ಹಾಸನ| ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ: ರಮಣೀಯ ಕೃಷ್ಣರಾಜ ಕಟ್ಟೆ

ಹಾಸನ| ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ: ರಮಣೀಯ ಕೃಷ್ಣರಾಜ ಕಟ್ಟೆ

ಹಾಸನ| ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ: ರಮಣೀಯ ಕೃಷ್ಣರಾಜ ಕಟ್ಟೆ

ಕೊಣನೂರು: ಸಮೀಪದ ಕಟ್ಟೇಪುರದಲ್ಲಿನ ಕೃಷ್ಣರಾಜಕಟ್ಟೆಯು ಮೈದುಂಬಿ ಹರಿಯುತ್ತಿದ್ದು, ಇಲ್ಲಿನ ರುದ್ರರಮಣೀಯ ದೃಶ್ಯವು ಕಣ್ಮನ ಸೆಳೆಯುತ್ತಿದೆ.

ಹೋಬಳಿಯ ಕಾವೇರಿ ನದಿತೀರದ ಕಟ್ಟೇಪುರಕ್ಕೆ ಹೊಂದಿಕೊಂಡಂತಿರುವ ಕೃಷ್ಣರಾಜಕಟ್ಟೆ (ಕೃಷ್ಣರಾಜ ಅಣೆಕಟ್ಟೆ)ಯ ಮೇಲಿಂದ ಧುಮುಕುತ್ತಿರುವ ನದಿಯ ನೀರಿನ ರಮಣೀಯ ದೃಶ್ಯವನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕೊಡಗಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿರುವುದರಿಂದ ಹಾರಂಗಿ ಜಲಾಶಯದಿಂದ ಹೆಚ್ಚಿನ ನೀರನ್ನು ಹರಿ ಬಿಟ್ಟಿದ್ದು, ಕಾವೇರಿ ನದಿಗೆ ಮೊದಲ ಅಣೆಕಟ್ಟೆಯಾಗಿರುವ ಕೃಷ್ಣರಾಜಕಟ್ಟೆಯ ಮೇಲಿಂದ ನದಿಯು ಮೈದುಂಬಿ ಹರಿಯುತ್ತಿದೆ.

ಕಟ್ಟೆಯ ಮೇಲಿಂದ ಗಂಭೀರವಾಗಿ ಹರಿಯುವ ನೀರು, ಸರ‍್ರನೆ ಜಾರಿ ವೇಗ ವಾಗಿ ದೂರಸಾಗುವ ದೃಶ್ಯವು ಮನಸ್ಸಿಗೆ ಮುದ ನೀಡುತ್ತಿದ್ದು, ಕಟ್ಟೆಯಿಂದ ಮುಂದೆ ಸಾಗಿದ ನೀರು ಜೋರಾಗಿ ಮುಂದಿನ ಕಲ್ಲುಗಳಿಗೆ ಅಪ್ಪಳಿಸಿ ಮಾಡುವ ಸದ್ದಿನ ರೌದ್ರತೆಯಿಂದ ತನ್ನತ್ತ ಸೆಳೆಯುತ್ತಿದೆ.

ವಿಶಾಲವಾಗಿರುವ ನದಿಯ ಆಚೆಯ ದಡದವರೆಗೂ ಒಂದೇ ಸಮನಾಗಿ ಕಾಣುವ ಕಾವೇರಿ ನದಿಯು, ಕಟ್ಟೆಯ ಮಧ್ಯಾಭಾಗದಲ್ಲಿರುವ ಕೊಳದೊಳಗಿಂದ ಧುಮುಕಿ ಚಿಮ್ಮವ ಸೌಂದರ್ಯ ಎಲ್ಲರನ್ನೂ ಜನರನ್ನು ಸೆಳೆಯುತ್ತಿದೆ.

ಕೃಷ್ಣರಾಜಕಟ್ಟೆ ಅಣೆಕಟ್ಟು ಸಾವಿರಾರು ಎಕರೆ ಕೃಷಿ ಭೂಮಿಗೆ ಪ್ರಮುಖ ಜೀವನಾಡಿಯಾಗಿದೆ. 83 ಕಿ.ಮೀ ಉದ್ದದ ಬಲದಂಡೆ ನಾಲೆ ಮತ್ತು 37 ಕಿ.ಮೀ ಉದ್ದದ ಎಡದಂಡೆ ನಾಲೆ ಹೊಂದಿದ್ದು, ಅರಕಲಗೂಡು ಹಾಗೂ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ವ್ಯಾಪ್ತಿಯ ಸುಮಾರು 8,110 ಎಕರೆಗೂ ಅಧಿಕ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಇಲ್ಲಿ ಸಣ್ಣ ಪ್ರಮಾಣದ ಜಲ ವಿದ್ಯುತ್ ಉತ್ಪಾದನಾ ಘಟಕವನ್ನೂ ಸ್ಥಾಪಿಸಲಾಗಿದೆ.

ನೀರಿನ ವೈಭವ ವನ್ನು ನೋಡಲು ಬರುತ್ತಿರುವ ಯುವಕ, ಯುವತಿಯರು ವೇಗವಾಗಿ ಜಾರಿ ಹೋಗುತ್ತಿರುವ ರಭಸವಾದ ನೀರಿನ ಪಕ್ಕದಲ್ಲಿ, ಕಾಲುವೆಯ ಗೇಟ್‌ನ ಮೇಲೆ ಮತ್ತು ಕಾಲುವೆಗಳ ಚಾವಡಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟೇಪುರದ ಪಕ್ಕದಲ್ಲೇ ಇರುವುದರಿಂದ ಕಟ್ಟೆಪುರ ಅಣೆಕಟ್ಟು ಎಂದೇ ಸ್ಥಳೀಯವಾಗಿ ಪ್ರಸಿದ್ಧವಾಗಿದೆ. ಅತ್ಯಂತ ಹಳೆಯ ಚೆಕ್‌ಡ್ಯಾಮ್‌ಗಳಲ್ಲಿ ಇದು ಒಂದಾಗಿದ್ದು, ಕಾವೇರಿ ನದಿಗೆ ನಿರ್ಮಿಸಿದ ಪ್ರಥಮ ಅಣೆಕಟ್ಟು ಎಂಬ ಐತಿಹಾಸಿಕ ಹೆಗ್ಗಳಿಕೆ ಗಳಿಸಿದೆ.

ಈ ಅಣೆಕಟ್ಟು ಸುಮಾರು 1732 ರಲ್ಲಿ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಿಸಲಾಗಿದೆ. ದೊಡ್ಡ ಕಲ್ಲುಗಳು, ಮಣ್ಣು ಮತ್ತು ಸುಣ್ಣದ ಗಾರೆಯಿಂದ ಕಟ್ಟಿರುವುದು ಮತ್ತೊಂದು ವಿಶೇಷ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260803-36-397887739

Post a Comment

If u have any queries, Please let us know

Previous Post Next Post