
ನಾಪೋಕ್ಲು: ಚಕ್ಕೆಪಾರೆ ಕುಂದುವಿನಲ್ಲಿ ಇದೇ ಮೊದಲ ಬಾರಿಗೆ ಕುರುಂಜಿ ಹೂವುಗಳ ರಾಶಿ
ನಾಪೋಕ್ಲು: ಬ್ರಹ್ಮಗಿರಿ ಬೆಟ್ಟ ಶ್ರೇಣಿಗಳ ನಡುವಿನ ಚಕ್ಕೆಪಾರೆ ಕುಂದುವಿನಲ್ಲಿ ಇದೇ ಮೊದಲ ಬಾರಿಗೆ ಕುರುಂಜಿ ಹೂವು ಬಿಟ್ಟಿದ್ದು ಪ್ರಕೃತಿ ಪ್ರೇಮಿಗಳನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿದೆ.
ಇಲ್ಲಿಗೆ ಸಮೀಪದ ನೆಲಜಿ, ಪೇರೂರು ಗ್ರಾಮಗಳ ಬೆಟ್ಟಗಳಲ್ಲಿ ಒತ್ತೊತ್ತಾಗಿ ನೀಲಿ ಕುರುಂಜಿ ಹೂವುಗಳು ಕಂಗೊಳಿಸುತ್ತಿವೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಂಡು ಬರುವ ಹಸಿರು ಬೆಟ್ಟ ಶ್ರೇಣಿಗಳು, ಅದರ ಮೇಲೆ ಗಿರಕಿ ಹೊಡೆಯುವ ಮೇಘಗಳ ರಾಶಿ, ಇದರ ನಡುವೆ ಅರಳಿ ನಿಂತ ಕುರಂಜಿ ಹೂವುಗಳು ನೋಡುಗರ ಕಣ್ಮನಕ್ಕೆ ತಂಪೆರೆಯುತ್ತಿವೆ.
ಕುರುಂಜಿ ಹೂವುಗಳಿಂದ ಸಿಂಗಾರಗೊಂಡಿರುವ ಚಕ್ಕೆಪಾರೆಕುಂದು ನಾಪೋಕ್ಲು ಸಮೀಪದ ಪೇರೂರು ಕೀಯಲ್ ಕೇರಿ ಬಳಿಯ ಬೆಟ್ಟವಾಗಿದೆ. ಈ ಬೆಟ್ಟದಲ್ಲಿ ಕುರುಂಜಿ ಹೂವು ಬಿಟ್ಟಿರುವುದು ವ್ಯಾಪಕ ಪ್ರಚಾರವಾಗುತ್ತಿದೆ. ಇದರ ಸೌಂದರ್ಯವನ್ನು ಪ್ರವಾಸಿಗರು ಮೊಬೈಲ್ ಫೋನ್, ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದಾರೆ.
ಕುರುಂಜಿ ಗಿಡಗಳು ಕೊಡಗಿನಲ್ಲಿ ಸಾಮಾನ್ಯ. ಇದರಲ್ಲಿ ಹಲವು ತಳಿಗಳಿದ್ದು, ಬೆಟ್ಟಗಳಲ್ಲಿ ಬೆಳೆಯುವ ಗಿಡಗಳು ದಷ್ಟ ಪುಷ್ಟವಾಗಿರುತ್ತವೆ. ಮಳೆ ಹೆಚ್ಚು ಬೀಳುವ ಪ್ರದೇಶಗಳಲ್ಲಿನ ಕಾಫಿ, ಏಲಕ್ಕಿ ತೋಟದಲ್ಲಿ ಇವು ಬೆಳೆಯುತ್ತವೆ. ಕುರಂಜಿ ಹೂವು ಬಿಟ್ಟ ಬಳಿಕ ಗಿಡಗಳು ಸಾಯುತ್ತವೆ. ಮತ್ತೆ ಬೀಜಗಳು ಮೊಳಕೆಯೊಡೆದು ಹುಟ್ಟಿ ಗಿಡಗಳಾಗಬೇಕಾದರೆ ಹಲವು ವರ್ಷಗಳು ಕಾಯಬೇಕು. 12 ವರ್ಷಗಳ ಬಳಿಕ ಇದ್ದಕ್ಕಿದ್ದ ಹಾಗೆ ಹೂವು ಬಿಟ್ಟು ಇಡೀ ಬೆಟ್ಟಗುಡ್ಡಗಳನ್ನು ನೀಲಿಮಯವಾಗಿಸಿ ಅಚ್ಚರಿ ಮೂಡಿಸುತ್ತದೆ. ಈ ಸುಂದರ ಅಪರೂಪದ ದೃಶ್ಯಗಳನ್ನು ವೀಕ್ಷಿಸಬೇಕಾದರೆ 12 ವರ್ಷಕಾಯಬೇಕು. ಸ್ಥಳೀಯ ಹೋಂಸ್ಟೇಗಳಿಗೆ ಹಾಗೂ ರೆಸಾರ್ಟ್‌ಗಳಿಗೆ ಆಗಮಿಸಿರುವ ಪ್ರವಾಸಿಗರು ಕುರುಂಜಿ ಹೂವುಗಳ ಸೊಬಗನ್ನು ವೀಕ್ಷಿಸುವ ದೃಷ್ಟಿಯಿಂದ ಬೆಟ್ಟಗಳತ್ತ ಮುಖ ಮಾಡುತ್ತಿದ್ದಾರೆ.
‘ನೆಲಜಿ, ಪೆರೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಅರಳಿರುವ ಸಸ್ಯ ಸಂಪತ್ತು ಹಾಗೂ ನೈಸರ್ಗಿಕ ಜಲಮೂಲಗಳತ್ತ ಪ್ರವಾಸಿಗರನ್ನು ಸೆಳೆಯುವ ವಾಣಿಜ್ಯ ಉದ್ದೇಶದ ಸಾಮೂಹಿಕ ಚಾರಣ ಮತ್ತು ಪ್ರವಾಸೋದ್ಯಮ ವ್ಯಾಪಕವಾಗುತ್ತಿದೆ. ಈ ಭೂ ಪ್ರದೇಶ ಅರಣ್ಯ ಪ್ರದೇಶಗಳ ಸಮೀಪದಲ್ಲಿದ್ದು, ಕಾಡಾನೆಗಳು ನಿರಂತರವಾಗಿ ಸಂಚರಿಸುವ ಸೂಕ್ಷ್ಮ ವನ್ಯಜೀವಿ ಆವಾಸ ಪ್ರದೇಶದ ಭಾಗವಾಗಿವೆ’ ಎಂದಿರುವ ಅರಣ್ಯ ಇಲಾಖೆ, ‘ಕಾಡಾನೆ ಸಂಚಾರವಿರುವ ಇಂತಹ ಸೂಕ್ಷ್ಮ ವಲಯಗಳಲ್ಲಿ ಅನಿಯಂತ್ರಿತ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಕಾಡಾನೆ ಸಂಚಾರವಿರುವ ಇಂತಹ ಸೂಕ್ಷ್ಮ ವಲಯಗಳಲ್ಲಿ ಅನಿಯಂತ್ರಿತ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವುದು ಸಾರ್ವಜನಿಕರ ಜೀವಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಪ್ರವಾಸೋದ್ಯಮ ಚಟುವಟಿಕೆಗಳ ವೇಳೆ ವನ್ಯಜೀವಿ ಸಂಘರ್ಷ, ಪ್ರಾಣಾಪಾಯ, ಗಾಯ ಅಥವಾ ಅಹಿತಕರ ಘಟನೆಗಳು ಸಂಭವಿಸಿದರೆ, ಅದಕ್ಕೆ ಸಂಬಂಧಪಟ್ಟ ಆಯೋಜಕರು ಮತ್ತು ಸಂಸ್ಥೆಗಳೇ ನೇರ ಹೊಣೆಗಾರರಾಗುತ್ತಾರೆ’ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಕುರುಂಜಿ ಗಿಡಗಳು ಎರಡರಿಂದ ಏಳು ಅಡಿಗಳಿಗಿಂತಲೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತವೆ. ಒತ್ತಾಗಿ ಪೊದೆಯಾಗಿ ಬೆಳೆಯುವ ಇವು ನೀರಿನ ಆಶ್ರಯವಿಲ್ಲದೆ ಗಿರಿ ಶ್ರೇಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬೆಟ್ಟ ಗುಡ್ಡಗಳಲ್ಲಿ ಬಣ್ಣ ಮತ್ತು ಸೌಂದರ್ಯದಿಂದ ಕಾನನದ ಪುಷ್ಪವಾಗಿ ಎಲ್ಲರ ಗಮನ ಸೆಳೆಯುವ ಕುರುಂಜಿ ಹೂವುಗಳಿಗೆ ರಾಷ್ಟ್ರೀಯ ಸ್ಥಾನಮಾನ ಲಭಿಸಿತ್ತು. ಒಂದೂವರೆ ದಶಕಗಳ ಹಿಂದೆ ಅಂಚೆ ಇಲಾಖೆ ₹15 ಅಂಚೆಚೀಟಿಯನ್ನು ಬಿಡುಗಡೆ ಮಾಡಿ ಸ್ಥಾನ ನೀಡಿತ್ತು ಆ ಮೂಲಕ ಕುರುಂಜಿ ತನ್ನ ಸ್ನಾನಮಾನವನ್ನು ಹೆಚ್ಚಿಸಿಕೊಂಡು ಗಮನ ಸೆಳೆದಿತ್ತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-51-1367923054