ಬಾಗೇಪಲ್ಲಿ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

ಬಾಗೇಪಲ್ಲಿ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

ಬಾಗೇಪಲ್ಲಿ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

ಬಾಗೇಪಲ್ಲಿ: ತಾಲ್ಲೂಕಿನ 10 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಳೆದ ವರ್ಷಕ್ಕಿಂತ 2026- 27ನೇ ಸಾಲಿನಲ್ಲಿ ಹೆಚ್ಚಿದೆ.

ಡಿ.ಎಂ. ನಂಜುಂಡಪ್ಪ ವರದಿಯಂತೆ ಬಾಗೇಪಲ್ಲಿ ತಾಲ್ಲೂಕು ಅತಿ ಹಿಂದುಳಿದಿದೆ. ಆಂಧ್ರಪ್ರದೇಶದ ಗಡಿಯ ಅಂಚಿನಲ್ಲಿ, ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ಕುಗ್ರಾಮಗಳು ಮತ್ತು 30ಕ್ಕೂ ಹೆಚ್ಚು ಲಂಬಾಣಿ ತಾಂಡಗಳಿವೆ. ಕಸಬಾ, ಪಾತಪಾಳ್ಯ, ಮಿಟ್ಟೇಮರಿ, ಗೂಳೂರು ಹೋಬಳಿ ಕೇಂದ್ರಗಳನ್ನು ಒಳಗೊಂಡಿದೆ.

ಪಟ್ಟಣದಲ್ಲಿ 15ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಗೂಳೂರಿನಲ್ಲಿ ಎರಡು, ಮಾರ್ಗಾನುಕುಂಟೆಯಲ್ಲಿ ಒಂದು, ಪಾತಪಾಳ್ಯದಲ್ಲಿ ಎರಡು, ಸೋಮನಾಥಪುರ, ಕಾರಕೂರು ಕ್ರಾಸ್ ಮತ್ತು ಮಿಟ್ಟೇಮರಿಯಲ್ಲಿ ತಲಾ ಒಂದು ಹಾಗೂ ಯಲ್ಲಂಪಲ್ಲಿಯಲ್ಲಿ ಎರಡು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಆದಾಗ್ಯೂ ಸರ್ಕಾರಿ ಶಾಲೆಗಳತ್ತ ಪೋಷಕರು ಒಲವು ತೋರಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 10 ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಏರಿಕೆ ಆಗಿದೆ. ತಾಲ್ಲೂಕಿನ ದೇವರಗುಡಿಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನಲ್ಲಿ 105 ಮಕ್ಕಳಿದ್ದರು. ಪ್ರಸಕ್ತ ವರ್ಷದಲ್ಲಿ 110 ಮಕ್ಕಳು ಇದ್ದಾರೆ. ಮುದ್ದಲಪಲ್ಲಿ ಸರ್ಕಾರಿ ಶಾಲೆಯಲ್ಲಿ ಹಿಂದಿನ ವರ್ಷ 30 ಮಕ್ಕಳು ಕಲಿಯುತ್ತಿದ್ದರು. ಇದೀಗ 32ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದ ಗಡಿಯ ಜಿ. ಚರ್ಲೋಪಲ್ಲಿ ಸರ್ಕಾರಿ ಶಾಲೆಯಲ್ಲಿ ಹಿಂದೆ 36 ಮಕ್ಕಳು ಇದ್ದರು. ಈಗ ಅದು 37ಕ್ಕೆ ಹಿಗ್ಗಿದೆ.

ಪಟ್ಟಣದಲ್ಲಿ 20ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದರೂ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ 350 ಮಕ್ಕಳು ದಾಖಲಾಗಿದ್ದರು. ಪ್ರಸಕ್ತ ವರ್ಷದಲ್ಲಿ ಈಗ ಅದು 400ಕ್ಕೆ ಏರಿದೆ. ಪಟ್ಟಣದ ಸರ್ಕಾರಿ ಮಾದರಿ ಬಾಲಕಿಯರ ಪ್ರಾಥಮಿಕ (ಶಾಸಕರ ದತ್ತು) ಶಾಲೆಯಲ್ಲಿ ಹಿಂದಿನ ವರ್ಷ 401 ಮಕ್ಕಳು ಇದ್ದರು. ಇದೀಗ 425ಕ್ಕೆ ಹೆಚ್ಚಿದೆ.

ಮಿಟ್ಟೇಮರಿ ಸರ್ಕಾರಿ ಶಾಲೆಯಲ್ಲಿ ಹಿಂದಿನ ವರ್ಷ 220 ಮಕ್ಕಳು ಕಲಿಯುತ್ತಿದ್ದರು. ಈ ವರ್ಷ 266 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪಾತಪಾಳ್ಯ ಸರ್ಕಾರಿ ಶಾಲೆಯಲ್ಲಿ ಹಿಂದಿನ ವರ್ಷ 204 ಇದ್ದ ಮಕ್ಕಳ ಸಂಖ್ಯೆ ಈ ವರ್ಷ 265ಕ್ಕೆ ಹೆಚ್ಚಿದೆ. ಮಾರ್ಗಾನುಕುಂಟೆ ಶಾಲೆಯಲ್ಲಿ 224ರಿಂದ 259ಕ್ಕೆ, ಚಾಕವೇಲು ಸರ್ಕಾರಿ ಶಾಲೆಯಲ್ಲಿ 192ರಿಂದ 215ಕ್ಕೆ, ದೇವರಗುಡಿಪಲ್ಲಿ ಆದರ್ಶ ವಿದ್ಯಾಲಯದಲ್ಲಿ 472ರಿಂದ 514 ಮಕ್ಕಳ ದಾಖಲಾತಿ ಹೆಚ್ಚಿದೆ.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಿದರೆ ಶಾಲೆ ಮತ್ತು ಮುಖ್ಯಶಿಕ್ಷಕರಿಗೆ ಬಹುಮಾನ ನೀಡಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಘೋಷಿಸಿದ್ದರು. ಈ ಪ್ರೋತ್ಸಾಹವೂ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಜೂನ್‌, ಜುಲೈ ತಿಂಗಳಿನಲ್ಲಿ ನಿರಂತರವಾಗಿ ದಾಖಲಾತಿ ಅಭಿಯಾನ ನಡೆಸಿದ್ದೂ ಸಹಕಾರಿಯಾಗಿದೆ.

‘ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ ದೇಣಿಗೆ ಹೆಚ್ಚಿದೆ. ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಗೆ ಮಕ್ಕಳನ್ನು ದಾಖಲಿಸಿದ್ದೇನೆ. ಇಲ್ಲಿ ಗುಣಮಟ್ಟದ ಶಿಕ್ಷಣ, ಇಂಗ್ಲಿಷ್‌, ಕಂಪ್ಯೂಟರ್ ಕಲಿಕೆ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ಪೂರೈಕೆ, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿದ್ದಾರೆ’ ಎಂದು ಪೋಷಕರಾದ ಶ್ರೀನಿವಾಸ್ ಹೇಳಿದರು.

‘ನಮ್ಮೂರ ಶಾಲೆ, ನಮ್ಮೂರ ಹೆಮ್ಮೆ’ ಅಭಿಯಾನ ಜಾಗೃತಿ

ಶಿಕ್ಷಕರು ಮನಸ್ಸು ಮಾಡಿದರೆ ಶಾಲೆ ಪ್ರಗತಿ ಸಾಧ್ಯ ಎಂಬುದಕ್ಕೆ ಈ ದಾಖಲಾತಿ ಹೆಚ್ಚಳವೇ ಸಾಕ್ಷಿ. ಪಟ್ಟಣದ ಬಾಲಕರ, ಬಾಲಕಿಯರ ಸರ್ಕಾರಿ ಶಾಲೆಗಳಲ್ಲಿ ಈ ವರ್ಷ 50ಕ್ಕೂ ಹೆಚ್ಚು ಹೊಸ ದಾಖಲಾತಿಗಳು ಆಗಿವೆ. ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸ್ಥಿರವಾಗಿದೆ. ‘ನಮ್ಮೂರ ಶಾಲೆ, ನಮ್ಮೂರ ಹೆಮ್ಮೆ’ ಅಭಿಯಾನದ ಮೂಲಕ ಪೋಷಕರಿಗೆ ಸರ್ಕಾರಿ ಯೋಜನೆಗಳ ಸದುಪಯೋಗದ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚದೆ, ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಯೋಜನೆಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಮೊದಲ ಹಂತದಲ್ಲಿ ಪ್ರಸಕ್ತ ಸಾಲಿನಲ್ಲಿ 10 ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳ ಆಗಿರುವುದು ಸಂತಸ ತಂದಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-16-1694411208

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ