
ಟೊಮೆಟೊ ಮಾರಾಟಕ್ಕೆ ಜಾಗ ಇಲ್ಲದೆ ರೈತರ ಪರದಾಟ, ಸರ್ಕಾರಕ್ಕೆ ಪ್ರಶ್ನೆ
ಕೋಲಾರ: ಬಯಲುಸೀಮೆ ಕೋಲಾರ ಜಿಲ್ಲೆಯ ರೈತರಿಗೆ ಬದುಕು ಕಟ್ಟಿಕೊಟ್ಟಿರುವ, ಅವರ ಜೀವನ ಹಸನಗೊಳಿಸಿರುವ ಬೆಳೆ ಟೊಮೆಟೊ. ಆದರೆ, ಟೊಮೆಟೊ ಮಾರಾಟ ಮಾಡಲು ಜಿಲ್ಲಾ ಕೇಂದ್ರ ಕೋಲಾರದಲ್ಲಿ ಜಾಗ ಸಾಲದೆ ರೈತರು ಹಲವು ವರ್ಷಗಳಿಂದ ಪರದಾಡುತ್ತಿದ್ದರೂ ಹೊಸ ಸ್ಥಳ ತೋರಿಸುವಲ್ಲಿ ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿ–75ಕ್ಕೆ ಹೊಂದಿಕೊಂಡಿರುವ, ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈಗಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಜಾಗ ತೀರಾ ಕಿರಿದಾಗಿದ್ದು, ಬೇರೆಡೆಗೆ ಸ್ಥಳಾಂತರಿಸಬೇಕೆಂದು ದಶಕಗಳಿಂದ ಹೋರಾಟ ನಡೆಯುತ್ತಿದೆ.
ಟೊಮೆಟೊ ಸುಗ್ಗಿ ಕಾಲದಲ್ಲಿ ಎಪಿಎಂಸಿಯಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಜೊತೆಗೆ ಜಾಗ ಕಿಷ್ಕಿಂಧೆ ಆಗಿರುವುದರಿಂದ ಹಲವಾರು ಸಮಸ್ಯೆಗಳು ಇವೆ. ಮಳೆ ಬಂದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಟೊಮೆಟೊ ಫಸಲು ಹಾಗೂ ಧಾರಣೆಯ ಏರುಪೇರಿನ ಹೊಡೆತಕ್ಕೆ ಸಿಲುಕಿ ಜರ್ಜಿತರಾಗಿರುವ ರೈತರು ಇಲ್ಲಿನ ಮೂಲ ಸೌಕರ್ಯಗಳ ಕೊರತೆಯಿಂದ ಮತ್ತಷ್ಟು ನಲುಗಿ ಹೋಗಿದ್ದಾರೆ.
ಟೊಮೆಟೊ ವಹಿವಾಟಿಗೆಂದು ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಲು 60 ಎಕರೆ ಜಾಗ ಗುರುತಿಸಿರುವುದಾಗಿ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಹಲವು ದಿನಗಳಿಂದ ಹೇಳುತ್ತಿದ್ದರಾದರೂ ಈವರೆಗೆ ಯಾವುದೇ ಪ್ರಗತಿ ಆಗಿಲ್ಲ. ರೈತರು ಕೇಳಿದಾಗಲೆಲ್ಲಾ ‘ಜಾಗ ಸಿದ್ಧವಿದ್ದು, ಸರ್ಕಾರದಿಂದ ಆದೇಶ ಆಗಬೇಕಿದೆ’ ಎನ್ನುತ್ತಾ ಮುಂದೆ ಸಾಗುತ್ತಿದ್ದಾರೆ. ಕಡತಗಳಿಗೆ ಸರ್ಕಾರದ ಮಟ್ಟದಲ್ಲಿ ಮುಕ್ತಿ ಮಾತ್ರ ಸಿಗುತ್ತಿಲ್ಲ.
ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ 4 ಎಕರೆ ಹಾಗೂ ಟಿಎಪಿಸಿಎಂಎಸ್‌ಗೆ 34 ಗುಂಟೆ ಜಾಗ ಹೋಗಿದ್ದು, ಸದ್ಯ ಎಪಿಎಂಸಿಗೆ ಕೇವಲ 19 ಎಕರೆ ಜಾಗವಿದೆ. ಸುಗ್ಗಿ ಕಾಲದಲ್ಲಿ (ಮೇನಿಂದ ಸೆಪ್ಟೆಂಬರ್) ನಿತ್ಯ ಸರಿಸುಮಾರು 3 ಲಕ್ಷ ಕ್ರೇಟ್ (ತಲಾ 15 ಕೆ.ಜಿಯ ಬಾಕ್ಸ್‌ಗಳು) ಟೊಮೆಟೊ ವಹಿವಾಟು ನಡೆಯುತ್ತದೆ. 1,500 ವಾಹನಗಳು ಬಂದು ಹೋಗುತ್ತವೆ. ರೈತರು, ವರ್ತಕರು, ಕೂಲಿಗಳು ಸೇರಿದಂತೆ 5 ಸಾವಿರ ಜನರ ಓಡಾಟವಿರುತ್ತದೆ. ಜಾಗವಿಲ್ಲದೆ ರಸ್ತೆಗಳ ಮೇಲೆಯೇ ಟೊಮೆಟೊ ಬಾಕ್ಸ್ ಇಟ್ಟು ವ್ಯಾಪಾರ ಮಾಡಬೇಕಿದೆ.
ಟೊಮೆಟೊ ಹಣ್ಣನ್ನು ಹೆಚ್ಚು ದಿನ ರಕ್ಷಿಸಿ ಇಡಲು ಆಗುವುದಿಲ್ಲ. ಬೆಲೆ ಕಡಿಮೆ ಇರಲಿ, ಹೆಚ್ಚಿರಲಿ ಒಂದೇ ದಿನದಲ್ಲಿ ಟೊಮೆಟೊ ಸಾಗಾಟ ಮಾಡಬೇಕು. ಆದರೆ, ಟ್ರಾಫಿಕ್‌ನಿಂದ ರೈತರು, ವರ್ತಕರು ಹೈರಾಣಾಗುತ್ತಿದ್ದಾರೆ. ಜಿಲ್ಲೆಗೆ ಸಂಸ್ಕರಣಾ ಘಟಕ, ಶಿಥಲೀಕರಣ ಘಟಕ ಬೇಕೆಂಬ ಬೇಡಿಕೆ ಹಲವು ವರ್ಷಗಳದ್ದು. ಈ ಕೂಗು ಕೂಡ ಸರ್ಕಾರ ಕಿವಿಗೆ ಬೀಳುತ್ತಿಲ್ಲ.
ತರಕಾರಿ ಮಾರುಕಟ್ಟೆಗೂ ಸಮಸ್ಯೆ: ತರಕಾರಿಗಳನ್ನು ರಸ್ತೆಯಲ್ಲೇ ದಾಸ್ತಾನು ಮಾಡಿಕೊಂಡು ಮಾರಾಟ ಮಾಡಬೇಕಾದ ಪರಿಸ್ಥಿತಿ ಎಪಿಎಂಸಿಯಲ್ಲಿ ಇದೆ. ವಾಹನಗಳಿಂದಲೇ ಇಡೀ ಜಾಗ ಭರ್ತಿ ಆಗಿರುತ್ತದೆ. ಜೊತೆಗೆ ಕಸದ ರಾಶಿಯೇ ಬಿದ್ದಿರುತ್ತದೆ. ಕನಿಷ್ಠ 20 ಎಕರೆಯಲ್ಲಿ ನಡೆಯಬೇಕಿದ್ದ ತರಕಾರಿ ಮಾರುಕಟ್ಟೆಯನ್ನು ಕೇವಲ 2 ಎಕರೆಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಟೊಮೆಟೊ ಬೆಳೆಯುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದ್ದು, ಇಲ್ಲಿನ ಎಪಿಎಂಸಿಯಿಂದ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಪ್ರತಿನಿತ್ಯ ರಫ್ತಾಗುತ್ತದೆ. ಮಂಡಿ ಮಾಲೀಕರು, ವರ್ತಕರು, ಮಧ್ಯವರ್ತಿಗಳು, ಸಾಗಣೆ ವಾಹನಗಳ ಮಾಲೀಕರು, ಚಾಲಕರು, ಕೂಲಿಕಾರರು, ಹಮಾಲಿಗಳು ಸೇರಿದಂತೆ ಹಲವರ ಬದುಕಿಗೆ ಆಸರೆಯಾಗಿದೆ. ಹೀಗಿದ್ದೂ, ಟೊಮೆಟೊ ಮಾರುಕಟ್ಟೆಗೆ ಜಾಗ ನೀಡಲು ಸರ್ಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ.
ಕಂದಾಯ ಇಲಾಖೆ ಜಮೀನು ಇದೆ
ಟೊಮೆಟೊ ಮಾರುಕಟ್ಟೆಗೆ ಕೋಲಾರ ತಾಲ್ಲೂಕಿನಲ್ಲಿ 60 ಎಕರೆ ಕಂದಾಯ ಇಲಾಖೆಯ ಜಮೀನು ಇದೆ. ಅಲ್ಲದೇ, ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಬರಬೇಕಾದ 19 ಎಕರೆ ಜಾಗವೂ ಇದೆ. ಸರ್ಕಾರಕ್ಕೆ ಅಗತ್ಯಬಿದ್ದಾಗ ಹಿಂಪಡೆಯಲಾಗುವುದು ಎಂಬ ಷರತ್ತಿಗೆ ಒಳಪಟ್ಟು ಗಿಡ ನೆಡಲು ಇಲಾಖೆಗೆ ನೀಡಲಾಗಿತ್ತು. ಈ ಕುರಿತು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ನಿಯಮಾನುಸಾರ ಜಾಗ ಬಿಡಿಸಿಕೊಡಲಾಗುವುದು
ಕೊತ್ತೂರು ಮಂಜುನಾಥ್, ಶಾಸಕ, ಕೋಲಾರ
ಬೃಹತ್ ಹೋರಾಟದ ಎಚ್ಚರಿಕೆ
ಟೊಮೆಟೊ ಮಾರುಕಟ್ಟೆಗಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರದ ಕಿವಿಗೆ ಬೀಳುತ್ತಿಲ್ಲ. ಇಂದು, ನಾಳೆ ಎಂದು ಕಾಗೆ ಹಾರಿಸುತ್ತಿದ್ದಾರೆ. 60 ಎಕರೆ ಕಂದಾಯ ಭೂಮಿ ಇದೆ ಎನ್ನುತ್ತಿದ್ದು, ಅದನ್ನಾದರೂ ಮೊದಲು ಕೊಡಲಿ. ಇನ್ನುಳಿದ ಜಾಗ ಆಮೇಲೆ ಪಡೆಯಬಹುದು. ಸ್ವಲ್ಪ ದಿನ ನೋಡಿ ಬಿಡದಿ ರೀತಿ ಬೃಹತ್ ಹೋರಾಟ ಹಮ್ಮಿಕೊಳ್ಳುತ್ತೇವೆ
ಕೆ.ನಾರಾಯಣಗೌಡ, ರೈತ ಮುಖಂಡ
ಮಾಲೂರು ರಸ್ತೆ ಹಾಗೂ ಬೆಂಗಳೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಎಪಿಎಂಸಿ ಒಳಗೆ ಹೋಗಿ ಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗಿದೆ. ಹೀಗಾಗಿ, ಬೇಗನೇ ಟೊಮೆಟೊ ಮಾರುಕಟ್ಟೆಗೆ ಜಾಗ ಕಲ್ಪಿಸಬೇಕು
ಮುರಳಿ, ಟೊಮೆಟೊ ಬೆಳೆಗಾರ, ತೊಟ್ಲಿ
ಇದು ಜನಪ್ರತಿನಿಧಿಗಳು ವೈಫಲ್ಯ
ಟೊಮೆಟೊ ಮಾರುಕಟ್ಟೆಗೆ ಜಮೀನು ವಿಚಾರದಲ್ಲಿ ಕೋಲಾರ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಹೋಗುತ್ತಿರುವ ಪ್ರಸ್ತಾವಗಳ ಸಂಬಂಧ ಆದೇಶ ಮಾಡಿಸಿಕೊಳ್ಳಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಅಧಿಕಾರಿಗಳು ಕೂಡ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ. ನಾವಂತೂ ಮನವಿ ಕೊಡುತ್ತಲೇ ಇದ್ದೇವೆ. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ರೈತರು, ರೈತ ಸಂಘಟನೆಗಳು ಸುಮ್ಮನಿರಲ್ಲ
ಅಬ್ಬಣಿ ಶಿವಪ್ಪ, ರೈತ ಮುಖಂಡ, ಕೋಲಾರ
ಪರಿಸ್ಥಿತಿ ತೀರಾ ಹದಗೆಟ್ಟಿದೆ
ಎಪಿಎಂಸಿ ಮಾರುಕಟ್ಟೆ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಿದ್ದು, ಪರಿಸ್ಥಿತಿ ಹದಗೆಟ್ಟಿದೆ. ಆಡಳಿತ ಪಕ್ಷದ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ವಿರೋಧ ಪಕ್ಷದ ಮುಖಂಡರು ಬಾಯಿ ಮುಚ್ಚಿಕೊಂಡಿದ್ದಾರೆ. ಯಾರದ್ದೋ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾಡಳಿತ ಭವನ ಎದುರು ‘ಮುಳಬಾಗಿಲು ದೋಸೆ’ ಹಾಕಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಾರೆ. ಆದರೆ, ಟೊಮೆಟೊ ಮಾರುಕಟ್ಟೆಗಾಗಿ ಒಮ್ಮೆಯೂ ಪ್ರತಿಭಟನೆ ನಡೆಸಿಲ್ಲ
ಕುರುಬರಪೇಟೆ ವೆಂಕಟೇಶ್, ನಾಗರಿಕ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-18-2079901167