
ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿ: ಎಚ್.ಡಿ. ಕುಮಾರಸ್ವಾಮಿ
ಮೈಸೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ.
ಇಲ್ಲಿ ಪಕ್ಷದ ‘ಶಾಸಕಾಂಗ ಪಕ್ಷ’ದ ಸಭೆ ನಡೆಸಿದ ಅವರು, ತಮ್ಮ ಶಾಸಕರಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ‘ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಈ ಬಗ್ಗೆ ಧ್ವನಿ ಎತ್ತಬೇಕು. ರೈತರ ಹಿತಕ್ಕೆ ವಿರುದ್ಧವಾಗಿ ರೂಪಿಸಿರುವ ಅವೈಜ್ಞಾನಿಕ ಬಿಡದಿ ಟೌನ್‌ಶಿಪ್ ಯೋಜನೆಯ ಬಗ್ಗೆಯೂ ಹೋರಾಟ ನಡೆಸಬೇಕು. ಈ ಯೋಜನೆಯಿಂದ ರೈತರು ಸಾವಿರಾರು ಎಕರೆ ಫಲವತ್ತಾದ ಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ನಾವು ರೈತರ ಪರವಾಗಿ ನಿಲ್ಲಬೇಕು’ ಎಂದು ತಿಳಿಸಿದ್ದಾರೆ.
‘ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ (ನೈಸ್) ಯೋಜನೆಯ ಬಗ್ಗೆಯೂ ಧ್ವನಿ ಎತ್ತಬೇಕು.ರಸ್ತೆ ನಿರ್ಮಾಣದ ಉದ್ದೇಶಕ್ಕೆ ಭೂಮಿಯನ್ನು ಪಡೆದುಕೊಂಡು, ಅದನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಸಾವಿರಾರು ರೈತರಿಗೆ ಈವರೆಗೆ ಪರಿಹಾರ ದೊರೆತಿಲ್ಲ. ಕೆಲ ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ಈ ಯೋಜನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೆಲ್ಲವನ್ನೂ ಪ್ರಸ್ತಾಪಿಸಬೇಕು’ ಎಂದು ಸೂಚಿಸಿದ್ದಾರೆ.
‘ಕೆಪಿಎಸ್‌ಸಿ ಅಕ್ರಮಗಳು, ಪೊಲೀಸ್ ನೇಮಕಾತಿಯಲ್ಲಿ ಆಗಿರುವ ಅಕ್ರಮಗಳು, ವಾಲ್ಮೀಕಿ ನಿಗಮದ ಹಗರಣ, ಬೆಂಗಳೂರು ನಗರದ ಅಸಮರ್ಪಕ ಕಸವಿಲೇವಾರಿಯ ಬಗ್ಗೆಯೂ ಪ್ರಸ್ತಾಪಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಎನ್‌ಡಿಎ ಮಿತ್ರಪಕ್ಷಗಳು ಸಮರ್ಥವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು. ಜನಪರ ವಿಷಯಗಳ ಬಗ್ಗೆ ಚರ್ಚಿಸಲು ರಾಜಿ ಬೇಡ’ ಎಂದು ತಿಳಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹಾಗೂ ಶಾಸಕರು ಪಾಲ್ಗೊಂಡಿದ್ದರು.
ಮೈಸೂರಿನವರೇ ಆದ ಶಾಸಕ ಜಿ.ಟಿ. ದೇವೇಗೌಡ ಗೈರು ಹಾಜರಾಗಿದ್ದರು. ಈ ಬಗ್ಗೆ ಇಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಅವರು ಬಹಳ ದೊಡ್ಡ ನಾಯಕರು. ತುಂಬಾ ಬ್ಯುಸಿ ಇದ್ದಾರೆ. ಮಾಡಲು ತುಂಬಾ ಕೆಲಸ ಇವೆ. ಆದ್ದರಿಂದ ಸಭೆಗೆ ಬಂದಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.