
3 ತಿಂಗಳು UPI ಬಿಟ್ಟು ಕ್ಯಾಶ್ ಬಳಸಿದ ಯುವತಿ: ಖರ್ಚು-ವೆಚ್ಚದ ಲೆಕ್ಕಾಚಾರವೇ ಬದಲಾಯ್ತು ನೋಡಿ
ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆ ಎಷ್ಟು ಜನಪ್ರಿಯವಾಗಿದೆ ಎಂದರೆ, ಜನರು ತಮ್ಮ ಜೇಬಿನಲ್ಲಿ ನಗದು ಹಣವನ್ನ ಇಟ್ಟುಕೊಳ್ಳುವುದನ್ನೇ ಬಹುತೇಕ ಮರೆತಿದ್ದಾರೆ. ಆದರೆ, ಡಿಜಿಟಲ್ ಸುಲಭ ಪಾವತಿ ವ್ಯವಸ್ಥೆಯಿಂದಾಗಿ ಜನರ ಅನಾವಶ್ಯಕ ಖರ್ಚುಗಳು ಕೂಡ ಹೆಚ್ಚಾಗುತ್ತಿವೆ ಎಂಬ ಚರ್ಚೆ ಯಾವಾಗಲೂ ನಡೆಯುತ್ತಲ್ಲೇ ಇರುತ್ತದೆ.
ಇದರ ನಡುವೆಯೇ, ದೆಹಲಿಯ ಯುವತಿಯೊಬ್ಬಳು ಸತತ 3 ತಿಂಗಳ ಕಾಲ ಯುಪಿಐ ಬಳಕೆಯನ್ನ ನಿಲ್ಲಿಸಿ, ನಗದು ಹಣವನ್ನ ಬಳಸುವ ಮೂಲಕ ತನ್ನ ಹಣಕಾಸಿನ ಶಿಸ್ತನ್ನ ಬದಲಾಯಿಸಿಕೊಂಡಿದ್ದಾಳೆ. ಈ ಕುರಿತು ಆಕೆ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಯುಪಿಐ ನಿಲ್ಲಿಸಿ ನಗದು ಬಳಕೆ ಮಾಡಿದ ಯುವತಿಯ ಅನುಭವ
ಸದಾಫ್ ಎಂಬ ದೆಹಲಿ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಶೇಷ ಪ್ರಯೋಗದ ಕುರಿತು ವಿಡಿಯೋ ಹಂಚಿಕೊಂಡಿದ್ದಾಳೆ. ಕಳೆದ 6 ತಿಂಗಳಲ್ಲಿ ತಾನು ಸಾಧಿಸಿದ ಅತ್ಯಂತ ದೊಡ್ಡ ಸಾಧನೆ ಇದು ಎಂದು ಆಕೆ ಹೇಳಿಕೊಂಡಿದ್ದಾಳೆ. "ನಾನು ಕಳೆದ 3 ತಿಂಗಳಿಂದ ದಿನನಿತ್ಯದ ಖರ್ಚುಗಳಿಗೆ ಯುಪಿಐ ಬಳಸುವುದನ್ನ ಬಹುತೇಕ ನಿಲ್ಲಿಸಿದ್ದು, ಕೇವಲ ನಗದು ಹಣವನ್ನ ಮಾತ್ರ ಬಳಸುತ್ತಿದ್ದೇನೆ.
ಇದರಿಂದ ನನ್ನ ಖರ್ಚು-ವೆಚ್ಚಗಳಲ್ಲಿ ಬಹಳ ದೊಡ್ಡ ಬದಲಾವಣೆಯಾಗಿದೆ. ಯುಪಿಐ ಬಳಸುವಾಗ ಸಣ್ಣ-ಪುಟ್ಟದ್ದಕ್ಕೆಲ್ಲಾ ಸುಲಭವಾಗಿ ಸ್ಕ್ಯಾನ್ ಮಾಡಿ ಪಾವತಿಸುತ್ತಿದ್ದೆ. 5 ಬಾರಿ ಸಣ್ಣ ಪೇಮೆಂಟ್ ಮಾಡಿದರೂ ಕ್ಷಣಾರ್ಧದಲ್ಲೇ 1,000 ರೂಪಾಯಿ ಖರ್ಚಾಗುತ್ತಿತ್ತು, ಅದು ನಮಗೆ ಅರಿವಿಗೆ ಬರುತ್ತಿರಲಿಲ್ಲ," ಎಂದು ಸದಾಫ್ ವಿವರಿಸಿದ್ದಾಳೆ.
ನಗದು ಹಣದಿಂದ ಅನಾವಶ್ಯಕ ಖರ್ಚಿಗೆ ಬ್ರೇಕ್
ನಗದು ಹಣವನ್ನ ಬಳಸುವುದರಿಂದ ಹಣದ ಮೌಲ್ಯ ಮತ್ತು ಖರ್ಚಿನ ಅರಿವು ಹೆಚ್ಚಾಗುತ್ತದೆ ಎಂಬುದು ಸದಾಫ್ ಅವರ ವಾದ. "ನಾನು ನನ್ನ ಪರ್ಸ್‌ನಿಂದ 500 ರೂಪಾಯಿ ನೋಟನ್ನು ತೆಗೆದು ಕೊಡುವಾಗ, ಹಣ ನನ್ನ ಕೈಬಿಟ್ಟು ಹೋಗುತ್ತಿದೆ ಎಂಬ ಭಾವನೆ ಮೂಡುತ್ತದೆ. ನನ್ನ ಬಳಿ ಎಷ್ಟು ಹಣ ಉಳಿದಿದೆ, ನಾನು ಎಷ್ಟು ಖರ್ಚು ಮಾಡುತ್ತಿದ್ದೇನೆ ಎಂಬುದು ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತದೆ. ಇದರಿಂದ ಅನಾವಶ್ಯಕವಾಗಿ ಯೋಚಿಸದೆ ಮಾಡುವ ಖರ್ಚುಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿದೆ," ಎನ್ನುತ್ತಾರೆ ಆಕೆ. ಪ್ರತಿ ಬಾರಿ ಮೊಬೈಲ್ ಆ್ಯಪ್ ತೆರೆದು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸುವ ಬದಲು, ನಗದು ಹಣದಿಂದ ಬಜೆಟ್ ನಿರ್ವಹಣೆ ತುಂಬಾ ಸುಲಭವಾಯಿತು ಎಂದು ಆಕೆ ಹೇಳಿದ್ದಾಳೆ.
ಯುಪಿಐ ಬಳಕೆಯನ್ನು ಶೇಕಡಾ 100 ರಷ್ಟು ನಿಲ್ಲಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂಬುದನ್ನು ಕೂಡ ಸದಾಫ್ ಒಪ್ಪಿಕೊಂಡಿದ್ದಾಳೆ. ಮಾರುಕಟ್ಟೆಯಲ್ಲಿ ಚಿಲ್ಲರೆ ಸಮಸ್ಯೆಯಾದಾಗ ಅಥವಾ ಅಂಗಡಿಯವರ ಬಳಿ ಬಾಕಿ ಹಣ ನೀಡಲು ಚಿಲ್ಲರೆ ಇಲ್ಲದಾಗ ಡಿಜಿಟಲ್ ಪಾವತಿಯೇ ಅನಿವಾರ್ಯವಾಗುತ್ತದೆ. ಹಾಗಾಗಿ, ಆಕೆ ಈಗ '80:20' ಸೂತ್ರವನ್ನು ಅಳವಡಿಸಿಕೊಂಡಿದ್ದಾಳೆ. ಅಂದರೆ, ತನ್ನ ಒಟ್ಟು ಖರ್ಚಿನ ಶೇ. 80 ರಷ್ಟು ಭಾಗವನ್ನು ನಗದು ರೂಪದಲ್ಲಿ ಹಾಗೂ ಚಿಲ್ಲರೆ ಸಮಸ್ಯೆ ಇರುವಂತಹ ಶೇ. 20 ರಷ್ಟು ಸಂದರ್ಭಗಳಲ್ಲಿ ಮಾತ್ರ ಯುಪಿಐ ಬಳಸುತ್ತಿರುವುದಾಗಿ ತಿಳಿಸಿದ್ದಾಳೆ.
View this post on InstagramA post shared by Sadaf (@rockstarz.gf)
A post shared by Sadaf (@rockstarz.gf)
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಪ್ರತಿಕ್ರಿಯೆ
ಸದಾಫ್ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚರ್ಚೆ ಹುಟ್ಟು ಹಾಕಿದೆ. ಅನೇಕರು ಆಕೆಯ ಮಾತಿಗೆ ಸಹಮತ ವ್ಯಕ್ತಪಡಿಸಿದ್ದು, "ಯುಪಿಐ ಬಳಸಿದರೆ ಬ್ಯಾಂಕ್ ಖಾತೆಯಲ್ಲಿರುವ ಹಣ ಮಂಜಿನಂತೆ ಕರಗುತ್ತದೆ, ನಗದು ಹಣ ಬಳಸಿದರೆ ಪರ್ಸ್‌ನಲ್ಲಿ ಹಾಗೆಯೇ ಉಳಿಯುತ್ತದೆ," ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಂದೆಡೆ, ಕೆಲವರು ಡಿಜಿಟಲ್ ಪಾವತಿಯ ಅನುಕೂಲಗಳನ್ನು ಬೆಂಬಲಿಸಿದ್ದಾರೆ. "ಇಂದಿನ ಕಾಲದಲ್ಲಿ ಯಾರ ಬಳಿಯೂ 10 ರೂಪಾಯಿ ಚಿಲ್ಲರೆ ಇರುವುದಿಲ್ಲ, ಹಾಗಾಗಿ ಯುಪಿಐ ಅತ್ಯಂತ ಸುಲಭ ಹಾಗೂ ಅನುಕೂಲಕರ ವ್ಯವಸ್ಥೆ," ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.