
ಹಾವೇರಿ: ಮಳೆಗಾಲದಲ್ಲೂ 198 ಕೆರೆಗಳು ಸಂಪೂರ್ಣ ಖಾಲಿ
ಹಾವೇರಿ: ಪ್ರಸಕ್ತ ವರ್ಷದ ಮುಂಗಾರು ಮಳೆ ಕೈಕೊಟ್ಟಿದ್ದು, ಬರಗಾಲದ ಛಾಯೆಯಿಂದಾಗಿ ರೈತ ಸಮೂಹ ಕಂಗಾಲಾಗಿದೆ. ಕೃಷಿಗೆ ಮಾತ್ರವಲ್ಲದೇ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಸಿಗುವುದು ಸಹ ದುಸ್ತರವಾಗುತ್ತಿದೆ. ಜಿಲ್ಲೆಯಲ್ಲಿರುವ 2,058 ಕೆರೆಗಳ ಪೈಕಿ 198 ಕೆರೆಗಳು ಸಂಪೂರ್ಣ ಖಾಲಿಯಿವೆ. 14 ಕೆರೆಗಳು ಮಾತ್ರ ಶೇ 100ರಷ್ಟು ಭರ್ತಿಯಾಗಿವೆ.
ಮುಂಗಾರು ಹಂಗಾಮಿನಲ್ಲಿ (ಜೂನ್ 1ರಿಂದ ಆಗಸ್ಟ್ 17ರವರೆಗೆ) ಹಾವೇರಿ ಜಿಲ್ಲೆಯಾದ್ಯಂತ 36.69 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 20.86ಸೆಂ.ಮೀ. ಮಳೆಯಾಗಿದೆ. ಈ ಮೂಲಕ ಜಿಲ್ಲೆಯಾದ್ಯಂತ ಶೇ 43.15ರಷ್ಟು ಮಳೆ ಕೊರತೆ ಉಂಟಾಗಿದೆ. ಮಳೆ ಇಲ್ಲದಿದ್ದರಿಂದ, ಕೃಷಿ ಬೆಳೆಗಳು ಬಾಡಿವೆ. ಅಲ್ಲಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಕಣ್ಣಿಗೆ ಹಸಿರು ಕಂಡರೂ ಬೆಳೆಯ ಇಳುವರಿ ಕುಂಠಿತವಾಗುವ ಲಕ್ಷಣಗಳು ಗೋಚರಿಸುತ್ತಿವೆ.
‘ಬರಗಾಲ ಪೀಡಿತ ಜಿಲ್ಲೆ’ ಎಂದು ಘೋಷಿಸಲು ಹಾವೇರಿ ಜಿಲ್ಲೆ ಅರ್ಹ ಇರುವುದಾಗಿ ಜಿಲ್ಲಾಡಳಿತದ ಅಧಿಕಾರಿಗಳು ಹೇಳುತ್ತಿದ್ದಾರೆ. ಬರಗಾಲ ಪೀಡಿತ ಜಿಲ್ಲೆ ಘೋಷಿಸಲು ಬೇಕಿರುವ ಮಾನದಂಡಗಳ ಅನ್ವಯ ಅಧಿಕಾರಿಗಳು ವರದಿ ಸಿದ್ಧಪಡಿಸುವ ಕೆಲಸ ಆರಂಭಿಸಿದ್ದಾರೆ. ರೈತರ ಜಮೀನು ಹಾಗೂ ಇತರೆ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಅಧಿಕಾರಿಗಳು, ಅಲ್ಲಿಯ ವಾಸ್ತವ ಸ್ಥಿತಿ ದಾಖಲಿಸಿಕೊಳ್ಳುತ್ತಿದ್ದಾರೆ.
ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ಸವಣೂರು, ಶಿಗ್ಗಾವಿ ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲೂ ಮಳೆಯ ಕೊರತೆ ಉಂಟಾಗಿದೆ. ಮಲೆನಾಡು ಸೆರಗಿನಲ್ಲಿರುವ ರಟ್ಟೀಹಳ್ಳಿ ತಾಲ್ಲೂಕಿನಲ್ಲಿಯೇ ಈ ಬಾರಿ ಅತ್ಯಧಿಕ ಶೇ 65.99ರಷ್ಟು ಮಳೆ ಕೊರತೆಯಾಗಿದೆ. ಈ ಭಾಗದಲ್ಲಿಯೂ ಕೃಷಿ ಬೆಳೆಗಳು ಕೈ ಕೊಟ್ಟಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
1,138 ಕೆರೆಗಳಲ್ಲಿ ಶೇ 1ರಿಂದ–30ರಷ್ಟು ನೀರು: ಪ್ರತಿ ವರ್ಷವೂ ಮಳೆಗಾಲದ ಆರಂಭದಲ್ಲಿ ಎರಡು ತಿಂಗಳ ಅವಧಿಯಲ್ಲಿಯೇ ಕೆರೆಗಳಲ್ಲಿ ನೀರು ಭರ್ತಿಯಾಗುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ಕೆರೆಗಳಿಗೆ ನೀರು ಬಂದಿಲ್ಲ. ಇದರಿಂದಾಗಿ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಬಹುದೆಂಬ ಆತಂಕ ಜನರನ್ನು ಕಾಡುತ್ತಿದೆ.
‘ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆ, ಬೃಹತ್ ನೀರಾವರಿ ಹಾಗೂ ಅರಣ್ಯ ಇಲಾಖೆಗೆ ಸೇರಿರುವ 2,058 ಕೆರೆಗಳು ಜಿಲ್ಲೆಯಲ್ಲಿವೆ. ಈ ಪೈಕಿ 1,138 ಕೆರೆಗಳಲ್ಲಿ ಶೇ 1ರಿಂದ ಶೇ 30ರಷ್ಟು ಮಾತ್ರ ನೀರು ಬಂದಿದೆ. ಕೆಲವೇ ದಿನಗಳಲ್ಲಿ ಈ ನೀರು ಕಡಿಮೆಯಾಗುವ ಆತಂಕವಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು.
‘ಮಳೆಗಾಲದ ಸಂದರ್ಭದಲ್ಲೂ 198 ಕೆರೆಗಳಲ್ಲಿ ಹನಿ ನೀರಿಲ್ಲ. 440 ಕೆರೆಗಳಲ್ಲಿ ಶೇ 31ರಿಂದ ಶೇ 50ರಷ್ಟು ನೀರಿದೆ. 268 ಕೆರೆಗಳಲ್ಲಿ ಶೇ 51ರಿಂದ ಶೇ 99ರಷ್ಟು ನೀರಿದೆ. ಈ ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಆತಂಕ ಮೂಡಿದೆ. ಬೇಸಿಗೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.
‘ಹಿರೇಕೆರೂರು ತಾಲ್ಲೂಕಿನ ನಿಡನೇಗಿಲು, ಹಾನಗಲ್ ತಾಲ್ಲೂಕಿನ ಹುಲಗಡ್ಡಿ, ಸಾಗರವಳ್ಳಿ ಕೆರೆಗಳು ಮಾತ್ರ ಶೇ 100ರಷ್ಟು ಭರ್ತಿಯಾಗಿವೆ. ಹಾನಗಲ್‌ನ ಮಲಗುಂದ, ಸವಣೂರಿನ ಚಿಲ್ಲೂರ, ಹಾವೇರಿಯ ಮುಲ್ಲಾನ ಕೆರೆ, ಅಕ್ಕಮಹಾದೇವಿ ಹೊಂಡ, ಹಾಲನಕೆರೆ, ರಾಣೆಬೆನ್ನೂರಿನ ಮಹಾರೊಂಡ, ಕಡ್ಲೂರು, ಬ್ಯಾಡಗಿಯ ಅಗಸನಹಳ್ಳಿ, ಬಂಕಾಪುರದ ಕುಂಬಾರಗಟ್ಟಿ ರಟ್ಟೀಹಳ್ಳಿಯ ಮದಗಮಾಸೂರು ಕೆರೆಗಳು ಸಂಪೂರ್ಣ ಭರ್ತಿಯಾಗಿವೆ’ ಎಂದರು.
ಕಳಸೂರು ಕಿರುಸೇತುವೆ ಬಂದ್
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕಳಸೂರು ಗ್ರಾಮದ ಬಳಿ ವರದಾ ನದಿಗೆ ನಿರ್ಮಿಸಿರುವ ಕಿರುಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ, ಈ ಕಿರುಸೇತುವೆಯಲ್ಲಿ ಜನರ ಸಂಚಾರ ಬಂದ್ ಆಗಿದೆ.
ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ, ಜಿಲ್ಲೆಯಲ್ಲಿ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ. ಕೂಡಲ–ನಾಗನೂರು, ಕರ್ಜಗಿ, ಹಿರೇಮಗದೂರು ಸೇರಿದಂತೆ ಹಲವು ಕಡೆಗಳಲ್ಲಿ ವರದಾ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದೆ. ಈ ಭಾಗದ ಕಿರುಸೇತುವೆ ಮೇಲೆಯೂ ಆಗಾಗ ನೀರು ಹರಿಯುತ್ತಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-22-579672887