
ಸೆ.1ರಿಂದ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾ ಬಿಡುಗಡೆಗೆ ನಿರ್ಬಂಧ...
ತಮಿಳುನಾಡು: ಸೆಪ್ಟೆಂಬರ್ 1ರಿಂದ ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳ ಬಿಡುಗಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ, ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಸೂಚಿಸಿದೆ.
ಈ ನಿರ್ಧಾರಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ಹಾಗೂ ಸ್ಥಳೀಯ ವಿತರಕ ಸಂಸ್ಥೆಗಳು ಒಟ್ಟಾಗಿ ಸೇರಿ ‘8 ವಾರಗಳ ವಿಂಡೋ ನಿಯಮ’ವನ್ನು ಜಾರಿ ಮಾಡುವಂತೆ ಮಂಡಳಿಗೆ ಕೋರಿವೆ.
ಈ ನಿಯಮದ ಪ್ರಕಾರ, ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಹೊಸ ಸಿನಿಮಾಗಳನ್ನು ಕನಿಷ್ಠ 8 ವಾರಗಳವರೆಗೆ ಒಟಿಟಿ ವೇದಿಕೆಯಲ್ಲಿ ಪ್ರಸಾರ ಮಾಡದಿರುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಒಪ್ಪಿಗೆ ಸೂಚಿಸಿರುವ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಹಾಗೂ ತಮಿಳುನಾಡು ಸಕ್ರಿಯ ಚಲನಚಿತ್ರ ನಿರ್ಮಾಪಕರ ಸಂಘವು ಜಂಟಿಯಾಗಿ ತೀರ್ಮಾನವನ್ನು ಕೈಗೊಂಡಿದೆ ಎನ್ನಲಾಗಿದೆ.
ಸಿನಿಮಾವೊಂದು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೂರು ಅಥವಾ ನಾಲ್ಕು ವಾರದೊಳಗೆ ಒಟಿಟಿಗೆ ಕಾಲಿಡುತ್ತದೆ. ಇದರಿಂದಾಗಿ ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಚಿತ್ರಮಂದಿರದ ಮಾಲೀಕರನ್ನು ನಷ್ಟಕ್ಕೆ ದೂಡುತ್ತಿದೆ. ಆದ್ದರಿಂದ ಜನರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆದುಕೊಂಡು ಬರುವ ಉದ್ದೇಶದಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಮಂಡಳಿ ತಿಳಿಸಿದೆ.
ಮತ್ತೊಂದೆಡೆ ಸ್ಟ್ರೀಮಿಂಗ್ ವೇದಿಕೆಗಳಿಂದಲೂ ಆದಾಯ ಬರುತ್ತದೆ ಎಂದು ನಿರ್ಮಾಪಕರು ವಾದಿಸುತ್ತಿದ್ದಾರೆ. ಸದ್ಯ ಈ ವಿಚಾರವನ್ನು ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಮಾಹಿತಿ ಮತ್ತು ಪ್ರಚಾರ ಸಚಿವರ ಗಮನಕ್ಕೆ ತರಲಾಗಿದೆ. ಸೆಪ್ಟೆಂಬರ್ 1ರೊಳಗೆ ಸರ್ಕಾರವು ಮಧ್ಯಸ್ಥಿಕೆ ವಹಿಸಿ ಅಂಗೀಕರಿಸಬೇಕು ಎಂದು ಮಂಡಳಿಯು ಮನವಿ ಮಾಡಿದೆ.
ಸೆಪ್ಟೆಂಬರ್‌ನಲ್ಲಿ 5 ಕ್ಕೂ ಹೆಚ್ಚು ತಮಿಳು ಸಿನಿಮಾಗಳು ಬಿಡುಗಡೆಯಾಗಲಿವೆ. ಅದರಲ್ಲಿಯೂ, ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನದ ‘ಸಿಗ್ಮಾ’ ಸಿನಿಮಾ ಕೂಡ ಬಿಡುಗಡೆಯಾಗಲಿದೆ.