ನೀಟ್ ಪರೀಕ್ಷೆ: ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಬೀದರ್: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಲಿರುವ ನೀಟ್–ಪಿಜಿ 2026 ಪರೀಕ್ಷೆಯು ಆ.30ರಂದು ನಡೆಯಲಿದ್ದು, ಪರೀಕ್ಷೆಯನ್ನು ಸುಲಲಿತವಾಗಿ, ಶಾಂತಿಯುತ ಹಾಗೂ ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ.
ನಗರದ ಗೋರನಳ್ಳಿ ಚಿಟ್ಟಾವಾಡಿ ಬಿಸಿಎಂ ಹಾಸ್ಟೆಲ್ ರಸ್ತೆಯಲ್ಲಿರುವ ಲಿಂಗರಾಜಪ್ಪ ಎಂಜಿನಿಯರಿಂಗ್ ಕಾಲೇಜು (ಕೇಂದ್ರದ ಕೋಡ್: 40800) ಪರೀಕ್ಷಾ ಕೇಂದ್ರವಾಗಿದ್ದು, ಈ ಕೇಂದ್ರದ ಸುತ್ತಮುತ್ತ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿರುವ ಎಸ್‌ಟಿಡಿ, ಮೊಬೈಲ್, ಝೆರಾಕ್ಸ್, ಟೈಪಿಂಗ್, ತರಬೇತಿ ಕೇಂದ್ರ ಹಾಗೂ ಕಂಪ್ಯೂಟರ್ ಅಂಗಡಿಗಳನ್ನು ಬಂದ್ ಮಾಡಬೇಕಾಗಿದ್ದು, ಯಾವುದೇ ರೀತಿಯ ನಕಲು ಸಾಮಗ್ರಿಗಳನ್ನು ಪೂರೈಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರವೇಶ ಪತ್ರ ಹೊಂದಿರುವ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು ಹಾಗೂ ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-33-622497571