ಬಳ್ಳಾರಿ: ಪ್ರತಿ ಶನಿವಾರ ‘ಪ್ರಜಾಸೇವೆ ಆಂದೋಲನ’

ಬಳ್ಳಾರಿ: ಪ್ರತಿ ಶನಿವಾರ ‘ಪ್ರಜಾಸೇವೆ ಆಂದೋಲನ’

ಬಳ್ಳಾರಿ: ಪ್ರತಿ ಶನಿವಾರ ‘ಪ್ರಜಾಸೇವೆ ಆಂದೋಲನ’

ಬಳ್ಳಾರಿ: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಪ್ರಜಾಸೇವೆ ಆಂದೋಲನ’ ಸಭೆಗಳನ್ನು ಆಯೋಜಿಸಲು ಮಾರ್ಗಸೂಚಿ ಪ್ರಕಟಿಸಿದೆ. ಇನ್ನುಮುಂದೆ ಪ್ರತಿ ತಿಂಗಳ ಎಲ್ಲಾ ಶನಿವಾರ (2ನೇ ಮತ್ತು 4ನೇ ಶನಿವಾರವೂ ಸೇರಿದಂತೆ) ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಈ ಆಂದೋಲನ ಸಭೆಗಳು ಕಡ್ಡಾಯವಾಗಿ ನಡೆಯಲಿವೆ.

ಈ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಸಾರ್ವಜನಿಕರ ದೂರುಗಳನ್ನು ಸ್ಥಳದಲ್ಲೇ ಸ್ವೀಕರಿಸಿ, ಆನ್‌ಲೈನ್ ಮೂಲಕ ಶೀಘ್ರ ವಿಲೇವಾರಿ ಮಾಡಲು ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.

ಸಭೆಯ ರೂಪುರೇಷೆ ಮತ್ತು ವೇಳಾಪಟ್ಟಿ: 1ನೇ ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ತಾಲ್ಲೂಕು ಮಟ್ಟದ ಸಭೆಗಳು ಜರುಗಲಿವೆ. 2ನೇ ಮತ್ತು 4ನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತದೆ.

ಅಧಿಕಾರಿಗಳ ಕಡ್ಡಾಯ ಭಾಗಿ: ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.

ಮನೆ-ಮನೆಗೆ ತಲುಪಲಿದೆ ಅರ್ಜಿ ಲಕೋಟೆ: ಸಾರ್ವಜನಿಕರ ಅನುಕೂಲಕ್ಕಾಗಿ ಸಭೆ ನಡೆಯುವ 15 ದಿನಗಳ ಮುಂಚಿತವಾಗಿಯೇ ಕ್ಷೇತ್ರ ಮಟ್ಟದ ಸಿಬ್ಬಂದಿ ಮೂಲಕ ಸಾರ್ವಜನಿಕರ ಮನೆ-ಮನೆಗೆ ಪೂರ್ವ ಮುದ್ರಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಪಟ್ಟಿ ಇರುವ ಲಕೋಟೆಯನ್ನು ತಲುಪಿಸಲಾಗುತ್ತದೆ.

ಸ್ಥಳದಲ್ಲೇ ಆನ್‌ಲೈನ್ ನೋಂದಣಿ ಮತ್ತು ಸ್ವೀಕೃತಿ: ಸಭೆ ನಡೆಯುವ ಸ್ಥಳಗಳಲ್ಲಿ ಗಣಕಯಂತ್ರ, ಇಂಟರ್ನೆಟ್ ಹಾಗೂ ಪ್ರಿಂಟರ್ ವ್ಯವಸ್ಥೆಯೊಂದಿಗೆ ವಿವಿಧ ಇಲಾಖಾವಾರು ಕೌಂಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ಸ್ವೀಕರಿಸಿದ ಪ್ರತಿಯೊಂದು ಅರ್ಜಿಯನ್ನು ipgrs.karnataka.gov.in ಪೋರ್ಟಲ್‌ನಲ್ಲಿ ತಕ್ಷಣವೇ ನೋಂದಾಯಿಸಿ, ಅರ್ಜಿದಾರರಿಗೆ ವಿಶಿಷ್ಟ ಸಂಖ್ಯೆಯುಳ್ಳ ಸ್ವೀಕೃತಿ ನೀಡಲಾಗುತ್ತದೆ. ಸಾರ್ವಜನಿಕರು ತಮ್ಮ ಅರ್ಜಿಯ ಸ್ಥಿತಿಗತಿಯನ್ನು ‘ರಿಯಲ್ ಟೈಮ್’ನಲ್ಲಿ ತಿಳಿಯಲು ವ್ಯವಸ್ಥೆ ಮಾಡಲಾಗಿದೆ.

ಸಭೆ ನಡೆಯುವ ದಿನದಂದು ಸಂಬಂಧಪಟ್ಟ ಇಲಾಖೆಗಳು ಬೇರೆ ಯಾವುದೇ ಸಭೆಗಳನ್ನು ನಿಗದಿಪಡಿಸುವಂತಿಲ್ಲ.

ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ: ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ತಾಲ್ಲೂಕು ಮಟ್ಟದ ಸಭೆಗೆ ₹5 ಲಕ್ಷ, ಇತರೆ ತಾಲ್ಲೂಕು ಸಭೆಗಳಿಗೆ ₹1 ಲಕ್ಷ ಹಾಗೂ ಹೋಬಳಿ ಮಟ್ಟದ ಸಭೆಗಳಿಗೆ ₹50 ಸಾವಿರ ಅನುದಾನವನ್ನು ಒದಗಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಅಲ್ಲದೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡಿ, ಶುಕ್ರವಾರ ರಾತ್ರಿ ವಿದ್ಯಾರ್ಥಿನಿಲಯ/ವಸತಿ ಶಾಲೆಗಳಲ್ಲಿ ವಾಸ್ತವ್ಯ ಮಾಡಿ, ಶನಿವಾರ ನಡೆಯುವ ‘ಪ್ರಜಾಸೇವೆ ಆಂದೋಲನ’ದಲ್ಲಿ ಭಾಗವಹಿಸುವುದು ಕಡ್ಡಾಯಗೊಳಿಸಲಾಗಿದೆ.

ಸ್ವೀಕೃತವಾದ ಅರ್ಜಿಗಳ ಪ್ರಗತಿಯನ್ನು ಪ್ರತಿ ಬುಧವಾರ ಜಿಲ್ಲಾಧಿಕಾರಿ ಪರಿಶೀಲಿಸಲಿದ್ದಾರೆ. ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿಯಾಗದಿದ್ದಲ್ಲಿ ಸ್ವಯಂಚಾಲಿತವಾಗಿ ಮೇಲಾಧಿಕಾರಿಗಳಿಗೆ ವರ್ಗಾವಣೆಯಾಗಲಿದೆ. ಪ್ರತಿ ತಿಂಗಳು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ವಿಳಂಬ ಧೋರಣೆ ತೋರುವ ಜಿಲ್ಲಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-25-945179034

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ