
ಕೆಲಸಕ್ಕೆ ಮನಸ್ಸಿಲ್ಲವೇ? ಹಾಗಿದ್ರೆ ತೆಗೆದುಕೊಳ್ಳಿ ‘ಅನ್ಹ್ಯಾಪಿ ಲೀವ್’; 10 ದಿನಗಳ ರಜೆಯ ಬಗ್ಗೆ ಭಾರೀ ಚರ್ಚೆ
ಕಚೇರಿ ಕೆಲಸಕ್ಕೆ ಹೋಗುವವರಿಗೆ ಬೇರೆ ಬೇರೆ ರೀತಿಯ ರಜೆಗಳಿರುತ್ತವೆ. EL, PL, CL ಹೀಗೆ ಅನೇಕ ರೀತಿಯ ರಜೆಗಳಿರುತ್ತವೆ. ಎಷ್ಟೇ ರಜೆಗಳಿದ್ದರೂ ನೌಕರರಿಗೆ ಬೇಕಾದಾಗ ರಜೆ ಸಿಗುವುದು ಕಷ್ಟವೇ. ಯಾವುದೇ ಉದ್ಯೋಗಿಗೆ ರಜೆ ಬೇಕು ಎಂದಾದರೆ ಮೊದಲೇ ಹೇಳಬೇಕಾಗುತ್ತದೆ. ಕೆಲವೊಮ್ಮೆ ಕೆಲಸದ ಹೊರೆ ಇದ್ದರೆ ಖಾತೆಯಲ್ಲಿದ್ದ ರಜೆ ಸಿಗುವುದೂ ಅನುಮಾನವೇ. ಈ ಮಧ್ಯೆ, ಅನ್ಹ್ಯಾಪಿ ಲೀವ್ ಎನ್ನುವ ಹೊಸ ರಜೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿಯಾಗುತ್ತಿದೆ, ಸದ್ದು ಮಾಡುತ್ತಿದೆ.
ಕೆಲಸಕ್ಕೆ ಹೋಗಲು ಮನಸ್ಸಿಲ್ಲದಿದ್ದರೆ ಅನ್ಹ್ಯಾಪಿ ಲೀವ್
ಹೌದು, ಅನ್ಹ್ಯಾಪಿ ಲೀವ್ ಅಂದರೆ ಯಾರಿಗಾದರೂ ಕೆಲಸಕ್ಕೆ ಹೋಗಲು ಮನಸ್ಸಿಲ್ಲ ಅಥವಾ ಕೆಲಸ ಮಾಡುವುದಕ್ಕೆ ಮನಸ್ಸಿಲ್ಲ ಎಂದಾದರೆ ಅವರು ಈ ರಜೆಯನ್ನು ಹಾಕಬಹುದು. ಅಂದರೆ ಕೆಲಸ ಮಾಡಲು ಮನಸ್ಸಿಲ್ಲದ್ದಿದ್ದರೂ ಆಫೀಸಿಗೆ ಬಂದರೆ ಮಾಡುವ ಕೆಲಸ ಸರಿಯಾಗಿ ಆಗುತ್ತದೆ ಎನ್ನಲು ಸಾಧ್ಯವಿಲ್ಲ. ಹಾಗಾಗಿ, ಚೀನಾದ ಪ್ರಸಿದ್ಧ ರಿಟೇಲ್ ಸರಣಿ ಪ್ಯಾಂಗ್ ಡಾಂಗ್ ಲೈ ಸಂಸ್ಥೆಯ ಸಂಸ್ಥಾಪಕ ಯೂ ಡಾಂಗ್ ಲೈ ಈ ಹೊಸ ರಜೆಯನ್ನು ಪರಿಚಯಿಸಿದ್ದಾರೆ.
ಇವರು ತಂದಿರುವ ನೀತಿಯ ಪ್ರಕಾರ, ಉದ್ಯೋಗಿಗಳಿಗೆ ವರ್ಷಕ್ಕೆ 10 ದಿನಗಳ ಅನ್ಹ್ಯಾಪಿ ಲೀವ್ ನೀಡಲಾಗುತ್ತದೆ. ಈ ಅನ್ಹ್ಯಾಪಿ ಲೀವ್ಗೆ ವೇತನವನ್ನು ಕೂಡಾ ನೀಡಲಾಗುವುದು. ಮನಸ್ಸಿಲ್ಲದಿದ್ದರೆ ಕೆಲಸಕ್ಕೆ ಬರಲೇಬೇಡಿ ಎನ್ನುವ ನಿಯಮದಡಿ ಈ ರಜಾ ನೀತಿಯನ್ನು ತರಲಾಗಿದೆ. ಯಾವುದೇ ಉದ್ಯೋಗಿ ತನಗೆ ಅನ್ಹ್ಯಾಪಿ ಲೀವ್ ಬೇಕು ಎಂದು ಕೇಳಿದರೆ ಮ್ಯಾನೇಜರ್ ಆ ರಜೆಯನ್ನು ನಿರಾಕರಿಸುವಂತೆ ಇಲ್ಲ ಎಂದು ಈ ನಿಯಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ರಜೆಯ ಮೂಲಕ ಉದ್ಯೋಗಿಗಳಿಗೆ ತಮ್ಮದೇ ಆದ ವಿಶ್ರಾಂತಿ ಸಮಯವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ನೀಡಲಾಗಿದೆ.
ಈ 10 ದಿನಗಳ ಅನ್ಹ್ಯಾಪಿ ರಜೆಯ ಬಗ್ಗೆ ಹರ್ಷ್ ಗೋಯೆಂಕಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಭಾರತದಲ್ಲಿ ಅನ್ಹ್ಯಾಪಿ ರಜೆ ನೀಡಬೇಕೆ ಎನ್ನುವ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಈ ಅನ್ಹ್ಯಾಪಿ ರಜೆ ನೀಡುವುದು ಸಾಧ್ಯವಿಲ್ಲ ಎಂದಾದರೆ ಜನರು ಖುಷಿ ಖುಷಿಯಿಂದ ಕೆಲಸಕ್ಕೆ ಬರುವಂತೆ ಮಾಡುವ ಬೇರೆ ಮಾರ್ಗ ಇದೆಯೇ ಎಂದು ಯೋಚಿಸಬೇಕಾಗಿದೆ ಎಂದಿದ್ದಾರೆ.
ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ
ಬದಲಾಗುತ್ತಿರುವ ಗ್ಲೋಬಲ್ ವರ್ಕ್ ಕಲ್ಚರ್ ನಡುವೆಯೇ ಗೋಯೆಂಕಾ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಆದರೆ, ಪ್ರೋಫೆಶನಲ್ ನೆಟ್ವರ್ಕ್ನಲ್ಲಿ ಈ ಫೋಸ್ಟ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಜನರು ಈ ಪೋಸ್ಟ್ಗೆ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಜನರು ಕಾಮೆಂಟ್ಗಳ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಆದರೆ ಕೆಲವರಿಗೆ ಈ ಸಲಹೆ ಇಷ್ಟವಾಗಲಿಲ್ಲ. ಕಂಪನಿಗಳಲ್ಲಿ ಪ್ರತಿ ತಿಂಗಳು ಪರ್ಫಾಮೆನ್ಸ್ ಟಾರ್ಗೆಟ್ ರೀಚ್ ಆಗುವುದು ಬಹಳ ಅಗತ್ಯ. ಇಲ್ಲಿ ತಿಂಗಳ ಕೊನೆಯ ದಿನಗಳು ಬಹಳ ನಿರ್ಣಾಯಕವಾಗಿರುವುದು. ಈ ದಿನಗಳಲ್ಲಿಯೇ ಉದ್ಯೋಗಿ ಅನ್ಹ್ಯಾಪಿ ಲೀವ್ ಬೇಕು ಎನ್ನುವ ಬೇಡಿಕೆ ಇಟ್ಟರೆ ಇದು ಟೀಮ್ ಮತ್ತು ಕಂಪನಿಗೆ ಅಪಾಯಕಾರಿಯಾಗುವುದು. ಕಂಪನಿಯ ಗ್ರೋತ್ ಮೇಲೆ ಕೂಡಾ ಪರಿಣಾಮ ಬೀರುವುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ರಜೆ ನೀಡುವುದರಿಂದ ಸಿಸ್ಟಮ್ನ ಹಲವು ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಅನೇಕ ವೃತ್ತಿಪರರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅಟೆಂಡೆನ್ಸ್ ಮ್ಯಾನೇಜ್ ಮಾಡುವ ಬದಲು ಮನೋಬಲ ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ. ಹೀಗಾದಾಗ ಮಾನಸಿಕ ಆರೋಗ್ಯದ ಕಾರಣದಿಂದಾಗಿ ರಜೆ ತೆಗದುಕೊಳ್ಳುವ ಅಗತ್ಯವೇ ಇರುವುದಿಲ್ಲ ಎಂದಿದ್ದಾರೆ.