ಬರದ ನಡುವೆ 12 ಕ್ವಿಂಟಾಲ್‌ ಗೋಡಂಬಿ ಬೆಳೆದ ದಂಪತಿ; 4 ಎಕರೆಯಲ್ಲಿ ವೈವಿಧ್ಯಮಯ ಬೆಳೆ

ಬರದ ನಡುವೆ 12 ಕ್ವಿಂಟಾಲ್‌ ಗೋಡಂಬಿ ಬೆಳೆದ ದಂಪತಿ; 4 ಎಕರೆಯಲ್ಲಿ ವೈವಿಧ್ಯಮಯ ಬೆಳೆ

ಬರದ ನಡುವೆ 12 ಕ್ವಿಂಟಾಲ್‌ ಗೋಡಂಬಿ ಬೆಳೆದ ದಂಪತಿ; 4 ಎಕರೆಯಲ್ಲಿ ವೈವಿಧ್ಯಮಯ ಬೆಳೆ

ಶಿಡ್ಲಘಟ್ಟ : “ಒಂದೇ ಬೆಳೆಯ ಮೇಲೆ ನಂಬಿಕೆ ಇಡುವುದಕ್ಕಿಂತ, ಇರುವ ನೀರಿಗೆ ತಕ್ಕಂತೆ ಹಲವು ಬೆಳೆಗಳನ್ನು ಬೆಳೆಸಿಕೊಂಡರೆ ಕೃಷಿಯಲ್ಲಿನ ಅಪಾಯವನ್ನು ಕಡಿಮೆ ಮಾಡಬಹುದು. ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ನೀರಿನ ಸದ್ಬಳಕೆ, ಬೆಳೆ ವೈವಿಧ್ಯ ಮತ್ತು ನಮ್ಮ ಶ್ರಮವೇ ಬರದ ನಡುವೆಯೂ ತೋಟವನ್ನು ಉಳಿಸಿಕೊಳ್ಳಲು ನೆರವಾಗಿವೆ” ಎಂದು ತಮ್ಮ ಕೃಷಿ ಅನುಭವದಿಂದ ಹೇಳುತ್ತಾರೆ ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯ ರೈತ ನಾಗರಾಜ್.

ನಾಲ್ಕು ಎಕರೆಯಲ್ಲಿ ಹಣ್ಣು, ತರಕಾರಿ, ಹೂವು, ಸಾಂಬಾರ ಬೆಳೆಗಳ ಜತೆಗೆ ಕುರಿ ಸಾಕಾಣಿಕೆಯನ್ನೂ ಸಮನ್ವಯಗೊಳಿಸಿಕೊಂಡಿರುವ ನಾಗರಾಜ್‌–ಚನ್ನಕೃಷ್ಣಮ್ಮ ದಂಪತಿ, ಲಭ್ಯವಿರುವ ನೀರು ಮತ್ತು ಸಂಪನ್ಮೂಲಗಳಲ್ಲೇ ಕೃಷಿಯ ಹಲವು ಸಾಧ್ಯತೆಗಳನ್ನು ಕಂಡುಕೊಂಡಿದ್ದಾರೆ. ತೋಟದ ಕೆಲಸದಿಂದ ಹಿಡಿದು ಕೃಷಿ ಉಪಕರಣಗಳ ತಯಾರಿಕೆ, ನಿರ್ವಹಣೆಯವರೆಗೆ ಸಾಧ್ಯವಾದಷ್ಟು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಬರದ ವರ್ಷಗಳಲ್ಲಿ ಕೃಷಿ ಎಂದರೆ ನೀರಿನ ಲೆಕ್ಕಾಚಾರ, ಬೆಳೆ ಆಯ್ಕೆಯ ಗೊಂದಲ ಮತ್ತು ಆದಾಯದ ಅನಿಶ್ಚಿತತೆ. ಆದರೆ ತಾಲ್ಲೂಕಿನ ಗುಡಿಹಳ್ಳಿಯ ನಾಗರಾಜ್‌ ಮತ್ತು ಚನ್ನಕೃಷ್ಣಮ್ಮ ದಂಪತಿಯ ನಾಲ್ಕು ಎಕರೆ ತೋಟಕ್ಕೆ ಕಾಲಿಟ್ಟರೆ ಚಿತ್ರವೇ ಬೇರೆ. ಒಂದೇ ಬೆಳೆಯನ್ನು ನೆಚ್ಚಿಕೊಂಡಿರುವ ಜಮೀನಿನ ಬದಲು, ಹಣ್ಣು, ತರಕಾರಿ, ಹೂವು, ಸಾಂಬಾರ ಪದಾರ್ಥ, ಮೇವು ಹಾಗೂ ಪಶುಸಾಕಣೆಯನ್ನು ಒಳಗೊಂಡಿರುವ ವೈವಿಧ್ಯಮಯ ಕೃಷಿ ವ್ಯವಸ್ಥೆ ಇಲ್ಲಿ ಕಾಣಿಸುತ್ತದೆ. ಇರುವ ನೀರನ್ನು ಮಿತವಾಗಿ ಬಳಸಿಕೊಂಡು, ಸಾಧ್ಯವಾದಷ್ಟು ತೋಟದ ಕೆಲಸಗಳನ್ನು ತಾವೇ ನಿರ್ವಹಿಸುತ್ತಿರುವುದು ಈ ದಂಪತಿಯ ಕೃಷಿಯ ವಿಶೇಷತೆ.

ನಾಗರಾಜ್‌ ಮತ್ತು ಚನ್ನಕೃಷ್ಣಮ್ಮ ಅವರ ಮನೆ ತೋಟದೊಳಗೇ ಇದೆ. ಮನೆಯ ಸುತ್ತಮುತ್ತ ಹೆಜ್ಜೆಹಾಕಿದಷ್ಟೂ ಒಂದಲ್ಲೊಂದು ಗಿಡ ಕಣ್ಣಿಗೆ ಬೀಳುತ್ತದೆ. 20ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳು ಹಾಗೂ 40ಕ್ಕೂ ಹೆಚ್ಚು ಹೂಗಿಡಗಳು ಮನೆಯ ಪರಿಸರವನ್ನು ಆವರಿಸಿವೆ.

ಕಸ್ತೂರಿ ಬಾಳೆ, ಚಂದ್ರಬಾಳೆ, ಕಾಫಿ, ಹಲಸು, ಸೇಬು, ಕಬ್ಬು, ಶುಂಠಿ, ಪೈನಾಪಲ್‌, ಎರಡು ಬಗೆಯ ಸೀಬೆ, ನೇರಳೆ, ಸಪೋಟ, ಮೋಸಂಬಿ, ದಾಳಿಂಬೆ, ನಿಂಬೆ, ಅಡಿಕೆ, ಏಲಕ್ಕಿ, ಲವಂಗ, ಮೆಣಸು, ಬಳ್ಳಿ ಆಲೂಗಡ್ಡೆ, ಬಟರ್‌ಫ್ರೂಟ್‌, ಎಗ್‌ಫ್ರೂಟ್‌, ಡ್ರಾಗನ್‌ಫ್ರೂಟ್‌, ಕಿತ್ತಳೆ, ಸೀತಾಫಲ, ರಾಮಫಲ, ಹನುಮಫಲ, ಸ್ಟಾರ್‌ಫ್ರೂಟ್‌, ಕರಿಬೇವು, ಸೋಂಪು, ನುಗ್ಗೆ, ಪನ್ನೇರಳೆ, ಸ್ಟ್ರಾಬೆರಿ, ಲಿಚ್ಚಿ ಸೇರಿದಂತೆ ಹಲವು ಬಗೆಯ ಸಸ್ಯಗಳನ್ನು ಬೆಳೆಸಿದ್ದಾರೆ.

ಹೂವಿನ ವಿಭಾಗವೂ ಕಡಿಮೆಯಿಲ್ಲ. ಐದು ವಿಧದ ಮಲ್ಲಿಗೆ, ನಂದಿವರ್ಧನ, ಹಲವು ಬಗೆಯ ದಾಸವಾಳ, ಡೇರಾ, ಪುದೀನಾ, ಮೂರು ವಿಧದ ತುಳಸಿ, ಪಾರಿಜಾತ, ಬ್ರಹ್ಮಕಮಲ, ಸದಾಪುಷ್ಪ, ಶಂಖಪುಷ್ಪ, ಅಷ್ಟಲಕ್ಷ್ಮಿ ಗಿಡ, ಗ್ಲಾಡಿಯೋಲಸ್‌ ಸೇರಿದಂತೆ ವಿವಿಧ ಹೂ ಹಾಗೂ ಅಲಂಕಾರಿಕ ಸಸ್ಯಗಳು ತೋಟದಲ್ಲಿವೆ.

ಒಂದೇ ಜಮೀನಿನಲ್ಲಿ ಹಲವು ಆದಾಯದ ದಾರಿಗಳು

ನಾಲ್ಕು ಎಕರೆ ತೋಟದಲ್ಲಿ ಹಿಪ್ಪುನೇರಳೆ ಸೊಪ್ಪಿನ ನಡುವೆ 45 ಮಾವಿನ ಗಿಡಗಳನ್ನು ಬೆಳೆಸಿದ್ದಾರೆ. ಜತೆಗೆ 160 ಗೋಡಂಬಿ ಮರಗಳು ಮತ್ತು 40 ತೆಂಗಿನ ಮರಗಳು ಇವೆ. ಕಳೆದ ವರ್ಷ ಗೋಡಂಬಿಯಿಂದ ಸುಮಾರು 12 ಕ್ವಿಂಟಾಲ್‌ ಫಸಲು ಪಡೆದಿದ್ದಾರೆ.

ತೋಟದ ಒಂದು ಭಾಗದಲ್ಲಿ ಅವರೆಕಾಯಿ, ಮನೆಯ ಸಮೀಪ ದುಂಡು ಬದನೆ ಸೇರಿದಂತೆ ತರಕಾರಿ ಬೆಳೆಗಳಿವೆ. ತೋಟದ ಬದಿಯಲ್ಲಿ ಸೀಮೆಹುಲ್ಲು ಬೆಳೆಸಿಕೊಂಡಿದ್ದು, 10 ಕುರಿಗಳ ಸಾಕಾಣಿಕೆಗೂ ಅದನ್ನು ಬಳಸಿಕೊಳ್ಳುತ್ತಿದ್ದಾರೆ.

ಮೂರು ವಿಧದ ಮೆಣಸಿನಕಾಯಿ—ಗುಂಟೂರು, ಬ್ಯಾಡಗಿ ಮತ್ತು ಲಿಚಿ ಮೆಣಸಿನಕಾಯಿ—ಬೆಳೆಸಿ, ಒಣಗಿಸಿ ಮಾರಾಟ ಮಾಡುತ್ತಾರೆ. ಹೀಗಾಗಿ ಒಂದು ಬೆಳೆಯ ಇಳುವರಿ ಅಥವಾ ಬೆಲೆಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗದೆ, ಬೇರೆ ಬೇರೆ ಬೆಳೆಗಳಿಂದ ಆದಾಯದ ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ತೋಟದ ಕೆಲಸಕ್ಕೆ ಹೊರಗಿನ ಅವಲಂಬನೆ ಕಡಿಮೆ

ಕೃಷಿ ಕೆಲಸದ ಜತೆಗೆ ಉಪಕರಣಗಳ ವಿಚಾರದಲ್ಲಿಯೂ ನಾಗರಾಜ್‌ ಸ್ವಾವಲಂಬನೆಯ ದಾರಿ ಹಿಡಿದಿದ್ದಾರೆ. ಮನೆಯ ಹಿಂಭಾಗದಲ್ಲೇ ಕುಲುಮೆ ಮಾಡಿಕೊಂಡಿದ್ದು, ಚನಕೆ, ಗುದ್ದಲಿ, ಹಾರೆ ಸೇರಿದಂತೆ ಕೆಲವು ಕೃಷಿ ಉಪಕರಣಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ.

ಕಟಿಂಗ್‌ ಮೆಷಿನ್‌, ಡ್ರಿಲ್ಲಿಂಗ್‌ ಮೆಷಿನ್‌, ಸಾಣೆ ಮೆಷಿನ್‌ ಸೇರಿದಂತೆ ಮರಗೆಲಸ ಮತ್ತು ಕಬ್ಬಿಣದ ಕೆಲಸಕ್ಕೆ ಬೇಕಾದ ಹಲವು ಉಪಕರಣಗಳು ಅವರಲ್ಲಿವೆ. ಕೃಷಿಗೆ ಬೇಕಾದ ದುರಸ್ತಿ ಹಾಗೂ ಸಣ್ಣಪುಟ್ಟ ತಯಾರಿ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

ತೋಟಕ್ಕೆ ಗೊಬ್ಬರ ಹಾಗೂ ಔಷಧಿ ಸಿಂಪಡಿಸುವ ಕೆಲಸಕ್ಕೂ ಟ್ರ್ಯಾಕ್ಟರ್‌ ಬಳಸುತ್ತಾರೆ. ಸಾಧ್ಯವಾದಷ್ಟು ತೋಟದ ಕೆಲಸಗಳನ್ನು ನಾಗರಾಜ್‌ ಮತ್ತು ಚನ್ನಕೃಷ್ಣಮ್ಮ ಅವರೇ ನಿರ್ವಹಿಸುತ್ತಾರೆ. ಕೃಷಿಯಲ್ಲಿನ ಶ್ರಮದ ಜತೆಗೆ, ಕೃಷಿಗೆ ಬೇಕಾದ ಸಾಧನಗಳನ್ನೂ ಸ್ವತಃ ನಿರ್ವಹಿಸಿಕೊಳ್ಳುವ ಈ ಕ್ರಮ ಅವರ ಖರ್ಚು ಮತ್ತು ಹೊರಗಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ