
ಕೊಪ್ಪಳ: ಬಡವರ ಹಸಿವು ನೀಗಿಸುತ್ತಿರುವ ಅನ್ನದಾತರು
ಕೊಪ್ಪಳ: ನಗರದಲ್ಲಿ ಮಧ್ಯಮ ಹಾಗೂ ಬಡ ದುಡಿಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಿ ಸೇರುತ್ತಾರೊ ಅಲ್ಲಿ ಮಧ್ಯಾಹ್ನ 1 ಗಂಟೆಗೆಲ್ಲ ವಾಹನ ಬರುತ್ತದೆ. ಅದರಲ್ಲಿ ಪ್ಲೇಟ್ ಹಾಗೂ ಗುಣಮಟ್ಟದ ಊಟ ಸಿದ್ಧವಾಗಿರುತ್ತದೆ. ಒಂದು ತಾಸಿನಲ್ಲಿ ನೂರಾರು ಜನರಿಗೆ ಪ್ರೀತಿಯಿಂದ ಉಣಬಡಿಸಿ ಅವರೆಲ್ಲರೂ ಹೊರಟು ಹೋಗುತ್ತಾರೆ.
ಮರುದಿನ ಮತ್ತೊಂದು ಜಾಗ, ಮತ್ತಷ್ಟು ಜನರಿಗೆ ಊಟ... ಹೀಗೆ ನಿತ್ಯ ಕನಿಷ್ಠ 150 ಜನರ ಹಸಿವು ನೀಗಿಸುತ್ತಿರುವ ಸಂಸ್ಥೆಯ ಹೆಸರು ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಈ ಸಂಸ್ಥೆ ಜನರ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮ ಸುಧಾರಿಸಲು ಶ್ರಮಿಸುತ್ತಿದೆ. ‘ಫುಡ್ ಆನ್ ವೀಲ್’ ಹೆಸರಿನಲ್ಲಿ ಹಸಿದವರಿಗೆ ಅನ್ನದಾತವಾಗಿದೆ. ಸಂಸ್ಥೆಯ ಮಾರ್ಗದರ್ಶನದಲ್ಲಿ ಕೊಪ್ಪಳದಲ್ಲಿ ತಂಡ ಕಟ್ಟಿಕೊಂಡಿರುವ ಸಮಾನ ಮನಸ್ಕ ಸ್ನೇಹಿತರು ಸೇರಿ ತಾವೇ ಹಣ ಹಾಕುತ್ತಾರೆ. ತಾವೇ ಅಡುಗೆ ತಯಾರಿಸಿ ತಂದು ಜನರಿಗೆ ಹಂಚುತ್ತಾರೆ.
ನಿವೃತ್ತ ನೌಕರರು, ಉದ್ಯಮಿಗಳು, ಶಿಕ್ಷಕರು, ಗೃಹಿಣಿಯರು ಇರುವ ಸಮಾನ ಮನಸ್ಕರ ತಂಡವು ಕೊಪ್ಪಳದಲ್ಲಿ ಮೂರು ತಿಂಗಳುಗಳಿಂದ ಬಡ ಹಾಗೂ ಮಧ್ಯಮ ವರ್ಗದ ಜನ ಹೆಚ್ಚು ಇರುವ ಲೇಬರ್ ವೃತ್ತ, ಗವಿಮಠ ಸರ್ಕಲ್, ಈಶ್ವರ ಪಾರ್ಕ್, ಅಶೋಕ ಸರ್ಕಲ್, ಗವಿಶ್ರೀ ನಗರ ಮೂರನೇ ಕ್ರಾಸ್ ಹಾಗೂ ಗಡಿಯಾರ ಕಂಬ.. ಹೀಗೆ ಒಂದೊಂದು ಸ್ಥಳದಲ್ಲಿ ವಾರದಲ್ಲಿ ಒಂದು ದಿನ ಊಟದ ವ್ಯವಸ್ಥೆ ಮಾಡುತ್ತಾರೆ. ಭಾನುವಾರ ಮಾತ್ರ ರಜೆ.
ಟೊಮೆಟೊ ಬಾತ್, ಪುಲಾವ್, ಬಿಸಿಬೇಳೆ ಬಾತ್, ಪುಳಿಯೋಗರೆ, ಅನ್ನ ಸಾಂಬಾರ್.. ಹೀಗೆ ನಿತ್ಯ ಒಂದು ಬಗೆಯ ಆಹಾರ ತಯಾರಿಸುತ್ತಾರೆ. ಮನೆಯಲ್ಲಿಯೇ ಅಡುಗೆ ಮಾಡಿಕೊಂಡು ಬಂದು ಸಾರ್ವಜನಿಕರಿಗೆ ಬಡಿಸಿ ವಾಪಸ್ ಹೋಗುತ್ತಾರೆ. ಮಂಗಳೂರಿನ ಸಂಸ್ಥೆ ಈಗಾಗಲೇ ಧಾರವಾಡ, ಬೆಂಗಳೂರು, ಮೈಸೂರು, ಕೊಪ್ಪಳದಲ್ಲಿ ಹಸಿದವರ ಪಾಲಿಗೆ ಊಟದ ಸೇವೆ ಒದಗಿಸುತ್ತಿದೆ.
ಕೊಪ್ಪಳದ ಸಮಾನ ಮನಸ್ಕರ ತಂಡದಲ್ಲಿ 20ಕ್ಕೂ ಹೆಚ್ಚು ಜನರು ಇದ್ದು, ‘ನಾವು ದುಡಿದ ಹಾಗೂ ದುಡಿಯುತ್ತಿರುವ ಹಣದಲ್ಲಿ ಒಂದಷ್ಟು ಭಾಗ ಹೀಗೆ ಸಮಾಜಸೇವೆಗೆ ಮೀಸಲಿಡುತ್ತಿದ್ದೇವೆ. ಲೇಬರ್ ವೃತ್ತದಲ್ಲಿ ಹಾಗೂ ಗವಿಮಠಕ್ಕೆ ಹೋಗುವ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇರುತ್ತಾರೆ. ಆಸ್ಪತ್ರೆ ಹಾಗೂ ಇನ್ನಿತರ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಬರುವವರಿಗೆ ನಮ್ಮದು ಒಂದು ಒಪ್ಪೊತ್ತಿನ ಊಟದ ಸೇವೆಯಷ್ಟೇ’ ಎಂದರು. ನಮ್ಮ ತಂಡದಲ್ಲಿ ನಾವೆಲ್ಲರೂ ಸಮಾನರು, ಪ್ರಚಾರಕ್ಕಾಗಿ ಇದನ್ನು ಮಾಡುತ್ತಿಲ್ಲ. ಹೀಗಾಗಿ ಯಾರ ಹೆಸರನ್ನೂ ಪ್ರಕಟಿಸಬೇಡಿ ಎಂದು ಮನವಿ ಮಾಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-35-261179575