ಕಾಳಬೆಳಗುಂದಿ: ಬೆಳೆಹಾನಿ ಗಾಯಕ್ಕೆ ಮದ್ದಾಗದ ‘ಬರ’ ಘೋಷಣೆ, ರೈತರಲ್ಲಿ ಆತಂಕ

ಕಾಳಬೆಳಗುಂದಿ: ಬೆಳೆಹಾನಿ ಗಾಯಕ್ಕೆ ಮದ್ದಾಗದ ‘ಬರ’ ಘೋಷಣೆ, ರೈತರಲ್ಲಿ ಆತಂಕ

ಕಾಳಬೆಳಗುಂದಿ: ಬೆಳೆಹಾನಿ ಗಾಯಕ್ಕೆ ಮದ್ದಾಗದ ‘ಬರ’ ಘೋಷಣೆ, ರೈತರಲ್ಲಿ ಆತಂಕ

ಯಾದಗಿರಿ: ಕಾಳಬೆಳಗುಂದಿ ಗ್ರಾಮದಲ್ಲಿ ಶೇ 100ರಷ್ಟು ಹತ್ತಿ ಬೆಳೆ ಹಾನಿ; ಮೋಟ್ನಳ್ಳಿಯಲ್ಲಿ ಶೇ 100ರಷ್ಟು ಹತ್ತಿ ಬೆಳೆ ಹಾನಿ; ವಡಗೇರಾದ ಐಕೂರದಲ್ಲಿ ಶೇ 100ರಷ್ಟು ತೊಗರಿ ಬೆಳೆ ನಷ್ಟ; ಸುರಪುರದ ಹಾಲಬಾವಿಯಲ್ಲಿ ಶೇ 90ರಷ್ಟು ಹತ್ತಿ ಬೆಳೆ ಬೆಳವಣಿಗೆ ಕುಂಠಿತ, ಹುಣಸಗಿಯ ಕರಿಬಾವಿಯಲ್ಲಿ ಶೇ 100ರಷ್ಟು ಹತ್ತಿ ಬೆಳೆಯ ಮೊಳಕೆ ಪ್ರಮಾಣ ಕುಸಿತ...

ಇದು ಬರ ಅಧ್ಯಯನ ಸಂಬಂಧ ಗ್ರೌಂಡ್ ಟ್ರೂಥಿಂಗ್‌ ವರದಿಯಲ್ಲಿ ಕೃಷಿ ಇಲಾಖೆ ದಾಖಲಿಸಿದ ಮಳೆ ಕೊರತೆಯಿಂದ ಆಗಿರುವ ಬೆಳೆ ನಷ್ಟದ ಅಂಕಿಅಂಶಗಳು. ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಜೂನ್‌ 1ರಿಂದ ಆಗಸ್ಟ್‌ 28ರ ವರೆಗೆ ಶೇ 37ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್‌ನ 28 ದಿನಗಳಲ್ಲಿ ಶೇ 60ರಷ್ಟು ಮಳೆ ಕೊರತೆಯಾಗಿರುವುದು ಜಿಲ್ಲೆಯಲ್ಲಿ ವರುಣನ ಅವಕೃಪೆಗೆ ಹಿಡಿದ ಕನ್ನಡಿಯಾಗಿದೆ.

ಇಷ್ಟೆಲ್ಲ ಇದ್ದರೂ ಜಿಲ್ಲೆಯ ಒಂದೇ ತಾಲ್ಲೂಕನ್ನು(ಶಹಾಪುರ) ಬರಗಾಲ ಪೀಡಿತ ಪಟ್ಟಿಯಲ್ಲಿ ಸೇರಿಸಿ, ಉಳಿದವು ಮಾಡದಿರುವುದರಿಂದ ಆ ತಾಲ್ಲೂಕುಗಳ ರೈತರಲ್ಲಿ ಆತಂಕ ಮೂಡಿದೆ. ಸರ್ಕಾರದ ನಡೆಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಬರಗಾಲದ ಛಾಯೆ ದಟ್ಟವಾಗಿ, ಮಳೆ ಕೊರತೆಗೆ ಹಲವೆಡೆಗಳಲ್ಲಿ ಬೆಳೆ ಹಾಳಾಗಿದೆ. ಇದರಿಂದ ಕಂಗೆಟ್ಟ ರೈತರು ಬೆಳೆದ ಬೆಳೆಯನ್ನು ನಾಶಪಡಿಸಿ ಆರ್ಥಿಕ ಸಂಕಷ್ಟಕ್ಕೂ ಸಿಲುಕುತ್ತಿದ್ದಾರೆ.

ಕಳೆದ ವರ್ಷ ಅತಿವೃಷ್ಟಿ ಹಾಗೂ ಭೀಮಾ ನದಿ ಪ್ರವಾಹದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಇನ್ನೂ ಅದರಿಂದ ಹೊರಬರಲು ಆಗಿಲ್ಲ. ಈ ವರ್ಷದ ಮಳೆ ಕೊರತೆಯು ಮತ್ತಷ್ಟು ಬಾಧೆ ತರಿಸಿದೆ. ಸರ್ಕಾರದ ಬರ ಪಟ್ಟಿಯಲ್ಲಿ ತಮ್ಮ ತಾಲ್ಲೂಕುಗಳು ಇಲ್ಲದೆ ಇರುವುದು ಅತಿವೃಷ್ಟಿಯ ಗಾಯದ ಮೇಲೆ ಬರದ ಬರೆ ಎಳೆದಂತೆ ಆಗಿದೆ ಎನ್ನುತ್ತಾರೆ ರೈತರು.

ಬಿದ್ದ ಅಲ್ಪಸ್ವಲ್ಪ ಮಳೆ, ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆಯ ನಡುವೆಯೂ ಜಿಲ್ಲೆಯಲ್ಲಿ ಶೇ 91.52ರಷ್ಟು ಪ್ರದೇಶ ಬಿತ್ತನೆಯಾಗಿದೆ. ಒಂದೆಡೆ ಬಸವಸಾಗರ ಜಲಾಶಯ ಭರ್ತಿ, ಮತ್ತೊಂದೆಡೆ ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಭೀಮಾ ನದಿ ತುಂಬಿ ಹರಿದು, ಸೇತುವೆ ಸಹಿತ ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ಬಿತ್ತನೆ ಪ್ರಮಾಣವೂ ಹೆಚ್ಚಾಗಿದೆ. ಮಳೆಯನ್ನೇ ಆಶ್ರಯಿಸಿರುವ ರೈತರ ಆತಂಕ ದೂರಾಗಿಲ್ಲ.

ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಅದರಲ್ಲಿ 89 ತಾಲ್ಲೂಕುಗಳಲ್ಲಿ ತೀವ್ರ ಬರ ಹಾಗೂ 12 ತಾಲ್ಲೂಕುಗಳಲ್ಲಿ ಸಾಧಾರಣ ಬರವಿದೆ. ಶಹಾಪುರ ತಾಲ್ಲೂಕೊಂದು ಮಾತ್ರವೇ ತೀವ್ರ ಬರ ಪಟ್ಟಿಯಲ್ಲಿದೆ. ಶಹಾಪುರಕ್ಕಿಂತ ಅಧಿಕ ಮಳೆ ಕೊರತೆ ಇರುವ ಯಾದಗಿರಿ (ಶೇ 54) ತಾಲ್ಲೂಕು ಹಾಗೂ ಶೇ 44ರಷ್ಟು ಅಭಾವ ಇರುವ ಗುರುಮಠಕಲ್, ಶೇ 35ರಷ್ಟು ಕೊರತೆಯ ಸುರಪುರ ಸೇರಿಸದ ಬಗ್ಗೆಯೂ ರೈತರು, ರೈತ ಮುಖಂಡರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಬಾಡುತ್ತಿರುವ ಬೆಳೆಗಳು: ವಡಗೇರಾ ತಾಲ್ಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಮಳೆ ಇಲ್ಲದೆ, ಮಣ್ಣಿನಲ್ಲಿ ತೇವಾಂಶವು ಮಾಯವಾಗಿ ಹತ್ತಿ, ತೊಗರಿ ಬೆಳೆಗಳು ಬಾಡುತ್ತಿವೆ. ಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗದೆ ರೈತರು ಹಣೆಯ ಮೇಲೆ ಕೈಯಿಟ್ಟು ಮುಂದೇನು ಎಂಬ ಚಿಂತೆಯಲ್ಲಿ ಇದ್ದಾರೆ.

ಪೂರಕ ಮಾಹಿತಿ: ಭೀಮಶೇನರಾವ್ ಕುಲಕರ್ಣಿ, ವಾಟ್ಕರ್ ನಾಮದೇವ, ಪವನ ಕುಲಕರ್ಣಿ, ಎಂ.ಪಿ.ಚಪೆಟ್ಲಾ.

ಮಳೆಯಾಶ್ರಿತ ಗ್ರಾಮಗಳಲ್ಲಿ ಬೆಳೆ ಹಾನಿ

ಹುಣಸಗಿ: ತಾಲ್ಲೂಕಿನ ಮಳೆಯಾಶ್ರಿತ ಗುಂಡಲಗೇರಿ, ಕರಿಬಾವಿ, ಕೊಳಿಹಾಳ, ಅಗ್ನಿ, ಮಾರಲಬಾವಿ, ರಾಜನಕೋಳೂರು ಸೇರಿದಂತೆ ಇತರ ಗ್ರಾಮಗಳಲ್ಲಿನ ಬೆಳೆಗಳು ಮಳೆ ಕೊರತೆಗೆ ಬೆಳವಣಿಗೆ ಕುಂಠಿತವಾಗಿದ್ದು, ಅಲ್ಲಲ್ಲಿ ಒಣಗಿವೆ.

ಮಂಜುಳಮಲಾಪುರ, ಶ್ರೀನಿವಾಸಪುರ, ಕನಗಂಡನಹಳ್ಳಿ ವ್ಯಾಪ್ತಿಯಲ್ಲಿ ತೇವಾಂಶ ಇಲ್ಲದೆ ಬೆಳೆಗಳು ಕಮರಿಹೋಗಿವೆ. ಎರಡ್ಮೂರು ಬಾರಿ ಕುಂಟಿ ಹೊಡೆದರೂ ಪ್ರಯೋಜನವಾಗಿಲ್ಲ ಎಂದು ರೈತ ಪರಮಣ್ಣ ನೀಲಗಲ್ ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಬರಬೇಕು. ಬೆಳೆ ಸಾಲ ಮನ್ನಾ ಮಾಡಿ, ಬೆಳೆ ಹಾನಿಯ ಪರಿಹಾರವೂ ನೀಡಬೇಕು’ ಎನ್ನುತ್ತಾರೆ ಜೆಡಿಎಸ್ ನಾಯಕರಾದ ಶಶಿಕಲಾ ಬಿರಾದಾರ, ಶಿವಪ್ಪ ಸದಬ, ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ.

ಗುರುಮಠಕಲ್‌: ‘ಎರಡು ಸಲ ಬಿತ್ತಿದ ಬೀಜ ಮಣ್ಣುಪಾಲಾಗಿದೆ. ಅಳಿದು ಉಳಿದ ಬೆಳೆಗಳಲ್ಲಿ ಜೀವಕಳೆ ಇಲ್ಲ. ರೈತರೆಂದರೆ ಎಲ್ಲಾ ತಾಲ್ಲೂಕಿನವರೂ ಒಂದೇ ಅಲ್ಲವೆ? ಬರದ ಘೋಷಣೆಯಲ್ಲಿ ನಮ್ಮ ತಾಲ್ಲೂಕಿನ ಮೇಲೆ ಸರ್ಕಾರ ಮಲತಾಯಿ ಧೋರಣೆ ತೋರಿದ್ದು, ರೈತರ ಕಣ್ಣೀರಿನ ನೋವು ಅವರಿಗೆ (ಸರ್ಕಾರ) ಖಂಡಿತ ತಟ್ಟುತ್ತದೆ’ ಎಂದು ನೋವಿನಿಂದ ನುಡಿದು ರೈತ ನರಸಪ್ಪ ಸರ್ಕಾರಕ್ಕೆ ಶಾಪ ಹಾಕಿದರು.

‘ನಮ್ಮ ಭಾಗದಲ್ಲಿ ಶೇ 44ರಷ್ಟು ಮಳೆ ಕೊರತೆಯಿದೆ. ಇದರಿಂದಾಗಿ ಬೆಳೆಗಳ ಸ್ಥಿತಿಯೂ ಚಿಂತಾಜನಕವಾಗಿದೆ. ಮಳೆ ಕೊರತೆ ಶೇ 60ರಷ್ಟು ಇರಬೇಕು ಎಂಬ ನೆಪ ಹೇಳಿ ಬೆಳೆ ನಷ್ಟವಾದರೂ ಸರ್ಕಾರ ಬರ ಘೋಷಿಸದೆ ನುಣಿಚಿಕೊಳ್ಳಲು ಯತ್ನಿಸುತ್ತಿದೆ’ ಎಂದು ದೂರಿದರು.

‘ಸತತ ಮೂರು ವಾರ ಮಳೆ ಸುರಿಯದ ನಿಯಮವೂ ವಿಚಿತ್ರವಾಗಿದೆ. 20 ದಿನ ಮಳೆ ಸುರಿಯದಂತಿದ್ದು, 21ನೇ ದಿನ ನೆಪ ಮಾತ್ರಕ್ಕೆ ತುಂತುರು ಹನಿಸಿದರೆ ಬೆಳೆ ಬೆಳೆಯಲು ಸಾಧ್ಯವೇ? ಇಂತಹ ಅವೈಜ್ಞಾನಿಕ ನಿಯಮಗಳಿಂದ ರೈತರ ಕಣ್ಣೀರಿನ ಕಥೆಗೆ ಕೊನೆ ಇಲ್ಲದಂತೆ ಆಗುತ್ತಿದೆ’ ಎನ್ನುತ್ತಾರೆ ಕೃಷಿಕ ಸದಾಶಿವರೆಡ್ಡಿ ಗುಂಡುಕಾಟಿ.

ಒಣಗುತ್ತಿರುವ ತೊಗರಿ ಬೆಳೆ

ಕೆಂಭಾವಿ: ಮಳೆಗಾಲ ಶುರುವಾಗಿ ಮೂರು ತಿಂಗಳಾದರೂ ಸಮರ್ಪಕ ಮಳೆ ಬಾರದೆ ಕೆಂಭಾವಿ ವಲಯದ ಹಲವು ಗ್ರಾಮಗಳ ಬೆಳೆಗಳು ಒಣಗುತ್ತಿದೆ. ಸುರಪುರ ತಾಲ್ಲೂಕು ಬರ ಪಟ್ಟಿಯಲ್ಲಿ ಇಲ್ಲದೆ ಇರುವುದು ರೈತರಿಗೆ ನಿರಾಸೆಯಾಗಿದೆ.

ಮಳೆ ಬಾರದೆ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಕಳೆ ತೆಗೆಯಲು, ಕ್ರಿಮಿನಾಶಕ ಸಿಂಪರಣೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡದೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂಬುದು ರೈತರ ದೂರು.

‘ಸರ್ಕಾರಕ್ಕೆ ಸರಿಯಾದ ವರದಿ ಸಲ್ಲಿಕೆ’

‘ಮಳೆ ಕೊರತೆ ಹಾಗೂ ಅದರಿಂದ ಹಾನಿಯಾದ ಬೆಳೆಗಳ ಅಧ್ಯಯನಕ್ಕಾಗಿ ಕೃಷಿ ಇಲಾಖೆಯ ಸಿಬ್ಬಂದಿ 48 ಗ್ರಾಮಗಳಲ್ಲಿ ಗ್ರೌಂಡ್ ಟ್ರೂಥಿಂಗ್‌ ಮಾಡಿ, ಹಾನಿಯಾದ ಬೆಳೆಗಳ ಚಿತ್ರಣ ಸಹಿತ ಜಿಪಿಎಸ್ ಫೋಟೊಗಳನ್ನು ಬರ ಅಧ್ಯಯನ ವರದಿಯಲ್ಲಿ ದಾಖಲಿಸಿ ಸರ್ಕಾರಕ್ಕೆ ಸರಿಯಾಗಿ ವರದಿ ಸಲ್ಲಿಕೆ ಮಾಡಲಾಗಿದೆ’ ಎಂದು ಜಂಟಿ‌ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರು‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಯೊಂದು ತಾಲ್ಲೂಕುಗಳ 8 ಗ್ರಾಮಗಳಲ್ಲಿ ಗ್ರೌಂಡ್ ಟ್ರೂಥಿಂಗ್‌ ನಡೆಸಿ, ತಾಲ್ಲೂಕುವಾರು ಆಗಿರುವ ಮಳೆಯ ಕೊರತೆ, ಬೆಳೆ ಹಾನಿ, ಬೆಳವಣಿಗೆಯ ಪ್ರಮಾಣವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎರಡನೇ ಪಟ್ಟಿಯಲ್ಲಿ ಇನ್ನಷ್ಟು ತಾಲ್ಲೂಕುಗಳು ಸೇರ್ಪಡೆಯಾಗಲಿವೆ. ಜಿಲ್ಲಾ ಉಸ್ತವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಸಹ ಬೆಳೆ ಹಾನಿ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ’ ಎಂದರು.

ತಾಲ್ಲೂಕುವಾರು ಮಳೆ ಕೊರತೆ ಹಾಗೂ ಬಿತ್ತನೆ(ಶೇಕಡ)

ತಾಲ್ಲೂಕುಗಳು;ಮಳೆ ಕೊರತೆ;ಬಿತ್ತನೆ

(ಜೂನ್‌1ರಿಂದ ಆಗಸ್ಟ್‌ 28ರ ವರೆಗೆ)

ಕಂದಾಯ ಇಲಾಖೆಯ ಅಧಿಕಾರಿಗಳ ಜತೆ ಸೇರಿ ಎರಡ್ಮೂರು ದಿನಗಳಲ್ಲಿ ವಡಗೇರಾ ಹೋಬಳಿಯ ಬೆಳೆಗಳ ಸಮೀಕ್ಷೆ ಹಾಗೂ ಸ್ಥಿತಿಗತಿಯ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಗಣಪತಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಡಗೇರಾ<p class="quote">ಮಳೆ ಕೊರತೆಯಿಂದ ಶೇ 90ಕ್ಕೂ ಹೆಚ್ಚಿನ ರೈತರ ಬೆಳೆ ನಾಶವಾಗಿದೆ. ಕೈಹಿಡಿಯಬೇಕಿದ್ದ ಸರ್ಕಾರದ ಮಲತಾಯಿ ಧೋರಣೆ ಸರಿಯಲ್ಲ. ಕೂಡಲೇ ಬರ ಘೋಷಿಸದಿದ್ದರೆ ಹೋರಾಟಕ್ಕೆ ಇಳಿಯುತ್ತೇವೆ <br/>ಭೀಮರಾಯ ವೆಂಕಟರಾಯನೋರ <span class="Designate">ರೈತ ಸಂಘ ಗುರುಮಠಕಲ್ ತಾಲ್ಲೂಕು ಅಧ್ಯಕ್ಷ</span></p>

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-30-1080522804

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ