
ಸಿಎಂ ಡಿಕೆಶಿ ನಾಳೆ ದೆಹಲಿಗೆ? ಸಚಿವ ಸಂಪುಟ ವಿಸ್ತರಣೆ ಚರ್ಚೆ ಸಾಧ್ಯತೆ
ಬೆಂಗಳೂರು: ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ಹಾಗೂ ನಿಗಮ- ಮಂಡಳಿ ಅಧ್ಯಕ್ಷರ ನೇಮಕ ಕುರಿತು ಪಕ್ಷದ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ.
ಸಚಿವ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನ ಭರ್ತಿ ಮಾಡುವ ಜೊತೆಗೆ, ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡವರಿಗೆ ಯಾವ ರೀತಿಯಲ್ಲಿ ಅವಕಾಶ ನೀಡಲು ಯಾವ ರೀತಿಯ ಬದಲಾವಣೆ ಮಾಡಬೇಕೆಂಬ ಕುರಿತು ವರಿಷ್ಠರಿಂದ ಅಭಿಪ್ರಾಯ ಪಡೆಯಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.
ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಖಾಲಿ ಇರುವ ಸ್ಥಾನವನ್ನು ಮಹಿಳೆಯೊಬ್ಬರಿಗೆ ನೀಡುವುದು ಖಚಿತ. ಈ ನಡುವೆ, ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರು ಸಚಿವ ಸ್ಥಾನಕ್ಕಾಗಿ ಹಟ ಹಿಡಿದಿದ್ದು, ಸಿದ್ದರಾಮಯ್ಯ ಅವರು ಬಸವರಾಜ ಶಿವಣ್ಣನವರ ಅವರಿಗೆ ಕುರುಬ ಕೋಟಾ ಅಡಿ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎಂ. ಕೃಷ್ಣಪ್ಪ ಮತ್ತು ಬಸವರಾಜ ಶಿವಣ್ಣನವರ ವಿಚಾರದಲ್ಲಿ ಯಾವ ರೀತಿಯ ನಡೆ ಅನುಸರಿಸಬೇಕು ಎಂಬ ಬಗ್ಗೆಯೂ ಹೈಕಮಾಂಡ್ ಅಭಿಪ್ರಾಯ ಕೋರಲಿದ್ದಾರೆ ಎಂದು ಗೊತ್ತಾಗಿದೆ.
ಕೃಷ್ಣಪ್ಪ ಮತ್ತು ಶಿವಣ್ಣನವರ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕಾದ ಅನಿವಾರ್ಯ ಎದುರಾದರೆ ಇಬ್ಬರು ಹಾಲಿ ಸಚಿವರನ್ನು ಕೈಬಿಡಬೇಕಾಗುತ್ತದೆ. ಇವರು ಯಾರು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಬೇಕಿದೆ. ಮಹಿಳಾ ಕೋಟಾದ ಸ್ಥಾನಕ್ಕೆ ಹಲವರು ಪೈಪೋಟಿ ನಡೆಸಿದ್ದು, ಲಕ್ಷ್ಮಿ ಹೆಬ್ಬಾಳಕರ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ.
ನಿಗಮ-ಮಂಡಳಿ ನೇಮಕ: ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ಬಗ್ಗೆಯೂ ಪಕ್ಷದ ವರಿಷ್ಠರ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-51-769226315