
ಚೀಳಂಗಿ: ದಯನೀಯ ಸ್ಥಿತಿಯಲ್ಲಿ ದಲಿತರ ಬದುಕು
ಸಿರಿಗೆರೆ: ಈ ಪ್ರದೇಶಕ್ಕೆ ಹೋದರೆ ಕೊಳಚೆ ನೀರು, ಗಾಳಿ ಬೆಳಕನ್ನೇ ಕಾಣದ ತಗಡಿನ ಮನೆಗಳು, ಛಾವಣಿಯೇ ಇಲ್ಲದ ಬಚ್ಚಲುಗಳು, ಸ್ವಚ್ಛತೆಯನ್ನೇ ಕಾಣದ ಚರಂಡಿಗಳು ಕಾಣಸಿಗುತ್ತವೆ. ಇನ್ನು ಸುಸಜ್ಜಿತ ರಸ್ತೆಯಂತೂ ದೂರದ ಮಾತು.
ಇದು ಸಮೀಪದ ಚೀಳಂಗಿ ಗ್ರಾಮದ ದಲಿತ ಕಾಲೊನಿಯ ದುಃಸ್ಥಿತಿಯ ಚಿತ್ರಣ.
ಈ ಕಾಲೊನಿಯಲ್ಲಿ ನಾಲ್ಕುಹೆಜ್ಜೆ ಹಾಕಿದರೆ ವಾಸ್ತವ ಚಿತ್ರಣದ ಪರಿಚಯವಾಗುತ್ತದೆ. ಅಂದಾಜು 150 ಮನೆಗಳಿರುವ ಗ್ರಾಮದಲ್ಲಿ ಕೂಲಿ ಮಾಡುವ ದಲಿತ ಸಮುದಾಶಯದ 25 ಕುಟುಂಬಗಳು ವಾಸ ಮಾಡುತ್ತಿವೆ.
ಇಲ್ಲಿ ಕೆಲವೆಡೆ ಚರಂಡಿ ಇಲ್ಲ. ಇದ್ದರೂ ಸ್ವಚ್ಛತೆ ಕಂಡು ವರ್ಷಗಳೇ ಕಳೆದಿವೆ. ಹಲವೆಡೆ ಕೊಳಚೆ ನೀರಿನಿಂದ ಚರಂಡಿಗಳು ಕಟ್ಟಿಕೊಂಡಿದ್ದು, ಗಬ್ಬೆದ್ದು ನಾರುತ್ತಿವೆ. ಇದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಗ್ರಾಮಾಂತರ ಪ್ರದೇಶ ವಸತಿ ರಹಿತರಿಗೆ ಆಶ್ರಯ, ಬಸವ, ಅಂಬೇಡ್ಕರ್ ಯೋಜನೆಯಲ್ಲಿ ಮಂಜೂರಾದ ಮನೆಗಳು ಈ ಊರಿಗೆ ತಲುಪದೇ ಇರಲು ಕಾರಣ ಈಗಲೂ ನಿಗೂಢವಾಗಿಯೇ ಉಳಿದಂತಿದೆ. ಹೀಗಾಗಿ ಇಲ್ಲಿನ ಜನ ತಮ್ಮ ಪೂರ್ವಿಕರು ಕಟ್ಟಿಕೊಂಡ ಜೋಪಡಿಗಳಲ್ಲೇ ಕನಿಷ್ಠ ಸೌಲಭ್ಯ ಇಲ್ಲದೇ ಜೀವನ ಸಾಗಿಸುತ್ತಿದ್ದಾರೆ.
ಈ ಗ್ರಾಮದ ಹಲವು ಮನೆಗಳಲ್ಲಿ ಬಚ್ಚಲುಗಳೇ ಇಲ್ಲ. ಪುರುಷರು ಬೀದಿಯಲ್ಲೇ ಸ್ನಾನ ಮಾಡುತ್ತಿದ್ದು, ಮಹಿಳೆಯರು ವಿಧಿ ಇಲ್ಲದೆ ತೆಂಗಿನ ನಾರು, ಅಳಿದುಳಿದ ಫ್ಲೆಕ್ಸ್, ರಟ್ಟುಗಳಿಂದ ಪರದೆ ಎಳೆದುಕೊಂಡು ಸ್ನಾನ ಮಾಡಬೇಕಾದ ಜಿಂತಾಜನಕ ಸ್ಥಿತಿ ಇದೆ. ಇಲ್ಲಿನ 30 ಮನೆಗಳ ಪೈಕಿ ಕೇವಲ 4ರಿಂದ 5 ಮನೆಗಳಲ್ಲಿ ಮಾತ್ರ ಶೌಚಾಲಯ ಕಾಣಬಹುದು.
‘ಚೀಳಂಗಿ ಗ್ರಾಮದಲ್ಲಿನ ದಲಿತ ಕಾಲೋನಿಯಲ್ಲಿ ವಾಸವಿರುವ ನಮಗೆ ಅಗತ್ಯ ಸೌಲಭ್ಯಗಳು ದೊರಕಿಲ್ಲ. ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಕೊರತೆಗಳನ್ನು ಸರಿಪಡಿಸಬೇಕು. ನಾವೂ ಎಲ್ಲರಂತೆ ಜೀವನ ಸಾಗಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಕ್ರಮ
‘ಇಲ್ಲಿಯ ಸಮಸ್ಯೆ ಬಗೆಹರಿಸಲು ದೊಡ್ಡ ಮೊತ್ತದ ನೆರವಿನ ಅವಶ್ಯಕತೆ ಇದೆ. ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಮಾಡಿಸಲು ಸಿದ್ಧವಿದ್ದೇವೆ. ಆದರೆ, ನಮ್ಮಲ್ಲಿನ ಲಭ್ಯ ಅನುದಾನದಿಂದ ಇಲ್ಲಿನ ಬೇಡಿಕೆಗಳನ್ನು ಪೂರೈಸಲು ಆಗುವುದಿಲ್ಲ. ಇನ್ನು ಚರಂಡಿ ನಿರ್ಮಾಣಕ್ಕೆ ಮುಂದಾದರೆ ಜನರೇ ಅಲ್ಲಿ ಬೇಡ, ಇಲ್ಲಿ ಬೇಡ, ನಮ್ಮ ಮನೆ ಮುಂದೆ ಬೇಡವೆಂದು ಅಡ್ಡಿಪಡಿಸಿರುವ ಉದಾಹರಣೆಗಳೂ ಇವೆ. ಹೀಗಿರುವುದರಿಂದ ಸಮಸ್ಯೆಗಳು ಎದುರಾಗಿವೆ’ ಎಂದು ಗ್ರಾಮ ವ್ಯಾಪ್ತಿಯ ಚಿಕ್ಕಬೆನ್ನೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಚಂದ್ರಕಲಾ ತಿಳಿಸಿದರು.
‘ಇಲ್ಲಿನ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲು ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು’ ಎಂದು ಅವರು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-44-1928462588