
ಮುಚ್ಚುವ ಸ್ಥಿತಿಯಲ್ಲಿ ಲಕ್ಷ್ಮೇಶ್ವರದ ಸರ್ಕಾರಿ ಶಾಲೆ ..
ಲಕ್ಷ್ಮೇಶ್ವರ: ಪಟ್ಟಣದ ಕೆಂಚಲಾಪುರ ಓಣಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೇ ಇಲ್ಲದ ಕಾರಣ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದೆ.
1993ರಲ್ಲಿ ಆರಂಭವಾದ ಶಾಲೆಯಲ್ಲಿ ಈವರೆಗೆ ಸಾವಿರಾರು ಮಕ್ಕಳು ಶಿಕ್ಷಣ ಪಡೆದಿದ್ದಾರೆ. ವಿವಿಧ ಕಾರಣಗಳಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶಾತಿ ಪ್ರಮಾಣ ಕಡಿಮೆ ಆಗುತ್ತಿದ್ದು, ಈ ವರ್ಷ ಶೂನ್ಯಕ್ಕೆ ತಲುಪಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೇವಲ 11 ಮಕ್ಕಳು ದಾಖಲಾತಿ ಪಡೆದಿದ್ದರು. ಈ ಪೈಕಿ ಮೂವರು ಮಕ್ಕಳು ಬೇರೆ ಊರಿಗೆ ಮತ್ತು ಎಂಟು ಮಕ್ಕಳು ವರ್ಗಾವಣೆ ಪತ್ರ ಪಡೆದು ಪಟ್ಟಣದ ಬೇರೆ ಶಾಲೆಗೆ ಹೋಗುತ್ತಿದ್ದಾರೆ. ಹೀಗಾಗಿ ಶಾಲೆಯಲ್ಲಿ ಒಬ್ಬರೂ ವಿದ್ಯಾರ್ಥಿಗಳು ಇಲ್ಲ.
ಶಾಲೆಯ ದುಃಸ್ಥಿತಿ ತಿಳಿದ ಪಾಲಕರು ಹಾಗೂ ಓಣಿಯ ಹಿರಿಯರು ಶಾಲೆಗೆ ಧಾವಿಸಿ ಶಿಕ್ಷಕರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಸ್.ಕೆ. ಹವಾಲ್ದಾರ ಹಾಗೂ ಪ್ರೌಢ ವಿಭಾಗದ ಶಿಕ್ಷಣ ಸಂಯೋಜಕ ರಾಘವೇಂದ್ರ ಜೋಶಿ ಅವರು ಮಂಗಳವಾರ ಶಾಲೆಗೆ ಭೇಟಿ ನೀಡಿದರು. ಎಸ್‍ಡಿಎಂಸಿ ಸದಸ್ಯರು, ಪಾಲಕರೊಂದಿಗೆ ಚರ್ಚಿಸಿದರು.
‘ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮರೀಚಿಕೆ ಆಗಿದೆ. ಹೀಗಾಗಿ, ಪಾಲಕರು ತಮ್ಮ ಮಕ್ಕಳನ್ನು ಇಲ್ಲಿನ ಶಾಲೆಗೆ ಸೇರಿಸಲು ನಿರಾಕರಿಸುತ್ತಿದ್ದಾರೆ’ ಎಂದು ಪಾಲಕರು ತಿಳಿಸಿದರು.
‘ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಏನಾದರೂ ಸಮಸ್ಯೆ ಇದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಬಿಇಒ ಶಿವರಾಜ ಸೀಮಿಕೇರಿ ಸಲಹೆ ನೀಡಿದರು. ಸಿಆರ್‌ಸಿ ಉಮೇಶ ನೇಕಾರ, ಶ್ರೀನಿವಾಸ ಮತ್ತೂರ, ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಮುಖ್ಯಶಿಕ್ಷಕ ಬಿ.ಎಂ. ಕುಂಬಾರ, ಶಿಕ್ಷಕಿಯರಾದ ಎಲ್.ಕೆ. ಹೆಬ್ಬಳ್ಳಿ, ಭಾಗ್ಯಶ್ರೀ ಪಾಲ್ಗೊಂಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-23-2132766628