
ಕೋಲಾರ: ಬರದಿಂದ ಬರಿದಾದ 995 ಕೆರೆ...
ಕೋಲಾರ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರಗಾಲದ ಛಾಯೆ ನಿರ್ಮಾಣವಾಗಿದ್ದು, ಜೀವನಾಡಿ ಎನಿಸಿರುವ ಕೆರೆಗಳು ಬರಿದಾಗುತ್ತಿವೆ. ಇದರಿಂದಾಗಿ ಕೊಳವೆಬಾವಿಗಳೂ ಬತ್ತುತ್ತಿದ್ದು, ಮುಂದೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ಕೆ.ಸಿ.ವ್ಯಾಲಿ ನೀರು ಹರಿಯುವ ಪ್ರದೇಶದ ಕೆರೆಗಳನ್ನು ಹೊರತುಪಡಿಸಿ ಇನ್ನುಳಿದ ಕೆರೆಗಳಲ್ಲಿನ ನೀರು ಗಣನೀಯ ಪ್ರಮಾಣದಲ್ಲಿ ತಗ್ಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 3,232 ಸಣ್ಣ ಮತ್ತು ದೊಡ್ಡ ಕೆರೆಗಳಿದ್ದು, ಇವುಗಳಲ್ಲಿ ಈಗಾಗಲೇ 995 ಕೆರೆಗಳು ಸಂಪೂರ್ಣ ಬರಿದಾಗಿವೆ. 1,885 ಕೆರೆಗಳಲ್ಲಿ ನೀರಿನ ಪ್ರಮಾಣ ಕೇವಲ ಶೇ 50ರೊಳಗಿದೆ. 23 ಕೆರೆಗಳು ಮಾತ್ರ ಪೂರ್ಣ ತುಂಬಿವೆ.
ಸಣ್ಣ ನೀರಾವರಿ ಇಲಾಖೆಯ 143 ಕೆರೆಗಳ ಪೈಕಿ 6 ಕೆರೆಗಳು ಮಾತ್ರ ಪೂರ್ಣ ತುಂಬಿವೆ, 13 ಕೆರೆಗಳು ಸಂಪೂರ್ಣ ಬರಿದಾಗಿವೆ. ಪಂಚಾಯತ್ ರಾಜ್ ಇಲಾಖೆಯ 1,887 ಕೆರೆಗಳ ಪೈಕಿ 763 ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಕಂದಾಯ ಇಲಾಖೆಯ 1,202 ಕೆರೆಗಳ ಪೈಕಿ 219ರಲ್ಲಿ ನೀರಿಲ್ಲ.
ಇಷ್ಟು ಹೊತ್ತಿಗೆ ಕೆರೆಗಳು ಕೋಡಿ ಒಡೆದು ನೀರು ಹರಿಯಬೇಕಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಪರಿಣಾಮ ಈ ಜಲಸಂಕಷ್ಟ ಎದುರಾಗಿದೆ. ಕೃಷಿ ಮತ್ತು ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ಗ್ರಾಮೀಣ ಭಾಗದ ಜನರಿಗೆ ಇದು ದೊಡ್ಡ ಪೆಟ್ಟು ನೀಡಿದೆ.
ಜಿಲ್ಲೆಯಲ್ಲಿ ಜೂನ್ 1ರಿಂದ ಆ.14ರವರೆಗೆ 183 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಈ ಅವಧಿಯಲ್ಲಿ ಕೇವಲ 102 ಮಿ.ಮೀ. ಮಳೆಯಾಗಿದೆ. ಈ ಮೂಲಕ ಶೇ 44ರಷ್ಟು ಮಳೆ ಕೊರತೆ ಉಂಟಾಗಿದೆ. ಜುಲೈ ತಿಂಗಳಲ್ಲೇ ಶೇ 87ರಷ್ಟು ಮಳೆ ಕೊರತೆ ಆಗಿತ್ತು.
‘ನಮ್ಮ ಭಾಗದ ಹಲವು ಕೆರೆಗಳಲ್ಲಿ ನೀರಿಲ್ಲ. 43 ಎಕರೆ ಹರಡಿಕೊಂಡಿರುವ ಅಣ್ಣೀಕೆರೆ ಕೂಡ ಬರಿದಾಗಿದೆ. ಕೆರೆಗಳಲ್ಲಿ ನೀರಿಲ್ಲದ ಕಾರಣ ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ. ಜಾನುವಾರು, ಪಕ್ಷಿಗಳು, ಕಾಡುಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಅಲ್ಲದೇ, ಕೆರೆಗಳಲ್ಲಿ ಮಣ್ಣು ಅಗೆಯುವ ದಂಧೆ ಜೋರಾಗಿದೆ. ಹೆಚ್ಚಾಗಿ ಇಟ್ಟಿಗೆ ಫ್ಯಾಕ್ಟರಿಯವರು ಮಣ್ಣು ಅಗೆದು ಕೊಂಡೊಯ್ಯುತ್ತಿದ್ದಾರೆ. ಇದರಿಂದ ಕೆರೆಗಳ ಸ್ವರೂಪ ಹಾಳಾಗುತ್ತಿದೆ’ ಎಂದು ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮಸ್ಥ ಟಿ.ವಿ.ರಮೇಶ್ ಹೇಳಿದರು.
ವಾರ್ಷಿಕ ಸರಾಸರಿ ಮಳೆ ಸುರಿದಾಗ ಮಾತ್ರವೇ ಕೆರೆಗಳಲ್ಲಿ ಒಂದಷ್ಟು ನೀರು ಸಂಗ್ರಹವಾಗುತ್ತದೆ. ಮುಂಗಾರು ಹಂಗಾಮಿನಲ್ಲೇ ಕೆರೆಗಳು ಬರಿದಾದರೆ ಮುಂದಿನ ಪರಿಸ್ಥಿತಿ ಏನೆಂಬುದು ರೈತಾಪಿ ವರ್ಗದ ಚಿಂತೆಗೆ ಕಾರಣವಾಗಿದೆ.
ಶಾಶ್ವತ ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಜಿಲ್ಲಾಡಳಿತದ ಪಾಲಿಗೆ ಸವಾಲಾಗಿದೆ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಆಯಾಯ ತಾಲ್ಲೂಕಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಪಟ್ಟಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆ ಮೂಲಕ ಕೆರೆಗಳಿಗೆ ನೀರು ಹರಿಸುವ ಭರವಸೆ ನೀಡುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಸಾಧ್ಯವಾಗುತ್ತಿಲ್ಲ. 2027ರ ಜುಲೈ ವೇಳೆಗೆ ಕೆರೆಗಳಿಗೆ ಹರಿಯಲಿದೆ ಎಂಬುದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮಣ್ಣು ಸಾಗಣೆ ದಂಧೆಗೆ ಆಸ್ಪದ
ಕೆರೆಗಳಲ್ಲಿ ನೀರಿಲ್ಲದ ಕಾರಣ ಮಣ್ಣು ಅಗೆಯುವ ದಂಧೆಗೆ ಆಸ್ಪದ ನೀಡಿದಂತಾಗಿದೆ. ಕೆರೆಗಳಿಗೆ ಇಳಿಯುತ್ತಿರುವ ಜೆಸಿಬಿಗಳು, ಹಿಟಾಚಿಗಳು ಎಲ್ಲೆಂದರಲ್ಲಿ ಮಿತಿ ಇಲ್ಲದೆ ಅಗೆದು ಟ್ರಾಕ್ಟರ್ ಮತ್ತು ಟಿಪ್ಪರ್‌ನಲ್ಲಿ ಸಾಗಿಸುತ್ತಿವೆ. ಈ ಸಂಬಂಧ ಅಧಿಕಾರಿಗಳು ಮಾಹಿತಿ ನೀಡಿದ್ದರೂ ಕ್ರಮವಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕೆರೆಗಳ ಹೂಳು ಹಾಗೂ ಮಣ್ಣನ್ನು ಯಾವುದೇ ರೀತಿಯ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲು ಹಾಗೂ ಬೇರೆಡೆ ಸಾಗಣೆ ಮಾಡುವುದನ್ನು ಸಣ್ಣ ನೀರಾವರಿ ಇಲಾಖೆ ನಿಷೇಧಿಸಿದೆ. ಆಯಾಯ ಕೆರೆಗಳ ಜಲಾನಯನ ಪ್ರದೇಶದ ಅಚ್ಚುಕಟ್ಟುದಾರರು ಮಾತ್ರ ಈ ಹೂಳಿನ ಮೇಲೆ ಹಕ್ಕು ಹೊಂದಿರುತ್ತಾರೆ. ಅನುಮತಿ ಪಡೆದು ಗೌರವಧನ ನೀಡಿ ಮಣ್ಣು ಅಗೆಯುವವರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂಬ ಆರೋಪವೂ ಇದೆ.
ಜಾನುವಾರುಗಳಿಗೆ ತೊಟ್ಟಿ ವ್ಯವಸ್ಥೆ: ಸೂಚನೆ
ಎರಡು ದಿನಗಳ ಹಿಂದೆ ಕೋಲಾರ ತಾಲ್ಲೂಕು ಟಾಸ್ಕ್ ಫೋರ್ಸ್ ಸಭೆ ನಡೆಸಿದ ಶಾಸಕ ಕೊತ್ತೂರು ಮಂಜುನಾಥ್, ತೊಟ್ಟಿ ವ್ಯವಸ್ಥೆ ಮಾಡಿ ಜಾನುವಾರುಗಳಿಗೆ ಕುಡಿಯುವ ನೀರು ಕೊಡಬೇಕೆಂದು ಪಿಡಿಒಗಳಿಗೆ ಸೂಚನೆ ನೀಡಿದ್ದಾರೆ.
ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕೂಡ ಜಾನುವಾರುಗಳ ಮೇವು ಹಾಗೂ ನೀರಿಗೆ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-18-1085456819