ಜೀವಾಪಾಯದಿಂದ ಪಾರು: ನೇಪಾಳ ಪ್ರವಾಹದ ಭೀಕರತೆ ಬಿಚ್ಚಿಟ್ಟಿ ಕಲಬುರಗಿಯ ಮಲ್ಲಿನಾಥ
ಚಿಂಚೋಳಿ (ಕಲಬುರಗಿ ಜಿಲ್ಲೆ): ‘ನಾವೆಲ್ಲ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ಒಮ್ಮೆಲೇ ನೀರು ಚಿಮ್ಮಿ ಬಂತು. ದಟ್ಟ ಹೊಗೆಯೂ ಆವರಿಸಿತು. ನಮ್ಮ ಮುಂದಿದ್ದ ಎರಡು ಬಸ್‌ಗಳು ಕೊಚ್ಚಿ ಹೋದವು...’
ಇವು ನೇಪಾಳದಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಹಾಗೂ ದಿಢೀರ್ ಪ್ರವಾಹವನ್ನು ಕಣ್ಣಾರೇ ಕಂಡು ಕೆಲವೇ ಕ್ಷಣಗಳಲ್ಲಿ ಜೀವಾಪಾಯದಿಂದ ಪಾರಾದ ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದ ಮಲ್ಲಿನಾಥ ಕೋಲಕುಂದಿ ಅವರ ನುಡಿಗಳು.
ಮಲ್ಲಿನಾಥ ಹಾಗೂ ಚಿಂಚೋಳಿ ತಾಲ್ಲೂಕಿನ ಕನಕಪುರದ ಸಂಗಮೇಶ ಪಾಟೀಲ ಅವರು ಹೈದರಾಬಾದ್‌ನ 23 ಜನ ಸೇರಿ ಒಟ್ಟು 25 ಮಂದಿ ನೇಪಾಳಕ್ಕೆ ಪ್ರಯಾಣಿಸಿದ್ದರು. ಅವರು ಹೋಗುವ ಮಾರ್ಗ ಮಧ್ಯೆ ದಿಢೀರ್ ಪ್ರವಾಹದ ಅವಘಡ ಘಟಿಸಿದೆ. ಸದ್ಯ ಅವರು ಸುರಕ್ಷಿತವಾಗಿದ್ದು, ಕಠ್ಮಂಡುವಿನಲ್ಲಿ ಉಳಿದುಕೊಂಡಿದ್ದಾರೆ.
‘ಪ್ರವಾಹದ ತೀವ್ರತೆಯನ್ನು ಅರಿತ ನಮ್ಮ ಬಸ್ ಚಾಲಕ ಕ್ಷಣಾರ್ಧದಲ್ಲಿ ಬಸ್ ತಿರುಗಿಸಿಕೊಂಡು ಗಟ್ಟಿಯಾದ ಸುರಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸಿದ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ನಾವೆಲ್ಲ ಪಾರಾದೆವು. ಬಳಿಕ ಹೋಗಿ ನೋಡಿದಾಗ ಸೇತುವೆಯೇ ಒಡೆದು ಹೋಗಿತ್ತು’ ಎಂದು ಘಟನೆಯ ಭೀಕರತೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.