ಹುಬ್ಬಳ್ಳಿ: 49 ಶಾಲೆಗಳಲ್ಲಿ ‘ಕೃತಕ ಬುದ್ಧಿಮತ್ತೆ’ ಶಿಕ್ಷಣ

ಹುಬ್ಬಳ್ಳಿ: 49 ಶಾಲೆಗಳಲ್ಲಿ ‘ಕೃತಕ ಬುದ್ಧಿಮತ್ತೆ’ ಶಿಕ್ಷಣ

ಹುಬ್ಬಳ್ಳಿ: 49 ಶಾಲೆಗಳಲ್ಲಿ ‘ಕೃತಕ ಬುದ್ಧಿಮತ್ತೆ’ ಶಿಕ್ಷಣ

ಹುಬ್ಬಳ್ಳಿ: ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (ಎನ್‌ಎಸ್‌ಕ್ಯೂಎಫ್) ಯೋಜನೆಯಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ‘ಎಐ’ (ಕೃತಕ ಬುದ್ಧಿಮತ್ತೆ) ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಪ್ರಸಕ್ತ ಸಾಲಿನಲ್ಲಿ ಧಾರವಾಡ ಜಿಲ್ಲೆಯ 49 ಶಾಲೆಗಳನ್ನು ಒಳಗೊಂಡು ರಾಜ್ಯದಲ್ಲಿ 1,642 ಆಯ್ದ ಸರ್ಕಾರಿ ಪ್ರೌಢಶಾಲೆಗಳನ್ನು ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಗಳಲ್ಲಿ ಕೌಶಲ ವೃದ್ಧಿ, ಸೃಜನಶೀಲತೆ, ತಾಂತ್ರಿಕ ಜ್ಞಾನ ಹಾಗೂ ಉದ್ಯೋಗಾರ್ಹತೆ ಬಲಪಡಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಕಂಪ್ಯೂಟರ್, ಲ್ಯಾಬ್, ಪ್ರೊಜೆಕ್ಟರ್, ವೈ–ಫೈ ಸೇರಿ ವಿವಿಧ ಸೌಲಭ್ಯ ಇರುವ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ‘ಎಐ’ ಶಿಕ್ಷಣ ಪರಿಚಯಿಸಲು ಮುಂದಾಗಿದ್ದು, ಪೂರಕ ಸಾಮಗ್ರಿ ಖರೀದಿಗೆ ಪ್ರತಿ ಶಾಲೆಗೆ ₹2 ಲಕ್ಷ ಅನುದಾನ ಒದಗಿಸಿದೆ.

ಪ್ರೌಢಶಾಲೆಗಳಲ್ಲಿ 9ನೇ ತರಗತಿಯಿಂದ ತೃತೀಯ ಭಾಷೆ ಹಿಂದಿ ಬದಲಾಗಿ ‘ಎಐ’ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಇಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ, ಇಲ್ಲಿನ ತೃತೀಯ ಭಾಷಾ ಶಿಕ್ಷಕರನ್ನು ಸಮೀಪದ ಹಾಗೂ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ನಿಯೋಜನೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

‘ಕಂಪ್ಯೂಟರ್ ಸೈನ್ಸ್‌ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ, ಪದವಿ (ಬಿಸಿಎ, ಬಿ.ಎಸ್ಸಿ ಕಂಪ್ಯೂಟರ್ ಸೈನ್, ಬಿ.ಎಸ್ಸಿ ಐಟಿ) ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. 49 ಶಾಲೆಗಳಿಗೆ 500ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಎಲ್ಲ ಶಾಲೆಗಳಿಗೆ ‘ಎಐ’ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ತಿಂಗಳಿಗೆ ₹20 ಸಾವಿರ ವೇತನ ನಿಗದಿಪಡಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ನೇಮಕಾತಿ ಪ್ರಕ್ರಿಯೆ: ‘ಎಐ’ ಅತಿಥಿ ಶಿಕ್ಷಕರ ನೇಮಕಕ್ಕೆ ಶಾಲಾ ಶಿಕ್ಷಣ ಇಲಾಖೆಯು ಎಸ್‌ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ, ಬಿಇಒ ಅನುಮೋದನೆ ಬಳಿಕ ‘ಎಐ’ ಶಿಕ್ಷಕರ ಆಯ್ಕೆ ಮಾಡುವಂತೆ ಇಲಾಖೆ ಸೂಚಿಸಿತ್ತು’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಉಪಸಮನ್ವಯ ಅಧಿಕಾರಿ ಎಸ್.ಎಂ. ಹುಡೇದಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆ ನಿರ್ದೇಶನದಂತೆ ಜುಲೈ 28ರೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಬಿ.ಇ ವಿದ್ಯಾರ್ಹತೆ ಪಡೆದವರೂ ಅರ್ಜಿ ಸಲ್ಲಿಸಿದ್ದರು. ಹುದ್ದೆ ಮಂಜೂರಾಗಿರುವ ಪ್ರೌಢಶಾಲೆಗಳಲ್ಲಿ ‘ಎಐ’ ಪ್ರಯೋಗಾಲಯ ಸ್ಥಾಪನೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗುವುದು’ ಎನ್ನುತ್ತಾರೆ ಅವರು.

ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಗೊಂದಲ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಪ್ರೌಢಶಾಲೆಗಳಲ್ಲಿ ಈಗ ‘ಎಐ’ ಶಿಕ್ಷಣ ಪರಿಚಯಿಸಲು ಮುಂದಾಗಿರುವ ಶಿಕ್ಷಣ ಇಲಾಖೆಯ ನಿರ್ಧಾರವು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಗೊಂದಲ ಮೂಡಿಸಿದೆ.

‘ಎಐ’ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವರಿಗೆ ತರಬೇತಿ ನೀಡಬೇಕಿದೆ. ‘ಎಐ’ ಪಠ್ಯವೂ ಸಿದ್ಧವಾಗಿಲ್ಲ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ‘ಎಐ’ ಪಠ್ಯಪುಸ್ತಕ ಕೈಗೆ ಸಿಗುವುದು ಯಾವಾಗ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ. ‘ಎಐ’ ಶಿಕ್ಷಕರ ನೇಮಕಾತಿ, ಪಠ್ಯಪುಸ್ತಕ ಲಭ್ಯ ಆಗುವವರೆಗೆ ಕಳೆದ ತರಗತಿಯಲ್ಲಿ ಬೋಧಿಸಿದ ತೃತೀಯ ಭಾಷೆಯನ್ನೇ ವಿದ್ಯಾರ್ಥಿಗಳಿಗೆ ಬೋಧಿಸುವಂತೆ ಮುಖ್ಯಶಿಕ್ಷಕರು ತಿಳಿಸಿದ್ದಾರೆ’ ಎಂದು ಪ್ರೌಢಶಾಲೆಯ ತೃತೀಯ ಭಾಷೆ ಶಿಕ್ಷಕರೊಬ್ಬರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260803-24-552283938

Post a Comment

If u have any queries, Please let us know

Previous Post Next Post