ಕೊಡಗಿನ ಹಲವೆಡೆ ಭಾರಿ ಮಳೆ: ಹಾರಂಗಿ ಜಲಾಶಯದಿಂದ 18 ಸಾವಿರ ಕ್ಯುಸೆಕ್ ನೀರು ನದಿಗೆ
ಮಡಿಕೇರಿ: ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಲೇ ಇರುವುದರಿಂದ ಹಾರಂಗಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ, ಜಲಾಶಯದಿಂದ 18 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಮಡಿಕೇರಿ ನಗರಕ್ಕೆ ನೀರು ಪೂರೈಕೆ ಮಾಡುವ ಕೂಟುಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದ್ದು, ಭಾಗಮಂಡಲ– ನಾಪೋಕ್ಲು, ಭಾಗಮಂಡಲ– ಮಡಿಕೇರಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೆ, ಮೇಲ್ಸೇತುವೆ ಇರುವುದರಿಂದ ಸಂಪರ್ಕ ತಪ್ಪಿಲ್ಲ. ನದಿಯ ನೀರು ಭಗಂಡೇಶ್ವರ ದೇಗುಲ ಆವರಣವನ್ನೂ ತಲುಪಿದೆ. ನದಿ ತೀರದ ಉದ್ಯಾನ ಸಂಪೂರ್ಣ ಮುಳುಗಡೆಯಾಗಿದೆ.
ಮಳೆ ನಿರಂತರವಾಗಿ ಮುಂದುವರೆದಿದ್ದು, ಧಾರಾಕಾರವಾಗಿ ಸುರಿಯುತ್ತಿದೆ.