
ಕನಕಗಿರಿ: ನೀರಿಲ್ಲದೆ ಒಣಗಿದ ರಸ್ತೆ ಬದಿ ಸಸಿಗಳು!
ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳ ಅಕ್ಕಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ನೆಟ್ಟಿರುವ ಸಸಿಗಳು ನೀರಿಲ್ಲದೆ ಬಾಡುತ್ತಿವೆ.
ನವಲಿಯಿಂದ ಕರಡೋಣ ರಸ್ತೆ, ನವಲಿ-ಕಲ್ಮಂಗಿ, ಸಂಕನಾಳ ಗ್ರಾಮದಿಂದ ಮೈಲಾಪುರ ಹಾಗೂ ನವಲಿಯಿಂದ ಆದಾಪುರ ಗ್ರಾಮಗಳಿಗೆ ತೆರಳುವ ರಸ್ತೆಯಲ್ಲಿ ಬೇವು, ನೇರಳೆ, ಬಸಿರಿ, ಅರಳಿ, ಸಿಹಿ ಹುಣಸೆ, ಹುಣಸೆ, ಜಟ್ರೋಪ್, ಹೊಳಿಮತ್ತಿ, ಸೇರಿದಂತೆ ಒಟ್ಟು 3,600 ಸಸಿಗಳನ್ನು ನೆಡಲಾಗಿದ್ದು, ಅವುಗಳಿಗೆ ನೀರುಣಿಸುವರು ಇಲ್ಲದಂತಾಗಿದೆ.
‘ರಸ್ತೆಗಳಲ್ಲಿ ಮಳೆಗಾಲ ಆರಂಭವಾಗುವ ಮುಂಚೆ ಸಸಿ ನೆಟ್ಟು ಮುಳ್ಳಿನಬೇಲಿ ಹಾಗೂ ಉದ್ದವಾದ ಕಟ್ಟಿಗೆಯಿಂದ ಸಸಿಗಳನ್ನು ರಕ್ಷಣೆ ಮಾಡಲಾಗಿದೆ. ಆದರೆ, ಈವರೆಗೆ ಅವುಗಳಿಗೆ ನೀರು ಹಾಕಿ, ಪೋಷಣೆ ಮಾಡುವ ಕೆಲಸ ಅರಣ್ಯ ಇಲಾಖೆ ಮಾಡಿಲ್ಲ’ ಎಂದು ನವಲಿ ಗ್ರಾಮದ ಪರಿಸರ ಪ್ರೇಮಿಗಳು ದೂರಿದ್ದಾರೆ.
ಸಸಿಗಳನ್ನು ನೆಡುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ, ಅವುಗಳ ಪೋಷಣೆ ಇಲ್ಲದೆ ಸಸಿಗಳು ಜೀವ ಕಳೆದುಕೊಳ್ಳುತ್ತಿದ್ದರೂ ‘ಕ್ಯಾರೆ’ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
‘ಸಸಿ ನೆಟ್ಟ ಆರಂಭದಲ್ಲಿದ್ದ ಅರಣ್ಯ ಇಲಾಖೆಯ ಕಾಳಜಿ ಆಮೇಲೆ ಕಂಡು ಬಂದಿಲ್ಲ. ಮಳೆ ಕೊರತೆ ಹಿನ್ನೆಲೆಯಲ್ಲಿ ಇಲಾಖೆಯವರು ನೀರಿನ ಟ್ಯಾಂಕರ್ ಬಳಸಿ ಸಸಿಗಳಿಗೆ ನೀರು ಹಾಕಬೇಕಿತ್ತು. ಈ ಕೆಲಸವನ್ನು ಇಲಾಖೆ ಮಾಡಿಲ್ಲ’ ಎಂದು ನವಲಿಯ ಹನುಮಂತಪ್ಪ ತಿಳಿಸುತ್ತಾರೆ.
‘ಸಸಿಗಳು ನೀರಿಲ್ಲದೆ ಒಣಗುತ್ತಿವೆ. ನೀರು ಹಾಕಿ, ಜೀವ ತುಂಬಿ ಎಂದು ಕಳೆದ ತಿಂಗಳಿಂದಲೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ವಿಜಯಕುಮಾರ ದೂರಿದರು.
ಪ್ರಸಕ್ತ ಸಾಲಿನಲ್ಲಿ ಮಳೆ ಬೀಳದೆ ಇರುವುದು ಕೂಡ ಸಸಿಗಳು ಬಾಡಲು ಕಾರಣವಾಗಿದೆ. ಹಿಂದೆ ಗಂಗಾವತಿಯ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ವರ್ಗಾವಣೆ ಸಮಯದಲ್ಲಿ ಬೇಕಾಬಿಟ್ಟಿಯಾಗಿ ಕೆಲಸ ಮಾಡಿ ಸಸಿ ನೆಟ್ಟ ಅನುದಾನದ ಬಿಲ್ ಎತ್ತುವಳಿ ಮಾಡಿಕೊಂಡು ಹೋಗಿದ್ದಾರೆ. ಹೀಗಾಗಿ ಸಸಿಗಳಿಗೆ ನೀರು ಹಾಕಲು ಸಮಸ್ಯೆಯಾಗಿದೆ. ಈ ಅಧಿಕಾರಿ ಸಸಿಗಳ ಕಾಳಜಿ ಬದಲಾಗಿ ತಮ್ಮ ಲಾಭ ನೋಡಿಕೊಂಡರು. ಹೀಗಾಗಿ ಸಸಿಗಳು ನೀರು ಕಂಡಿಲ್ಲ ಎಂದು ಹೆಸರು ಹೇಳಲು ಬಯಸದ ಇಲಾಖೆ ಮೂಲಗಳು ತಿಳಿಸಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-35-531957164