
ನೇಪಾಳ ಪ್ರವಾಹ: ₹10 ಕೋಟಿ ನೆರವು ನೀಡಿದ ದಕ್ಷಿಣ ಕೊರಿಯಾ ಪಾಪ್ ಗಾಯಕ ಲೀ
ಉತ್ತರ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ನೂರಾರು ಜನರ ಬದುಕನ್ನೇ ಕಸಿದಿದೆ. ಮನೆ, ನೆಲೆ ಕಳೆದುಕೊಂಡಿರುವವರಿಗೆ ಜಗತ್ತಿನ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ.
ದಕ್ಷಿಣ ಕೊರಿಯಾದ ಬಾಯ್ ಬಾಂಡ್ ‘ಸ್ಟ್ರೇ ಕಿಡ್ಸ್’ನ ಪಾಪ್ ಗಾಯಕ ಲೀ ನೋ, ನೇಪಾಳ ಜನರ ಕಷ್ಟಕ್ಕೆ ಸ್ಪಂದಿಸಿ ₹10 ಕೋಟಿ ನೆರವು ನೀಡಿದ್ದಾರೆ. ‘ವರ್ಲ್ಡ್ ವಿಷನ್’ ಎನ್ನುವ ಮಾನವೀಯ ನೆರವು ಸಂಸ್ಥೆಯ ಮೂಲಕ ಲೀ ಹಣವನ್ನು ನೀಡಿದ್ದಾರೆ.
‘ಈ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವವರಿಗೆ ನನ್ನ ಬೆಂಬಲವು ಸ್ವಲ್ಪ ಮಟ್ಟಿಗಾದರೂ ಶಕ್ತಿಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಲೀ ನೋ ಭಾನುವಾರ ಜೆವೈಪಿ ಎಂಟರ್‌ಟೈನ್‌ಮೆಂಟ್ ಮೂಲಕ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರವಾಹದಿಂದ ಬಾಧಿತರಾದವರು ಹಾಗೂ ಸ್ಥಳದಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಪ್ರತಿಯೊಬ್ಬರೂ ಆದಷ್ಟು ಬೇಗ ನೆಮ್ಮದಿಯ ಜೀವನಕ್ಕೆ ಮರಳುವಂತಾಗಲಿ ಎಂದು ಆಶಿಸುತ್ತೇನೆ’ ಎಂದು ಲೀ ಹೇಳಿದ್ದಾರೆ.
‘ಸ್ಟ್ರೇ ಕಿಡ್ಸ್’ ಸದಸ್ಯರು 2024ರಿಂದ ‘ವರ್ಲ್ಡ್ ವಿಷನ್’ ಮೂಲಕ ಸಂಕಷ್ಟದಲ್ಲಿರುವ ಜಗತ್ತಿನ ವಿವಿಧ ದೇಶಗಳಿಗೆ ನೆರವು ನೀಡುತ್ತಿದ್ದಾರೆ.
ಲೀ ಮಿನ್-ಹೋ ಅವರು ಲೀ ನೋ ಎಂದೇ ಹೆಚ್ಚು ಪರಿಚಿತರಾಗಿದ್ದು, ಗಾಯನ, ನೃತ್ಯದ ಮೂಲಕ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
900 ದಾಟಿದ ಮೃತರ ಸಂಖ್ಯೆ
ನೇಪಾಳದಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 903ಕ್ಕೆ ಏರಿಕೆಯಾಗಿದೆ. 2,500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಹಲವು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರವಾಹಪೀಡಿತ ಪ್ರದೇಶದಿಂದ 8,730 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.