
ರಾಮದುರ್ಗ: ಬೆಳೆ ಇಲ್ಲ, ಬರ ಘೋಷಣೆಯೂ ಇಲ್ಲ...
ರಾಮದುರ್ಗ: ಮುಂಗಾರು ಮಳೆ ಕೈಕೊಟ್ಟಿದ್ದಕ್ಕೆ ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರು, ಅಧಿಕಾರಿಗಳು ಬರ ಪರಿಸ್ಥಿತಿ ವೀಕ್ಷಿಸಿದ್ದಾರೆ. ಆದರೆ, ರಾಮದುರ್ಗವನ್ನು ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸದಿರುವುದಕ್ಕೆ ರೈತರು ಹತಾಶೆಗೊಂಡಿದ್ದಾರೆ.
ತಾಲ್ಲೂಕಿನಲ್ಲಿ 44,448 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆದರೆ, ಮಳೆಯಾಗದ ಹಿನ್ನೆಲೆಯಲ್ಲಿ ವಿವಿಧ ಬೆಳೆಗಳು ಕಮರಿ ಹೋಗಿವೆ.
ಹಾಗಾಗಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ನೇತೃತ್ವದ ಬಿಜೆಪಿ ನಾಯಕರ ತಂಡವು ರಾಮದುರ್ಗ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿತ್ತು. ರೈತರಿಂದ ಬೆಳೆ ಹಾನಿ ಮಾಹಿತಿ ಪಡೆದುಕೊಂಡಿದ್ದರು.
ಅದರ ಬೆನ್ನಲ್ಲೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಶಾಸಕ ಅಶೋಕ ಪಟ್ಟಣ ಹಾಗೂ ಅಧಿಕಾರಿಗಳೊಂದಿಗೆ ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಬೆಳೆ ವೀಕ್ಷಿಸಿದ್ದರು. ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು.
ಆದರೆ, ರಾಮದುರ್ಗವನ್ನು ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಿಲ್ಲ. ಹೀಗಾಗಿ ರೈತರು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈತರು ಬಿತ್ತಿದ್ದ ಬೆಳೆಗಳ ಪೈಕಿ, ಹೆಸರು ಬೆಳೆ ಶೇ 90ರಷ್ಟು ಹಾನಿಗೀಡಾಗಿದೆ. ಗೋವಿನಜೋಳಕ್ಕೆ ಶೇ 60, ತೊಗರಿಗೆ ಶೇ 50, ಸೂರ್ಯಕಾಂತಿಗೆ ಶೇ 25 ಮತ್ತು ಹತ್ತಿಗೆ ಶೇ 40ರಷ್ಟು ಹಾನಿಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಮಲಪ್ರಭಾ ನದಿಯಲ್ಲಿ ನೀರಿಲ್ಲದೆ, ತಾಲ್ಲೂಕಿನಲ್ಲಿ 68 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕಗಳು ನಿಂತುಹೋಗಿವೆ. ಅಧಿಕಾರಿಗಳು ಪರ್ಯಾಯ ಮಾರ್ಗ ಕಂಡುಕೊಂಡು ಕುಡಿಯುವ ನೀರಿನ ಬವಣೆ ನಿವಾರಿಸಿದ್ದಾರೆ. ಆದರೂ, ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ರಾಮದುರ್ಗಕ್ಕೆ ಸ್ಥಾನ ಸಿಕ್ಕಿಲ್ಲ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-21-1684495319