
ಕನ್ನಡದ ಡಾ.ರಾಜ್‌ಕುಮಾರ್ ಸಿನಿಮಾಗೆ ಹಾಡು ಹಾಡಿದ್ದ ಗಾಯಕಿ ಜಮುನಾ ರಾಣಿ ನಿಧನ.. 6,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ
Singer Jamuna Rani Passes Away: ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ 6,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಕ್ಷಿಣ ಭಾರತದ ಖ್ಯಾತ ಹಿರಿಯ ಗಾಯಕಿ ಕೆ.ಜಮುನಾ ರಾಣಿ (88) ಅವರು ಇಂದು (ಜುಲೈ 31) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೇ 17, 1938ರಂದು ಆಂಧ್ರಪ್ರದೇಶದಲ್ಲಿ ವರದರಾಜುಲು ಮತ್ತು ದ್ರೌಪತಿ ದಂಪತಿಗೆ ಜನಿಸಿದ ಜಮುನಾ ರಾಣಿ ಅವರು ಬಾಲ್ಯದಿಂದಲೇ ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು. ಕಲೆಯ ಮೇಲಿದ್ದ ಅಪಾರ ಪ್ರೀತಿ ಹಾಗೂ ವೈಯಕ್ತಿಕ ನಿರ್ಧಾರಗಳಿಂದಾಗಿ ಅವರು ಜೀವನದುದ್ದಕ್ಕೂ ಮದುವೆಯಾಗದೆ ಅವಿವಾಹಿತರಾಗಿಯೇ ಉಳಿದು ತಮ್ಮ ಇಡೀ ಜೀವನವನ್ನು ಸಂಗೀತ ಸೇವೆಗೆ ಮುಡುಪಾಗಿಟ್ಟರು.
ಕೇವಲ 7 ವರ್ಷದ ಬಾಲಕಿ ಆಗಿದ್ದಾಗಲೇ 1946ರಲ್ಲಿ ತೆರೆಕಂಡ ತೆಲುಗಿನ 'ತ್ಯಾಗಯ್ಯ' ಚಿತ್ರದ ಮೂಲಕ ಹಿನ್ನೆಲೆ ಗಾಯನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಶ್ರೀಲಂಕಾದ ಸಿಂಹಳ ಭಾಷೆಗಳಲ್ಲದೆ ವಿವಿಧ ಭಾಷೆಗಳಲ್ಲಿ ಬರೋಬ್ಬರಿ 6,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲೂ ಛಾಪು ಮೂಡಿಸಿರುವ ಜಮುನಾ ರಾಣಿ ಅವರು, ವರನಟ ಡಾ.ರಾಜ್‌ಕುಮಾರ್ ಅಭಿನಯದ 'ಓಹಿಲೇಶ್ವರ' ಚಿತ್ರದ ಪ್ರಸಿದ್ಧ 'ಓ ಸುರ ಸುಂದರಿ...' ಹಾಡಿಗೆ ಧ್ವನಿಯಾಗಿದ್ದರು. ಜೊತೆಗೆ 'ಮನ ಮೆಚ್ಚಿದ ಮಡದಿ' ಚಿತ್ರದ 'ಲವ್ ಲವ್ ಲವ್...', 'ಜಗದೇಕವೀರ' ಚಿತ್ರದ 'ಕಣ್ಣಿನ ನೋಟವೇ...' ಹಾಗೂ 'ರತ್ನಮಂಜರಿ' ಚಿತ್ರದ ಸಾರ್ವಕಾಲಿಕ ಹಿಟ್ ಹಾಡು 'ಯಾರು ಯಾರು ನೀ ಯಾರು...' ಸೇರಿದಂತೆ ಅನೇಕ ಸೂಪರ್‌ಹಿಟ್ ಕನ್ನಡ ಹಾಡುಗಳನ್ನ ಹಾಡಿ ಕನ್ನಡಿಗರ ಮನ ಗೆದ್ದಿದ್ದಾರೆ.
ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ತಮಿಳುನಾಡು ಸರ್ಕಾರವು ಅವರಿಗೆ 'ಕಲೈಮಾಮಣಿ' ಹಾಗೂ ಪ್ರತಿಷ್ಠಿತ 'ಅಣ್ಣಾ ಪ್ರಶಸ್ತಿ' ನೀಡಿ ಗೌರವಿಸಿದೆ. ಅಲ್ಲದೆ ಅವರ ಸುದೀರ್ಘ ಕಲಾ ಸೇವೆಯನ್ನು ಮೆಚ್ಚಿ 2020ರಲ್ಲಿ 'ವಿಶೇಷ ಕಲೈಮಾಮಣಿ' ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಎಂ.ಎಸ್. ಸುಬ್ಬುಲಕ್ಷ್ಮಿ, ಕೆ.ಬಿ.ಸುಂದರಂಬಾಳ್, ಪಿ.ಸುಶೀಲ, ಎಸ್. ಜಾನಕಿ ಅವರಂತಹ ಪ್ರಸಿದ್ಧ ಗಾಯಕಿಯರಿದ್ದ ಕಾಲದಲ್ಲೇ ಜಮುನಾ ರಾಣಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಗುರುತಿಸಿಕೊಂಡಿದ್ದಾರೆ. ಬಾಲ್ಯದಲ್ಲೇ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದಿದ್ದ ಅವರು ಐದನೇ ವಯಸ್ಸಿನಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡಲು ಆಯ್ಕೆ ಆಗಿದ್ದರು. ಅವರ ಮೊದಲ ಆಸಕ್ತಿ ಭರತನಾಟ್ಯವಾಗಿತ್ತು. ತರಬೇತಿ ಪಡೆದ ನರ್ತಕಿಯಾಗಿದ್ದ ಅವರು ಆರಂಭದಲ್ಲಿ ನರ್ತಕಿಯಾಗಿ ಚಿತ್ರರಂಗ ಪ್ರವೇಶಿಸಿ, ನಂತರ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದರು. ಶ್ರೀಲಂಕಾದ ಸಿಂಹಳೀಯ ಸಿನಿಮಾಗಳಲ್ಲೂ ಅವರು ಹಾಡಿದ ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು.
ಗ್ರಾಮಫೋನ್ ಯುಗದ ಅಳಿಸಲಾಗದ ಧ್ವನಿಯಾಗಿದ್ದ ಜಮುನಾ ರಾಣಿ ಅವರ ಅಗಲಿಕೆ ದಕ್ಷಿಣ ಭಾರತೀಯ ಚಿತ್ರರಂಗ ಮತ್ತು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅನೇಕ ಕಲಾವಿದರು, ಸಂಗೀತ ನಿರ್ದೇಶಕರು, ನಟ, ನಟಿಯರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.
ಯಾವೆಲ್ಲಾ ಕನ್ನಡ ಹಾದುಗಳನ್ನ ಹಾಡಿದ್ದಾರೆ?
* 'ಓ ಸುರ ಸುಂದರಿ..' - ವರನಟ ಡಾ. ರಾಜ್‌ಕುಮಾರ್ ಅಭಿನಯದ ಚಿತ್ರದ ಓಹಿಲೇಶ್ವರ ಸಿನಿಮಾದ ಹಾಡು
* 'ಯಾರು ಯಾರು ನೀ ಯಾರು...' - ರತ್ನಮಂಜರಿ ಸಿನಿಮಾದ ಹಾಡು
'ಲವ್ ಲವ್ ಲವ್...' - ಮನ ಮೆಚ್ಚಿದ ಮಡದಿ ಸಿನಿಮಾ
'ಕಣ್ಣಿನ ನೋಟವೇ..." - ಜಗದೇಕವೀರ ಸಿನಿಮಾ
ಒಟ್ಟಿನಲ್ಲಿ ಇವುಗಳ ಜೊತೆಗೆ ಅವರು ತಮ್ಮ ಸುಮಧುರ ಧ್ವನಿಯಲ್ಲಿ ಕನ್ನಡದ ಹಲವು ಹಳೆಯ ಸೂಪರ್‌ಹಿಟ್ ಸಿನಿಮಾಗಳಿಗೆ ಹಿನ್ನೆಲೆ ಗಾಯನ ನೀಡಿ ಕನ್ನಡಿಗರ ಮನ ಗೆದ್ದಿದ್ದಾರೆ.