
ಬರ ಪರಿಹಾರ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಹಿಂದೇಟು, ಶೆಟ್ಟರ್ ಆರೋಪ
ಸಿಂದಗಿ: ‘ರಾಜ್ಯದಾದ್ಯಂತ ಬರದ ವಾತಾವರಣವಿದೆ. ಕೆಲವು ಜಿಲ್ಲೆಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೂ ಪ್ರತಿವರ್ಷದ ವಾಡಿಕೆ ಮಳೆಯಾಗಿಲ್ಲ. ರೈತರು ತೊಂದರೆಯಲ್ಲಿದ್ದಾರೆ. ಇಂಥ ಬರ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಬರ ಅಧ್ಯಯನ ತಂಡ ಕಳುಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಬರಗಾಲ ಕಾಮಗಾರಿ ಶುರು ಮಾಡಬೇಕಿತ್ತು’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯವನ್ನು ತಕ್ಷಣವೇ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕಿತ್ತು. ಕೇಂದ್ರ ಸರ್ಕಾರಕ್ಕೆ ಬರ ಕುರಿತ ಅಂಕಿಅಂಶಗಳನ್ನೊಳಗೊಂಡು ವರದಿ ಸಲ್ಲಿಸಬೇಕಿತ್ತು. ಆದರೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ತಟಸ್ಥವಾಗಿದೆ’ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾದ ನಂತರ ಎರಡನೆಯ ಹಂತದ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಹೈಕಮಾಂಡ್ ಹಗ್ಗ-ಜಗ್ಗಾಟ ನಡೆಸಿ ಇನ್ನೂವರೆಗೂ ಎಳೆದುಕೊಂಡು ಹೊರಟಿದೆ. ಇದು ಹಳೆಯ ಸರ್ಕಾರವೇ ಆಗಿದ್ದು ಮುಖ್ಯಮಂತ್ರಿ ಮಾತ್ರ ಬದಲಾಗಿದ್ದಾರೆ. ಆದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬರ ಪರಿಹಾರ ಕಾಮಗಾರಿ ಬಗ್ಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.
ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ, ಯಾವೊಬ್ಬ ಶಾಸಕನೂ ರೈತರ ನೆರವಿಗೆ ಬಂದಿಲ್ಲ. ಬರ ಪರಿಹಾರ ಕಾಮಗಾರಿ ಪ್ರಾರಂಭಿಸುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರದಲ್ಲಿ ಹಣವೇ ಇಲ್ಲ, ಗ್ಯಾರಂಟಿ ಯೋಜನೆಗಾಗಿ ಪ್ರತಿ ವರ್ಷ ಸರ್ಕಾರ ₹ 50 ಸಾವಿರ ಕೋಟಿ ವೆಚ್ಚ ಮಾಡುತ್ತಿವೆ. ಹೀಗಾಗಿ ಅಭಿವೃದ್ಧಿ ಶೂನ್ಯವಾಗಿದೆ’ ಎಂದು ಟೀಕಿಸಿದರು.
‘ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಹೊಸ, ಹೊಸ ರೈಲ್ವೆ ಲೈನ್ ಮಂಜೂರು ಮಾಡಿದೆ. ಹೊಸ ರೈಲು ಕಾಮಗಾರಿಗಾಗಿ ಭೂಸ್ವಾಧೀನ ಪಡೆಸಿಕೊಂಡರೆ ಪರಿಹಾರ ಹಣ ನೀಡಲು ಸರ್ಕಾರದಲ್ಲಿ ಹಣವಿಲ್ಲ. ಬೆಳಗಾವಿ-ಕಿತ್ತೂರ-ಧಾರವಾಡ ಹೊಸ ರೈಲ್ವೆ ಲೈನ್‌ಗಾಗಿ 1,500 ಎಕರೆ ಜಮೀನುಗಳ ಭೂಸ್ವಾಧೀನಕ್ಕಾಗಿ ರಾಜ್ಯ ಸರ್ಕಾರ ₹400- ₹500 ಕೋಟಿ ಬಿಡುಗಡೆಗೊಳಿಸಬೇಕು. ಆದರೆ ಕೇವಲ ₹ 50 ಕೋಟಿ ಮಾತ್ರ ಮಂಜೂರು ಮಾಡಲಾಗಿದೆ’ ಎಂದು ವಿವರಿಸಿದರು.
‘ಹೀಗೆ ರಾಜ್ಯದ ಖಜಾನೆಯಲ್ಲಿ ಹಣವಿಲ್ಲದ ಕಾರಣ ಎಲ್ಲ ಯೋಜನೆಗಳು ನನೆಗುಗಿದೆ ಬಿದ್ದಿವೆ. ಕೃಷ್ಣಾ ಮೇಲ್ದಂಡೆ ಯೋಜನೆ 3ನೆಯ ಹಂತದಲ್ಲಿ ಸಾವಿರಾರು ಎಕರೆ ಜಮೀನು ಕಳೆದುಕೊಳ್ಳುವವರಿಗಾಗಿ ₹ 80 ಸಾವಿರ ಕೋಟಿ ಪರಿಹಾರ ನೀಡಬೇಕಿದೆ. ಈ ಯೋಜನೆಗಾಗಿ ಸರ್ಕಾರ ಪ್ರತಿ ವರ್ಷ ₹ 10 ಸಾವಿರ ಕೋಟಿ ನೀಡುವುದಾಗಿ ಭರವಸೆ ನೀಡಿದ್ದರೂ ನೀಡಲಿಲ್ಲ. ಆಲಮಟ್ಟಿ ಜಲಾಶಯ ಎತ್ತರಿಸಲು ಸರ್ಕಾರ ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿಲ್ಲ. ಸರ್ಕಾರದ ಆಡಳಿತ ಸ್ಥಗಿತಗೊಂಡಿದೆ. ಯಾವಾಗ ಕಾಂಗ್ರೆಸ್ ಸರ್ಕಾರ ಹೋಗುತ್ತದೆ ಎಂದು ರಾಜ್ಯದ ಜನ ಕಾತರರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ‘ರಾಜ್ಯ ಸರ್ಕಾರ ಕೃಷ್ಣೆಯ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಟೀಕಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಮುಖ ಮಲ್ಲಿಕಾರ್ಜುನ ಜೋಗೂರ, ಮಂಡಲ ಪ್ರಮುಖ ಪ್ರಶಾಂತ ಕದ್ದರಕಿ ಇದ್ದರು.
ರಾಜ್ಯದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡರೂ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ರಾಹುಲ್ ಗಾಂಧಿ ಭೇಟಿಗಾಗಿ ಸರದಿಯಲ್ಲಿ ನಿಂತಿದ್ದರೆ. ರೈತರ ಕುಂದುಕೊರತೆ ಕೇಳುವವರಿಲ್ಲ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260803-26-104533387