
ಕಾಳಗಿಯಲ್ಲಿ ಮಳೆ ಇಲ್ಲದೆ ಹೆಸರು, ಉದ್ದು ಬೆಳೆ ನಷ್ಟ, ರೈತರು ಕಂಗಾಲು
ಕಾಳಗಿ: ರೈತನ ಅರ್ಧವಾರ್ಷಿಕ ಖರ್ಚು ಕೊಂಡೊಯ್ಯುತ್ತಿದ್ದ ‘ಹೆಸರು’ ಈ ವರ್ಷ ಅನಾವೃಷ್ಟಿಗೆ ನೆಲಕಚ್ಚಿ ಅನ್ನದಾತ ಕಂಗಾಲಾಗಿದ್ದಾನೆ.
ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ವೇಳೆ ತೊಗರಿ ಜತೆಯಲ್ಲಿ ಹೆಸರು, ಉದ್ದು ಬೆಳೆಯುವುದು ಸಾಮಾನ್ಯ. ತೊಗರಿ ವಾರ್ಷಿಕ ಬೆಳೆಯಾಗಿದ್ದರೆ, ಹೆಸರು ಮತ್ತು ಉದ್ದು ಮೂರು ತಿಂಗಳಲ್ಲೇ ಕೈಗೆ ಬಂದು ಕಾಸು ತರುವ ಬೆಳೆಯಾಗಿವೆ.
ಈ ಹೆಸರು, ಉದ್ದಿನ ಮಾರಾಟದ ಹಣವೇ ರೈತವರ್ಗಕ್ಕೆ ಅರ್ಧಭಾರ ನೀಗಿಸಿ ಮುನ್ನಡೆಸುವ ಶಕ್ತಿಯಾಗಿದೆ. ಆದರೆ ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಹೆಸರು ಬೆಳೆ ಅಷ್ಟೊಂದು ಪ್ರಮಾಣದಲ್ಲಿ ಮೇಲಕ್ಕೇಳದೆ ಮುಗ್ಗರಿಸಿಕೊಂಡಿದೆ. ಹಲವು ಕಡೆ ಅಷ್ಟೂ ಲಕ್ಷಣ ಕಂಡುಬರದೆ ಹರಗಿ ಬಿಡಲಾಗಿದೆ.
ಈ ನಡುವೆಯೂ ಅಲ್ಲಲ್ಲಿ ಬೆಳೆದ ಹೆಸರು ಬೆಳೆಯ ರಾಶಿ ಈಗ ಎಲ್ಲೆಡೆ ನಡೆಯುತ್ತಿದೆ. ಕೊಡದೂರ, ಮಂಗಲಗಿ, ರುದನೂರ, ರಾಯಕೋಡ, ತೆಂಗಳಿ, ರಾಜಾಪುರ ಮುಂತಾದ ಗ್ರಾಮಗಳಲ್ಲಿ ರೈತರು ಹೆಸರು ರಾಶಿಗೆ ಮುಂದಾಗಿದ್ದಾರೆ. ಹೇಳಿಕೊಳ್ಳುವಷ್ಟು ಕಾಯಿ ಬೀಜ ತುಂಬಿಕೊಳ್ಳದೆ ಇರುವುದರಿಂದ ಕೂಲಿಕಾರರನ್ನು ಬಳಸಿಕೊಳ್ಳದೆ ಮನೆಯವರೇ ರಾಶಿಯಲ್ಲಿ ತೊಡಗಿದ್ದಾರೆ.
ಹೊಲಗಳಲ್ಲಿ ಅಡಚಣೆ ಆಗುತ್ತದೆ ಎಂದುಕೊಂಡು ಅಕ್ಕಪಕ್ಕದ ಹೆದ್ದಾರಿಗೆ ತಂದು ಸ್ಥಳೀಯ ಯಂತ್ರಗಳ ಮೂಲಕ ರಾಶಿ ಮಾಡುತ್ತಿದ್ದಾರೆ.
ಮೊದಲು ಒಂದು ಎಕರೆಗೆ ನಾಲ್ಕು ಕ್ವಿಂಟಲ್ ಬರುತ್ತಿದ್ದ ಇಳುವರಿ ಈಗ ಒಂದು ಕ್ವಿಂಟಲ್ ಬರಲು ಕಷ್ಟವಾಗಿದೆ. ಜತೆಗೆ ಆರಂಭದಲ್ಲಿದ್ದ ಉತ್ತಮ ಧಾರಣೆ ಸಹ ಈಗ ಕುಸಿಯಲು ಶುರುವಾಗಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಪ್ರತಿವರ್ಷ ರಾಶಿಗೆ ಬಂದಿಳಿಯುತ್ತಿದ್ದ ಪಂಜಾಬ್ ರಾಶಿ ಯಂತ್ರಗಳು ಈ ವರ್ಷ ಬಂದಿದ್ದರೂ ಉತ್ತಮ ಫಸಲು ಇಲ್ಲದ್ದಕ್ಕೆ ರೈತರು ಯಾರು ಅವುಗಳ ಗೋಜಿಗೆ ಹೋಗದೆ ಸ್ಥಳೀಯವಾಗಿಯೇ ರಾಶಿ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಅದಲ್ಲದೇ ಉದ್ದಿನ ರಾಶಿಯೂ ಆರಂಭಗೊಂಡಿದ್ದು ಅದರ ಪರಿಸ್ಥಿತಿಯೂ ಬೇರೆಯೇನಲ್ಲ ಎನ್ನುತ್ತಾರೆ ರೈತರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-31-1571666682