
‘ಗೃಹಜ್ಯೋತಿ’ ಸಮೀಕ್ಷೆ: ಜೆಸ್ಕಾಂ ವ್ಯಾಪ್ತಿಯಲ್ಲಿ ಶೇ 66ರಷ್ಟು ಪ್ರಗತಿ
ಯಾದಗಿರಿ: ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಗಳ ಪರಿಶೀಲನಾ ಸಮೀಕ್ಷೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ(ಜೆಸ್ಕಾಂ) ವ್ಯಾಪ್ತಿಯಲ್ಲಿ ಶೇ 66ರಷ್ಟು ಪ್ರಗತಿಯಾಗಿದೆ.
‘ಗೃಹಜ್ಯೋತಿ’ ಯೋಜನೆಯು ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿದ್ದು, ಹಿಂದಿನ ವಿದ್ಯುತ್ ಬಳಕೆ ಆಧರಿಸಿ ಪ್ರತಿ ಕುಟುಂಬಕ್ಕೆ ಗರಿಷ್ಠ 200 ಯೂನಿಟ್ ವರೆಗೆ ಉಚಿತವಾಗಿ ನೀಡಲಾಗುತ್ತಿದೆ. ‘ಗೃಹಜ್ಯೋತಿ’ಯ ವಿದ್ಯುತ್ ಹೊರೆಯನ್ನು ತಗ್ಗಿಸಲು ಜುಲೈ 1ರಿಂದ ಫಲಾನುಭವಿಗಳ ಮಾಹಿತಿ ಪರಿಶೀಲನೆಯ ಸಮೀಕ್ಷೆಯನ್ನು ಆರಂಭಿಸಲಾಗಿತ್ತು.
ಮಾಹಿತಿ ಸಂಗ್ರಹ ಪ್ರಕ್ರಿಯೆಯು ಆಗಸ್ಟ್ 31ಕ್ಕೆ ಕೊನೆಯಾಗಲಿದೆ. ಮೀಟರ್ ರೀಡರ್, ಜೆಸ್ಕಾಂ ಸಿಬ್ಬಂದಿ ಫಲಾನುಭವಿಗಳ ಮನೆ– ಮನೆಗೆ ಭೇಟಿ ನೀಡಿ ಆ.21ರ ವರೆಗೆ 10,96,993 (ಶೇ 66ರಷ್ಟು) ಫಲಾನುಭವಿಗಳ ಸಮೀಕ್ಷೆ ಮಾಡಿದ್ದಾರೆ.
ಜೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಿಂದ ‘ಗೃಹಜ್ಯೋತಿ’ ಯೋಜನೆ ಅಡಿಯಲ್ಲಿ 17,29,645 ಫಲಾನುಭವಿಗಳು ನೋಂದಣಿ ಆಗಿದ್ದಾರೆ. ಅದರಲ್ಲಿ 57,420 ಗ್ರಾಹಕರು ಮಾಸಿಕ 200 ಯೂನಿಟ್‌ಗೂ ಅಧಿಕ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಇದುವರೆಗಿನ ಸಮೀಕ್ಷೆಯಲ್ಲಿ 10,96,993 ಫಲಾನುಭವಿಗಳ ಮಾಹಿತಿ ಸಂಗ್ರಹವಾಗಿದ್ದು, ಇನ್ನೂ 5,75,232 ಗ್ರಾಹಕರ ವಿವರ ಪಡೆಯಬೇಕಿದೆ.
ಪರಿಶೀಲನೆ ಪ್ರಕ್ರಿಯೆಯ ಸಮೀಕ್ಷೆ ಕೊನೆಗೊಳ್ಳಲು ಬೆರಳೆಣಿಕೆಯಷ್ಟು ದಿನಗಳು ಉಳಿದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕೆಲವು ಫಲಾನುಭವಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎನ್ನುತ್ತಾರೆ ಜೆಸ್ಕಾಂ ಸಿಬ್ಬಂದಿ.
ಸರ್ವರ್ ಸಮಸ್ಯೆ ಸೇರಿದಂತೆ ಹಲವು ತಾಂತ್ರಿಕ ಅಡಚಣೆಗಳ ನಡುವೆಯೂ ಜೆಸ್ಕಾಂ ಸಿಬ್ಬಂದಿ ಮನೆ–ಮನೆಗೆ ಭೇಟಿ ನೀಡಿದ್ದಾರೆ. ಫಲಾನುಭವಿಗಳ ವಿದ್ಯುತ್ ಖಾತೆ ಸಂಖ್ಯೆ, ಯೋಜನೆಯ ನೋಂದಣಿ ವೇಳೆ ನೀಡಿದ್ದ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪ್ಯಾನ್ ಕಾರ್ಡ್, ಬಾಡಿಗೆ ಅಥವಾ ಭೋಗ್ಯ (ಲೀಸ್) ಕರಾರು ಪತ್ರ (ಅನ್ವಯಿಸಿದರೆ), ತೆರಿಗೆ ಪಾವತಿದಾರರು ಆಗಿದ್ದಲ್ಲಿ ತೆರಿಗೆ ಸಂಬಂಧಿಸಿದ ದಾಖಲೆ, ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಿದರು.
ಮೊಬೈಲ್ ಆ್ಯಪ್ ಮೂಲಕ ದಾಖಲೆ ವಿವರ ನಮೂದಿಸಿ, ಫಲಾನುಭವಿಗಳ ಮೊಬೈಲ್‌ಗೆ ಬಂದಂತಹ ಒಟಿಪಿ ಪಡೆದು ಪರಿಶೀಲಿಸಿ ಸಮೀಕ್ಷೆಯನ್ನು ಖಚಿತಪಡಿಸಿಕೊಂಡಿದ್ದಾರೆ.
ಆಧಾರ್ ಕಾರ್ಡ್ ಹಾಗೂ ಚುನಾವಣೆ ಗುರುತಿನ ಚೀಟಿಯನ್ನು ಪರಿಶೀಲಿಸಿ ಸಮೀಕ್ಷೆ ಮಾಡುತ್ತಿದ್ದು, ಹೊರ ರಾಜ್ಯದಿಂದ ಬಂದವರು ಶೇ 5ರಷ್ಟು ಜನ ಇದ್ದಾರೆ. ಬ್ಯಾಂಕ್ ನೌಕರರು, ಕಾರ್ಖಾನೆಗಳ ಕಾರ್ಮಿಕರ, ಕೇರಳಂನ ಶಿಕ್ಷಕರಂತಹ ಅನ್ಯ ರಾಜ್ಯದವರಿಗೆ ಯೋಜನೆಯು ಕಡಿತವಾಗಲಿದೆ ಎಂದು ಜೆಸ್ಕಾಂ ಎಂಜಿನಿಯರ್ ಒಬ್ಬರು ತಿಳಿಸಿದರು.
‘ಗುಳೆ, ಒಟಿಪಿ ಹಂಚಿಕೆಯೇ ದೊಡ್ಡ ಸವಾಲು’
‘ನಮ್ಮ ಭಾಗದಲ್ಲಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ಈ ವರ್ಷ ಮಳೆ ಕೊರತೆಯಿಂದಾಗಿ ಗ್ರಾಮೀಣ ಭಾಗದ ಹೆಚ್ಚಿನ ಫಲಾನುಭವಿಗಳು ಗುಳೆ ಹೋಗಿ, ತಮ್ಮ ಮನೆಗಳಿಗೆ ಬೀಗ ಹಾಕಿದ್ದಾರೆ. ಜತೆಗೆ ಈಗ ಇರುವವರ ಪೈಕಿ ಕೆಲವು ಹಣ ಕಡಿತದ ತಪ್ಪು ಕಲ್ಪನೆಯಿಂದಾಗಿ ಮೊಬೈಲ್‌ಗೆ ಬಂದ ಒಟಿಪಿ ಹಂಚಿಕೊಳ್ಳುತ್ತಿಲ್ಲ’ ಎಂದು ಯಾದಗಿರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಡಿ. ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗುಳೆ ಹೋದವರನ್ನು ನೆರೆ ಮನೆಯವರ ಮೂಲಕ ಸಂಪರ್ಕಿಸಿ, ಫೋನ್ ಮಾಡಿ ಒಟಿಪಿ ಕೇಳಿದರೂ ಕೊಡುತ್ತಿಲ್ಲ. ‘ನೀವು ಯಾರು? ಒಟಿಪಿ ಕೊಟ್ಟರೆ ಹಣ ಕಟ್ ಆಗಲ್ವಾ? ಊರಿಗೆ ಬಂದ ನಂತರ ಕೊಡುತ್ತೇವೆ’ ಎಂದು ಜಾರಿಕೊಳ್ಳುತ್ತಿದ್ದಾರೆ’ ಎಂದರು.
‘ಗ್ರಾಮೀಣ ಭಾಗದಲ್ಲಿ ಮನೆಗೆ ಬೀಗ ಹಾಕಿ ಬೆಳಿಗ್ಗೆಯೇ ಹೊಲದ ಕೆಲಸಕ್ಕೆ ಹೋಗುತ್ತಿದ್ದಾರೆ. ಹೀಗಾಗಿ, ಬೆಳಿಗ್ಗೆ 8ರಿಂದ 10ರವರೆಗೆ, ಸಂಜೆ 4ರಿಂದ 7.30ರ ನಡುವೆ ಸಮೀಕ್ಷೆ ಕಾರ್ಯ ನಡೆಸುತ್ತಿದ್ದೇವೆ. ಗುಳೆ ಹೋದವರು ಸ್ವಗ್ರಾಮಕ್ಕೆ ಬಂದು ಮಾಹಿತಿ ಹಂಚಿಕೊಂಡು, ಜಿಸ್ಕಾಂಗೆ ಸಹಕರಿಸಬೇಕು’ ಎಂದು ಕೋರಿದ್ದಾರೆ.
ಜಿಲ್ಲಾವಾರು ಮಾಹಿತಿ ಸಮೀಕ್ಷೆಯ ಪ್ರಗತಿ(ಲಕ್ಷದಲ್ಲಿ)
ಜಿಲ್ಲೆಗಳು;ನೋಂದಣಿ;ಪರಿಶೀಲನೆ;ಶೇಕಡಾ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-35-2038269354