರಿಯಿದ್ದರೂ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಮಾರುಕಟ್ಟೆಯಲ್ಲಿ ಹತ್ತಿ ದರವೂ ₹ 9 ಸಾವಿರ ವರೆಗೆ ಇದೆ. ಆದರೆ, ಮಳೆ ಕೊರತೆಯಿಂದ ಹತ್ತಿ ಬೆಳೆಯ ಬೆಳವಣಿಗೆ ಸುಮಾರು ಶೇ 80ರಷ್ಟು ಕುಂಠಿತವಾಗಿದೆ.

ಸಾಮಾನ್ಯವಾಗಿ 5x5 ಅಡಿ ಪ್ರದೇಶದಲ್ಲಿ 75 ರಿಂದ 80 ಹತ್ತಿ ಗಿಡಗಳು ಇರಬೇಕಾದರೆ, ಇದೀಗ 30 ರಿಂದ 35 ಗಿಡಗಳು ಮಾತ್ರ ಉಳಿದಿವೆ. 60 ರಿಂದ 70 ಸೆಂ.ಮೀ. ಎತ್ತರಕ್ಕೆ ಬೆಳೆಯಬೇಕಾದ ಗಿಡಗಳು ಕೇವಲ 30 ರಿಂದ 40 ಸೆಂ.ಮೀ.ಎತ್ತರಕ್ಕೆ ಸೀಮಿತವಾಗಿವೆ. ಕವಲು, ಹೂ ಹಾಗೂ ಕಾಯಿಗಳ ಸಂಖ್ಯೆಯೂ ಕಡಿಮೆಯಾಗಿದೆ. ತೊಗರಿ ಬೆಳೆಯ ಪರಿಸ್ಥಿತಿಯೂ ಇದೇ ಆಗಿದೆ.

ನೀರಾವರಿ ಬೆಳೆಯಾದ ಕಬ್ಬಿಗೂ ಮಳೆ ಕೊರತೆ ಪರಿಣಾಮ ಬೀರಿದೆ. ಆರೇಳು ತಿಂಗಳ ಕಬ್ಬಿನಲ್ಲಿ ಸಾಮಾನ್ಯವಾಗಿ 8 ರಿಂದ 9 ಇಂಚಿನ ಗಣಿಕೆ ಬೆಳೆಯಬೇಕಾದರೆ. ಇದೀಗ ಗಣಿಕೆಗಳ ಬೆಳವಣಿಗೆ ಹಾಗೂ ಮರಿ ಗಣಿಕೆಗಳ ಸಂಖ್ಯೆ ಕಡಿಮೆಯಾಗಿದೆ. ಸೂರ್ಯಕಾಂತಿ ಬೆಳೆಯಲ್ಲಿ ಹೂವಿನ ಗಾತ್ರ ಕುಗ್ಗಿದ್ದು, ಕಾಳುಗಳು ಜೊಳ್ಳಾಗುತ್ತಿರುವುದು ಇಳುವರಿ ಕುಸಿಯುವ ಆತಂಕಕ್ಕೆ ಕಾರಣವಾಗಿದೆ.

‘ಮಳೆಯಾಗದ ಕಾರಣ ಎಲ್ಲ ಬೆಳೆಗಳು ಅರ್ಧಕ್ಕೆ ನಿಂತು ಒಣಗಿವೆ. ಹತ್ತಿ, ತೊಗರಿ ಬೆಳೆಗಳಲ್ಲಿ ಕವಲು ಒಡೆಯದೇ ಒಣಗಿವೆ. ಕಬ್ಬಿಗೆ ನೀರಾವರಿ ಇದ್ದರೂ ಉತ್ತಮ ಇಳುವರಿಗೆ ಮಳೆನೀರು ತಾಯಿ ಹಾಲಿನಂತೆ ಅಗತ್ಯ. ಯಾವುದೇ ಬೆಳೆ ಬದಲಾಯಿಸಿದರೂ ಮಳೆಯಿಲ್ಲದ ಮೇಲೆ ಬೆಳೆಯ ಮಾತೆಲ್ಲಿ? ಈ ವರ್ಷ ಯಾವ ಹಂಗಾಮೂ ರೈತನ ಕೈ ಹಿಡಿದಿಲ್ಲ. ಎಕರೆ ಬೆಳೆಗೆ ಕನಿಷ್ಠ ₹20 ರಿಂದ ₹25 ಸಾವಿರ ಖರ್ಚಾಗಿದೆ. ರೈತರ ಸಂಕಷ್ಟ ಸರ್ಕಾರದ ಕಣ್ಣೆದುರಿಗಿದ್ದರೂ ಸೂಕ್ತ ಕಾಳಜಿ ವಹಿಸುತ್ತಿಲ್ಲ’ ಎಂದು ರೈತ ಬಸಪ್ಪ ಹಾರಿವಾಳ ‘ಪ್ರಜಾವಾಣಿ’ ಯೊಂದಿಗೆ ತಮ್ಮ ನೋವು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-26-1510014515

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ