
ಕಲಘಟಗಿ | ಹಂದಿಗಳ ಕಾಟ: ಬೆಳೆಗಳ ನಾಶ
ಕಲಘಟಗಿ: ಗ್ರಾಮೀಣ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಳದಿಂದಾಗಿ ರೈತರ ಬೆಳೆಗಳ ನಾಶವಾಗುತ್ತಿದೆ. ಸ್ವಚ್ಛತೆಯ ಸಮಸ್ಯೆಯೂ ಆಗುತ್ತಿದೆ.
ತಾಲ್ಲೂಕಿನ ಆಸ್ತಕಟ್ಟಿ, ತಬಕದಹೊನ್ನಳ್ಳಿ, ಪರಸಾಪುರ, ಸೋಲಾರಗೊಪ್ಪ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಂದಿಗಳ ಹಾವಳಿಗೆ ಜನರು ಬೇಸತ್ತಿದ್ದಾರೆ. ಅವುಗಳ ತಡೆಗಟ್ಟುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮದ ಓಣಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳು ಗುಂಪು ಗುಂಪಾಗಿ ಬಂದು ಅಶುಚಿತ್ವ ಹರಡುತ್ತಿವೆ. ಇದರಿಂದ ಜನರಿಗೆ ಡೆಂಗಿ, ಮಲೇರಿಯಾ, ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ಹಂದಿಗಳು ನುಗ್ಗಿ ಮೆಕ್ಕೆಜೋಳ, ಕಬ್ಬು ಬೆಳೆ ಹಾನಿ ಮಾಡುತ್ತಿದ್ದು ರೈತರಿಗೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ರಸ್ತೆಗಳಲ್ಲಿ ಹಂದಿಗಳು ಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ನೋಟಿಸ್ ನೀಡಿ, ಹಂದಿಗಳ ಹಾವಳಿ ತಪ್ಪಿಸಬೇಕು ಎಂದು ಆಸ್ತಕಟ್ಟಿ ಗ್ರಾಮದ ಸಂತ ಸೇವಾಲಾಲ ಗ್ರಾಮ ವಿಕಾಸ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಗ್ರಾಮದ ರೈತರಾದ ನಾನಪ್ಪ ಲಮಾಣಿ ಹಾಗೂ ಭಿಮ್ಲಪ್ಪ ಲಮಾಣಿ ಅವರ ವರ್ಷಪೂರ್ತಿ ಶ್ರಮವಹಿಸಿ ಬೆಳೆದ ಕಬ್ಬು, ಮೆಕ್ಕೆಜೋಳ ಬೆಳೆಗೆ ಹಂದಿಗಳು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಸಂಬಂಧಪಟ್ಟ ಅಧಿಕಾರಿಗಳು ಬೆಳೆಹಾನಿ ಪರಿಶೀಲಿಸಿ ಪರಿಹಾರ ನೀಡಬೇಕು’ ಎಂದು ಆಸ್ತಕಟ್ಟಿ ಗ್ರಾಮದ ಉಮ್ಮೆಶ ಲಮಾಣಿ ಒತ್ತಾಯಿಸಿದರು.
‘ಎರಡು ತಿಂಗಳಿಂದ 20ಕ್ಕೂ ಹೆಚ್ಚು ಹಂದಿಗಳು ತರಕಾರಿ ಕೈತೋಟ, ಕಬ್ಬು, ಸೋಯಾಬಿನ್, ಮೆಕ್ಕೆಜೋಳ ಬೆಳೆಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ತಾಲ್ಲೂಕಿನ ಪರಸಾಪುರ ಗ್ರಾಮದ ರೇಣುಕಾ ಸುಬ್ಬಣ್ಣವರ ಅಸಮಾಧಾನ ವ್ಯಕ್ತಪಡಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-24-1181835053