ಬಂಗಾರಪೇಟೆ: ಕೊತ್ತಂಬರಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ

ಬಂಗಾರಪೇಟೆ: ಕೊತ್ತಂಬರಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ

ಬಂಗಾರಪೇಟೆ: ಕೊತ್ತಂಬರಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ

ಬಂಗಾರಪೇಟೆ: ಸಾಲ-ಸೋಲ ಮಾಡಿ ಹೂಡಿದ ಬಂಡವಾಳ ಹಾಗೂ ರಾತ್ರಿ–ಹಗಲು ಎನ್ನದೆ ಸುರಿಸಿದ ಬೆವರಿನ ಫಲವಾಗಿ ಹೊಲದಲ್ಲಿ ನಳನಳಿಸುತ್ತಿದ್ದ ಕೊತ್ತಂಬರಿ ಬೆಳೆಗೆ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತ ಉಂಟಾಗಿದೆ.

ತಾಲ್ಲೂಕಿನಾದ್ಯಂತ ‘ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲ’ ಎಂಬಂತಾಗಿದ್ದು, ನೂರಾರು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ ಹವಾಮಾನದ ಏರುಪೇರು ಮತ್ತು ಕೀಟಬಾಧೆ ನಡುವೆಯೂ ರೈತರು ಕೊತ್ತಂಬರಿ ಬೆಳೆದಿದ್ದಾರೆ. ಸೂಕ್ತ ಸಮಯಕ್ಕೆ ಮಳೆಯಾದ ಕಾರಣ ಇಳುವರಿಯೂ ಉತ್ತಮವಾಗಿ ಬಂದಿತ್ತು. ಸ್ಥಳೀಯ ಹಾಗೂ ಹೊರರಾಜ್ಯಗಳ ಮಾರುಕಟ್ಟೆಗಳಲ್ಲಿ ನಲ್ಲೆ ಕೊತ್ತಂಬರಿಗೆ ಭಾರಿ ಬೇಡಿಕೆ ಇದ್ದು, ಒಳ್ಳೆಯ ಲಾಭ ಗಳಿಸಬಹುದು ಎಂಬ ರೈತರ ನಿರೀಕ್ಷೆ ಈಗ ಹುಸಿಯಾಗಿದೆ.

ತಾಲ್ಲೂಕಿನ ಪ್ರಮುಖ ಗ್ರಾಮಗಳಾದ ಕಾಮಸಮುದ್ರ, ಬೂದಿಕೋಟೆ, ಹುಲಿಬೆಲೆ ಹಾಗೂ ನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಒಂದೇ ಬಾರಿಗೆ ಕೊತ್ತಂಬರಿ ಕೊಯ್ಲಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಆವಕದಿಂದಾಗಿ ಕೊತ್ತಂಬರಿ ದರ ಕುಸಿತಕ್ಕೆ ಮುಖ್ಯ ಕಾರಣ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಪ್ರಮುಖ ಮಾರುಕಟ್ಟೆಗಳಿಗೆ ಇಲ್ಲಿಂದ ನಿಯಮಿತವಾಗಿ ಕೊತ್ತಂಬರಿ ರಫ್ತಾಗುತ್ತಿತ್ತು. ಆದರೆ, ಅಲ್ಲಿಯೂ ಸ್ಥಳೀಯವಾಗಿ ಕೊತ್ತಂಬರಿ ಪೂರೈಕೆಯಾಗುತ್ತಿದ್ದು, ಹೊರ ರಾಜ್ಯದ ವರ್ತಕರು ಬಂಗಾರಪೇಟೆ ಹಾಗೂ ಕೋಲಾರ ಎಪಿಎಂಸಿಗೆ ಬರುವವರ ಸಂಖ್ಯೆ ಕುಸಿದಿದೆ. ಕೊತ್ತಂಬರಿ ಶೀಘ್ರವೇ ಹಾಳಾಗುವ ಹಸಿರು ಸೊಪ್ಪಾಗಿದೆ. ಕೊಯ್ಲು ಮಾಡಿದ 24 ಗಂಟೆಗಳಲ್ಲಿ ಮಾರಾಟವಾಗದಿದ್ದರೆ ಸೊಪ್ಪು ಬಾಡಿ ಹೋಗುತ್ತದೆ. ತಾಲ್ಲೂಕಿನಲ್ಲಿ ಸುಸಜ್ಜಿತ ಶೀತಲ ಗೃಹ ಹಾಗೂ ಸಂಸ್ಕರಣಾ ಘಟಕಗಳಿಲ್ಲದ ಕಾರಣ, ದಲ್ಲಾಳಿಗಳು ನಿಗದಿಪಡಿಸಿದ ಅತ್ಯಲ್ಪ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ರೈತರು.

ಒಂದು ಎಕರೆಯಲ್ಲಿ ಕೊತ್ತಂಬರಿ ಬೆಳೆಯಲು ಬೀಜ, ಉಳುಮೆ ಹಾಗೂ ಗೊಬ್ಬರ ವೆಚ್ಚ ₹25,000–₹30,000, ಕೂಲಿ ಮತ್ತು ಕೊಯ್ಲು ವೆಚ್ಚ ₹10,000–₹12,000, ಸಾರಿಗೆ ಹಾಗೂ ಮಾರುಕಟ್ಟೆ ಕಮಿಷನ್ ₹5,000 ಹೀಗೆ, ಒಟ್ಟಾರೆ, ₹40,000–₹47,000 ಹೂಡಿಕೆ ಮಾಡಿ ಬೆಳೆಯಲಾದ ಕೊತ್ತಂಬರಿಯು ಮಾರುಕಟ್ಟೆಯಲ್ಲಿ ₹8,000–₹9,000ಕ್ಕೆ ಬಿಕರಿಯಾಗುತ್ತಿದೆ. ರೈತರು ಕೊತ್ತಂಬರಿ ಬೆಳೆಯಲು ವೆಚ್ಚವಾಗುವ ಒಟ್ಟಾರೆ ವೆಚ್ಚದ ಪೈಕಿ ₹32 ಸಾವಿರದಿಂದ 35 ಸಾವಿರ ವೆಚ್ಚ ಕೈಯಿಂದ ಬರಿಸುವ ಅನಿವಾರ್ಯತೆ ಎದುರಾಗಿದೆ.

ರೈತರು ಪಡೆದ ಆದಾಯವು ಅವರು ಮಾಡಿದ ಒಟ್ಟು ಹೂಡಿಕೆಯ ಶೇ 25ರಷ್ಟು ಸಹ ತಲುಪುತ್ತಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಒಯ್ದು ಸಾಲದ ಹೊರೆ ಹೆಚ್ಚಿಸಿಕೊಳ್ಳುವ ಬದಲು, ಕನಿಷ್ಠ ದನ-ಕರುಗಳಿಗಾದರೂ ಮೇವಾಗಲಿ ಎಂದು ದನಗಳನ್ನು ಹೊಲಕ್ಕೆ ಬಿಡುತ್ತಿದ್ದಾರೆ ರೈತರು.

ಕೊಯ್ಲು ಕೂಲಿ ಕೊಡುವ ಶಕ್ತಿಯೂ ಇಲ್ಲದೆ, ಮುಂದಿನ ಬೆಳೆಗೆ ಜಮೀನು ಹದಗೊಳಿಸಲು ಕೊತ್ತಂಬರಿ ಗಿಡಗಳ ಮೇಲೆಟ್ರ್ಯಾಕ್ಟರ್ ಹರಿಸಿ ಗೊಬ್ಬರವಾಗಿಸುತ್ತಿದ್ದಾರೆ. ಹಗಲಿರುಳು ಕಣ್ಣಲ್ಲಿ ಎಣ್ಣೆ ಬಿಟ್ಟು ಸಾಕಿದ ಬೆಳೆ ಕಣ್ಣೆದುರೇ ನಾಶವಾಗುವುದನ್ನು ಕಂಡು ರೈತರು ದುಃಖಿತರಾಗಿದ್ದಾರೆ.

ಈ ಕಠಿಣ ಪರಿಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆ ರೈತರ ನೆರವಿಗೆ ಧಾವಿಸಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ತಕ್ಷಣ ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಸಿ, ನಷ್ಟ ಅನುಭವಿಸಿದ ಕೊತ್ತಂಬರಿ ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದರು.

ಹಾಕಿದ ಬಂಡವಾಳವೂ ಬರಲಿಲ್ಲ

ಒಂದು ಎಕರೆ ಕೊತ್ತಂಬರಿ ಬೆಳೆಯಲು ಕನಿಷ್ಠ ₹40,000ಕ್ಕೂ ಹೆಚ್ಚು ವೆಚ್ಚವಾಗಿದೆ. ಆದರೆ, ಈಗಿನ ಮಾರುಕಟ್ಟೆಯಲ್ಲಿ ಒಂದು ಕಟ್ಟು ಕೊತ್ತಂಬರಿಗೆ ₹2 ರಿಂದ ₹3 ಪಡೆಯುವುದೂ ಕಷ್ಟವಾಗಿದೆ. ಕೊಯ್ಲು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಸಾರಿಗೆ ವೆಚ್ಚವೂ ನಮಗೆ ಸಿಗುತ್ತಿಲ್ಲ. ಹೀಗಾಗಿ ಹೊಲದಲ್ಲೇ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಕೆಡಿಸುತ್ತಿದ್ದೇವೆ.

-ವೆಂಕಟೇಶಪ್ಪ, ಸಂಕಷ್ಟಕ್ಕೊಳಗಾದ ಕೊತ್ತಂಬರಿ ಬೆಳೆಗಾರ

ರೈತರು ಬೆಳೆ ವೈವಿಧ್ಯತೆ ಅನುಸರಿಸಲಿ

ತಾಲ್ಲೂಕಿನ ಹೆಚ್ಚಿನ ರೈತರು ಅನುಕರಣೀಯವಾಗಿ ಒಂದೇ ಬೆಳೆಯನ್ನು ಅಪಾರ ಪ್ರಮಾಣದಲ್ಲಿ ಬೆಳೆದಿದ್ದೇ ಬೆಲೆ ಕುಸಿತಕ್ಕೆ ಕಾರಣ. ರೈತರು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಬೆಳೆ ವೈವಿಧ್ಯತೆ ಮೈಗೂಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ತೋಟಗಾರಿಕೆ ಇಲಾಖೆಯಿಂದ ಯೋಜಿತ ಬೆಳೆ ಪದ್ಧತಿ ಹಾಗೂ ಪರ್ಯಾಯ ಬೆಳೆಗಳ ಕುರಿತು ಅರಿವು ಮೂಡಿಸಲಾಗುವುದು.

-ಶಿವ ಕುಮಾರಿ, ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕೆ ಇಲಾಖೆ, ಬಂಗಾರಪೇಟೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-18-1638985235

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ