
ಚಿಕ್ಕಬಳ್ಳಾಪುರ: ರೆಡ್‌ಕ್ರಾಸ್‌ಗೆ ಬಾರದ ಬಾಕಿ ಹಣ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯಿಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು ಪಡೆದಿರುವ ರಕ್ತಕ್ಕೆ 2022–22ನೇ ಸಾಲಿನಿಂದ ಇಲ್ಲಿಯವರೆಗೂ ಹಣ ಬಿಡುಗಡೆ ಆಗಿಲ್ಲ.
ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ತಾಲ್ಲೂಕು ಆಸ್ಪತ್ರೆಗಳಿಂದ ರೆಡ್‌ಕ್ರಾಸ್ ಸಂಸ್ಥೆಗೆ ₹ 36,45,700 ಹಣ ಪಾವತಿ ಬಾಕಿ ಇದೆ. ಹೀಗೆ ಆರೋಗ್ಯ ಇಲಾಖೆಯಿಂದ ಹಣ ಬಾಕಿ ಇರುವುದು ರೆಡ್‌ಕ್ರಾಸ್ ಸಂಸ್ಥೆಯ ನಿರ್ವಹಣೆಗೂ ತೊಡಕಾಗಿದೆ. ಹಣ ಬಿಡುಗಡೆ ಮಾಡಿ ಎಂದು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯು ಸರ್ಕಾರಕ್ಕೆ ಪತ್ರ ಸಹ ಬರೆದಿದೆ. ಆದರೆ ಇದುವರೆಗೂ ಹಣ ಬಿಡುಗಡೆಯ ಭರವಸೆ ದೊರೆತಿಲ್ಲ.
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಈ ಬಗ್ಗೆ ಉತ್ತರ ಬಯಸಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಆ ಪ್ರಶ್ನೆಗೆ ಆರೋಗ್ಯ ಇಲಾಖೆ ಉತ್ತರ ಸಹ ನೀಡಿದೆ. ಈ ಉತ್ತರದಲ್ಲಿ ₹ 36,45,700 ಬಾಕಿ ಉಳಿಸಿಕೊಂಡಿರುವುದನ್ನು ಸರ್ಕಾರ ಮಾಹಿತಿ ನೀಡಿದೆ.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ರೆಡ್‌ಕ್ರಾಸ್ ಸಂಸ್ಥೆಯು ನೀಡಿದ ರಕ್ತಕ್ಕೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (ಜೆಎಸ್‌ಎಸ್‌ಕೆ), ಎಬಿಎಆರ್‌ಕೆ ಯೋಜನೆ ಮತ್ತು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅನುದಾನದಡಿ ಆಸ್ಪತ್ರೆಗಳು ಹಣವನ್ನು ಪಾವತಿಸಬೇಕು. ಒಂದು ಯುನಿಟ್ ರಕ್ತಕ್ಕೆ ₹ 550 ದರವಿದೆ.
ಎನ್‌ಆರ್‌ಎಚ್‌ಎಂ ಯೋಜನೆಯಡಿ ತಾಲ್ಲೂಕು ಆಸ್ಪತ್ರೆಗಳಿಂದ ತಾಯಿ ಕಾರ್ಡ್ ತರುವ ಗರ್ಭಿಣಿಯರಿಗೆ ರೆಡ್‌ಕ್ರಾಸ್ ಉಚಿತವಾಗಿ ರಕ್ತ ನೀಡುತ್ತದೆ. ಆ ರಕ್ತಕ್ಕೆ ಆಸ್ಪತ್ರೆಗಳು ತಮ್ಮ ಅನುದಾನದಡಿ ಹಣವನ್ನು ರೆಡ್‌ಕ್ರಾಸ್ ಸಂಸ್ಥೆಗೆ ನೀಡಬೇಕು.
ರಾಜ್ಯದ 31 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ಮಾತ್ರ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಚಿಕ್ಕಬಳ್ಳಾಪುರವೂ ಒಂದು. 2012ರಲ್ಲಿ ಜಿಲ್ಲೆಯಲ್ಲಿ ರಕ್ತನಿಧಿ ಕೇಂದ್ರ ಆರಂಭವಾಯಿತು. ಇಲ್ಲಿಯವರೆಗೂ ಜಿಲ್ಲೆಯಲ್ಲಿ 1,300ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಸಂಸ್ಥೆಯು ಆಯೋಜಿಸಿದೆ.
ಚಿಕ್ಕಬಳ್ಳಾಪುರದ ರೆಡ್‌ಕ್ರಾಸ್ ನಿಧಿಗೆ ಮಾಸಿಕ 1 ಸಾವಿರ ಯುನಿಟ್ ರಕ್ತದ ಬೇಡಿಕೆ ಇದೆ. ಸದ್ಯ ಮಾಸಿಕ 700ರಿಂದ 800 ಯುನಿಟ್ ರಕ್ತವು ಸಂಗ್ರಹವಾಗುತ್ತಿದೆ. ರಕ್ತನಿಧಿ ಕೇಂದ್ರವು 1,200 ಯುನಿಟ್ ಸಂಗ್ರಹ ಸಾಮರ್ಥ್ಯ ಹೊಂದಿದೆ.
ದಿನದ 24 ಗಂಟೆಯೂ ರಕ್ತನಿಧಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ವೈದ್ಯರು ಸೇರಿ 18 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ, ನಂದಿ ವೈದ್ಯಕೀಯ ಶಿಕ್ಷಣ ಕಾಲೇಜಿನ ಜೊತೆಗೆ ಜಿಲ್ಲೆಯ ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ ರಕ್ತ ಶೇಖರಣಾ ಘಟಕಗಳಿಗೂ ರಕ್ತವನ್ನು ಪೂರೈಸಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭವಾದ ಮೊದಲ ರಕ್ತನಿಧಿ ಕೇಂದ್ರ ಇದಾಗಿದೆ.
ಜಿಲ್ಲೆಯಷ್ಟೇ ಅಲ್ಲ ನೆರೆಯ ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಜಿಲ್ಲೆಗಳಿಗೂ ಚಿಕ್ಕಬಳ್ಳಾಪುರ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದಿಂದ ರಕ್ತಪೂರೈಕೆ ಆಗುತ್ತಿದೆ. ಇದು ಘಟಕ ಹೆಗ್ಗಳಿಕೆ ಎನಿಸಿದೆ. 2023–24ನೇ ಸಾಲಿನಲ್ಲಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರವು 6,804 ಯುನಿಟ್, 2024–25ನೇ ಸಾಲಿನಲ್ಲಿ 7,434 ಯುನಿಟ್, 2025–26ನೇ ಸಾಲಿನಲ್ಲಿ ರೆಡ್‌ಕ್ರಾಸ್ 8 ಸಾವಿರಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಿದೆ.
ಹೀಗೆ ರಕ್ತದ ವಿಚಾರವಾಗಿ ಸಂಸ್ಥೆ ಮಹತ್ವದ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗೆ ಈಗ ಅನುದಾನದ ಕೊರತೆಯೂ ಎದುರಾಗಿದೆ. ರೆಡ್‌ಕ್ರಾಸ್ ಭವನ ನಿರ್ಮಾಣಕ್ಕೆ ಸಂಸ್ಥೆ ಮುಂದಾಗಿದ್ದು ಕಾಮಗಾರಿಯೂ ನಡೆಯುತ್ತಿದೆ. ಅನುದಾನದ ಲಭ್ಯವಿಲ್ಲದ ಕಾರಣ ಕಾಮಗಾರಿ ಕುಂಟಿತವಾಗಿದೆ. ಸರ್ಕಾರ ₹ 36 ಲಕ್ಷ ಬಿಡುಗಡೆ ಮಾಡಿದರೆ ನೆರವಾಗಲಿದೆ ಎನ್ನುತ್ತಾರೆ ರೆಡ್‌ಕ್ರಾಸ್ ಪದಾಧಿಕಾರಿಗಳು.
‘ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’
ಐದು ವರ್ಷದಿಂದ ಬಾಕಿ ಹಣ ಬೆಳೆಯುತ್ತಲೇ ಇದೆ. ನಾವು ರಕ್ತ ನೀಡುತ್ತಲೇ ಇದ್ದೇವೆ. ದೊಡ್ಡ ಪ್ರಮಾಣದಲ್ಲಿ ಹಣ ಸಂಸ್ಥೆಗೆ ಬರಬೇಕು. ಈ ಹಣ ದೊರೆತರೆ ಸಂಸ್ಥೆಯ ನಿರ್ವಹಣೆಗೂ ಅನುಕೂಲವಾಗುತ್ತದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಂ.ಜಯರಾಮ್.
‘ಜಿಲ್ಲಾ ರೆಡ್‌ಕ್ರಾಸ್ ಭವನ ನಿರ್ಮಾಣವೂ ನಡೆಯುತ್ತಿದೆ. ಒಳಾಂಗಣ ವಿನ್ಯಾಸ ಸೇರಿ ₹ 4.50 ಕೋಟಿ ವೆಚ್ಚವಾಗಲಿದೆ. ಈ ಕಾಮಗಾರಿಗೆ ಹಣ ತುರ್ತಾಗಿ ಅಗತ್ಯವಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವುದು ಒಂದೇ ರಕ್ತನಿಧಿ ಕೇಂದ್ರ. ಸರ್ಕಾರ ಹಣ ದೊರಕಿಸಿಕೊಟ್ಟರೆ ನಿತ್ಯದ ನಿರ್ವಹಣೆ ಮತ್ತು ಭವನ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಗರ್ಭಿಣಿಯರಿಗೆ ಹೆರಿಗೆಯಾದ ವೇಳೆ ಉಚಿತವಾಗಿ ರಕ್ತ ನೀಡಬೇಕು. ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿ ಇದಕ್ಕೆ ಕೇಂದ್ರ ಸರ್ಕಾರ ಹಣ ಸಹ ನೀಡುತ್ತಿತ್ತು. ಆದರೆ ನಂತರ ಈ ಹಣ ಬಿಡುಗಡೆ ಸ್ಥಗಿತವಾಯಿತು. ಈ ಹಿಂದಿನ ಹಣ ರೆಡ್‌ಕ್ರಾಸ್ ಸಂಸ್ಥೆಗೆ ಬಂದಿಲ್ಲ. ಈ ಬಗ್ಗೆ ರೆಡ್‌ಕ್ರಾಸ್‌ನವರು ನಮ್ಮ ಗಮನಕ್ಕೆ ತರಬೇಕಿತ್ತು’ ಎಂದು ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಶಿಕ್ಷಣ ಕಾಲೇಜಿನ ನಿರ್ದೇಶಕ ಡಾ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯು ಈ ಹಿಂದೆ ಆರೋಗ್ಯ ಇಲಾಖೆ ಅಧೀನದಲ್ಲಿ ಇತ್ತು. ಈಗ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿದೆ. ಇಷ್ಟು ಹಣ ಬಾಕಿ ಇದೆ ಎಂದು ತಿಳಿಸಿದ್ದರೆ ನಾವು ಆರೋಗ್ಯ ಸೌಧಕ್ಕೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದೆವು. ಅವರ ಪ್ರತಿಕ್ರಿಯೆ ಆಧರಿಸಿ ಹಂತ ಹಂತವಾಗಿ ಹಣ ನೀಡುತ್ತಿದ್ದೆವು. ಆದರೆ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯವರು ಬಾಕಿ ಹಣದ ವಿಚಾರವಾಗಿ ನಮಗೆ ಮಾಹಿತಿ ನೀಡಿಲ್ಲ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-16-1902242267