
ಮಂಗಳೂರು ರೈಲ್ವೆ ಜಾಲ ವರ್ಗಾವಣೆ ತಡೆಗೆ ಕೇರಳಂ ಮುಖ್ಯಮಂತ್ರಿ ಸತೀಶನ್ ಒತ್ತಾಯ
ತಿರುವನಂತಪುರ (ಪಿಟಿಐ): ಉಲ್ಲಾಳ ಸೇರಿದಂತೆ ಮಂಗಳೂರು ಪ್ರದೇಶದ ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ರೈಲ್ವೆ ಮಂಡಳಿಯ ಪ್ರಸ್ತಾವವನ್ನು ತಡೆಹಿಡಿಯಬೇಕು ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
‘ಕೇರಳಂ ಸರ್ಕಾರ ಹಾಗೂ ಸಂಬಂಧಿಸಿದ ವರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ರೈಲ್ವೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.
‘ಭಾರತೀಯ ರೈಲ್ವೆಯ ಕಾರ್ಯನಿರ್ವಹಣೆಯಲ್ಲಿ ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ದಕ್ಷತೆಯ ಅಗತ್ಯವನ್ನು ಕೇರಳಂ ಸಂಪೂರ್ಣವಾಗಿ ಗೌರವಿಸುತ್ತದೆ. ಆದರೆ, ಯಾವುದೇ ಪ್ರಾದೇಶಿಕ ಪುನರ್‌ರಚನೆಯನ್ನು ಕೈಗೊಳ್ಳುವ ಮುನ್ನ, ಅದರಿಂದ ಸಂಬಂಧಪಟ್ಟ ಎಲ್ಲ ಪ್ರದೇಶಗಳ ಮೇಲಾಗುವ ಪರಿಣಾಮಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಬೇಕು. ಹಾಗೆಯೇ, ಇದು ಯಾವುದೇ ರಾಜ್ಯ ಅಥವಾ ಪ್ರದೇಶದ ರೈಲ್ವೆ ಮೂಲಸೌಕರ್ಯ ಅಥವಾ ಅಭಿವೃದ್ಧಿಯ ಅವಕಾಶಗಳನ್ನು ಕುಂಠಿತಗೊಳಿಸದಂತೆ ಖಚಿತಪಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-51-896974299