
ಅಸ್ಪೃಶ್ಯತೆ ಇನ್ನೂ ಜೀವಂತ: ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ ಹೇಳುವುದೇನು?
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡ ಹಲ್ದ್ವಾನಿಯ ರಾಮ್‌ಲೀಲಾ ಮೈದಾನದಲ್ಲಿ ಭಾಷಣ ಮಾಡಿದ್ದರು. ಆ ಬಳಿಕ, ಆ ಪ್ರದೇಶದವನ್ನು ‘ಶುದ್ಧೀಕರಣ’ ಮಾಡಲಾಯಿತು ಎಂದು ಖರ್ಗೆ ಅವರು ರಾಜ್ಯಸಭೆಯಲ್ಲಿ ಹೇಳಿದರು. ಈ ಘಟನೆಗೆ ಸಂಬಂಧಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಮಾಧ್ಯಮಗೋಷ್ಠಿ ನಡೆಸಿದರು. ಈ ಬಳಿಕ, ಅಸ್ಪೃಶ್ಯತೆ ಕುರಿತು ದೇಶದಲ್ಲಿ ಚರ್ಚೆ ನಡೆಯತೊಡಗಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿಗಳಲ್ಲಿ ದಾಖಲಾದ ಅಸ್ಪೃಶ್ಯತೆ ಆಚರಣೆಯ ಕುರಿತು ದಾಖಲಾಗಿರುವ ಪ್ರಕರಣಗಳ ವಿವರ ಇಲ್ಲಿದೆ
ಸೆಕ್ಷನ್ 3ರಲ್ಲಿ ಏನಿದೆ?
ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, 1989ರ ಸೆಕ್ಷನ್ 3 (y) (za) (z) (zc) ಅನ್ವಯ ದಾಖಲಾದ ಪ್ರಕರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಹಾಗಿದ್ದರೆ, ಈ ಸೆಕ್ಷನ್ ಏನು ಹೇಳುತ್ತದೆ?
* ಸಾರ್ವಜನಿಕ ಸ್ಥಳ ಪ್ರವೇಶಿಸುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು. ಆಸ್ತಿ ಖರೀದಿ, ಅಂತ್ಯಕ್ರಿಯೆಗೆ ಜಾಗ ನೀಡದೇ ಇರುವುದು. ನದಿ, ಬಾವಿ, ಟ್ಯಾಂಕ್, ತೊಟ್ಟಿ, ನಲ್ಲಿ ಅಥವಾ ಯಾವುದೇ ಜಲಮೂಲಗಳ ಬಳಕೆಯನ್ನು ನಿಷೇಧಿಸುವುದು. ಸಾರ್ವಜನಿಕ ಸ್ನಾನದ ಸ್ಥಳಗಳಲ್ಲಿ ಸ್ನಾನ ಮಾಡುವುದನ್ನು ತಡೆಯುವುದು
* ಚಪ್ಪಲಿ ಹಾಕಿಕೊಳ್ಳಲು, ಸೈಕಲ್ ಖರೀದಿಸಲು, ಬೈಕ್ ಖರೀದಿಸಲು, ಕುದುರೆ ಮೇಲೆ ಕೂತು ಮದುವೆ ಮೆರವಣಿಗೆ ಹೋಗುವುದನ್ನು ತಡೆಯುವುದು
* ದೇವಸ್ಥಾನ ಪ್ರವೇಶ ನಿಷೇಧಿಸುವುದು, ಧಾರ್ಮಿಕ ಮೆರವಣಿಗೆಯನ್ನು ತಡೆಯುವುದು. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಔಷಧಾಲಯ, ಅಂಗಡಿಗೆ ಹೋಗುವುದನ್ನು ತಡೆಯುವುದು. ಸಾರ್ವಜನಿಕರ ಬಳಕೆಗಾಗಿ ಇರುವ ವಸ್ತುಗಳನ್ನು ಬಳಸಲು ನಿರ್ಬಂಧಿಸುವುದು
* ತಮ್ಮಿಷ್ಟದ ಉದ್ಯೋಗ ಆಯ್ಕೆ ಮಾಡಿಕೊಳ್ಳುವುದನ್ನು ನಿರ್ಬಂಧಿಸುವುದು, ತಮ್ಮಿಷ್ಟದ ವ್ಯಾಪಾರ ಮಾಡುವುದನ್ನು ತಡೆಯುವುದು. ಮಾಟ–ಮಂತ್ರ ಮಾಡುತ್ತಾರೆ ಎಂದು ಆರೋಪ ಹೊರಿಸಿ, ಮಾನಸಿಕ ಅಥವಾ ದೈಹಿಕ ಹಿಂಸೆ ನೀಡುವುದು
* ಸಾಮಾಜಿಕ ಬಹಿಷ್ಕಾರ ಹಾಕುವುದು
ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ ಏನು ಹೇಳುತ್ತದೆ?
1955ರಲ್ಲಿ ಮೊದಲ ಬಾರಿಗೆ ‘ಅಸ್ಪೃಶ್ಯತೆ (ಅಪರಾಧಗಳ) ಕಾಯ್ದೆ’ ಜಾರಿ ಮಾಡಲಾಯಿತು. ಬಳಿಕ, 1976ರಲ್ಲಿ ಈ ಕಾಯ್ದೆಗೆ ‘ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ’ ಎಂದು ಮರುನಾಮಕರಣ ಮಾಡಲಾಯಿತು. ಇದು ಎಸ್‌ಸಿ–ಎಸ್‌ಟಿ ಸಮುದಾಯದ ಜನರನ್ನೇ ಗಮನದಲ್ಲಿ ಇಟ್ಟುಕೊಂಡು ರೂಪಿಸಿರುವ ಕಾಯ್ದೆ. ಆದರೂ ಸಂವಿಧಾನದ 17ನೇ ವಿಧಿ ಅನ್ವಯ ಯಾವುದೇ ವ್ಯಕ್ತಿಯ ಕುರಿತು ಯಾವುದೇ ಕಾರಣಕ್ಕಾಗಿಯೂ ಯಾವುದೇ ವಿಧದಲ್ಲಿಯೂ ಅಸ್ಪೃಶ್ಯತೆ ಆಚರಣೆ ಮಾಡಬಾರದು ಎನ್ನುವ ಅಂಶವನ್ನು ಈ ಕಾಯ್ದೆ ಪ್ರತಿಪಾದಿಸುತ್ತದೆ.
ಆಧಾರ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ