
ಡುರಾಂಡ್ ಕಪ್: ಈಸ್ಟ್ ಬೆಂಗಾಲ್‌ಗೆ 17ನೇ ಬಾರಿ ಕಿರೀಟ
ಕೋಲ್ಕತ್ತ, (ಪಿಟಿಐ): ಎಡ್ಮಂಡ್ ಲಾಲ್ರಿಂಡಿಕಾ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಈಸ್ಟ್ ಬೆಂಗಾಲ್ ತಂಡವು ಭಾನುವಾರ 17ನೇ ಬಾರಿ ಡುರಾಂಡ್ ಕಪ್ ಪ್ರಶಸ್ತಿ ಗೆದ್ದುಕೊಂಡಿತು.
ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ 135ನೇ ಆವೃತ್ತಿಯ ಫೈನಲ್‌ನಲ್ಲಿ ಈಸ್ಟ್ ಬೆಂಗಾಲ್ ತಂಡವು 4–1 ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿ ಮೋಹನ್ ಬಾಗಾನ್ ಸೂಪರ್ ಜೈಂಟ್ಸ್ ತಂಡವನ್ನು ಬಗ್ಗುಬಡಿಯಿತು. ಈ ಮೂಲಕ 22 ವರ್ಷಗಳ ಬಳಿಕ ಪ್ರತಿಷ್ಠಿತ ಪ್ರಶಸ್ತಿಯನ್ನು ತೆಕ್ಕೆಗೆ ಹಾಕಿಕೊಂಡಿತು. 2004ರಲ್ಲಿ ತಂಡವು ಕೊನೆಯ ಬಾರಿ ಚಾಂಪಿಯನ್ ಆಗಿತ್ತು.
2023ರಲ್ಲಿ ಇದೇ ಎರಡು ತಂಡಗಳು ಡುರಾಂಡ್ ಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಅಂದು ಮೋಹನ್ ಬಾಗಾನ್ ತಂಡವು 1–0ಯಿಂದ ಈಸ್ಟ್ ಬೆಂಗಾಲ್ ತಂಡವನ್ನು ಮಣಿಸಿ ದಾಖಲೆಯ 17ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಜೊತೆಗೆ ಪ್ರಶಸ್ತಿಗಳ ದಾಖಲೆಯಲ್ಲಿ ಸಮಬಲ ಸಾಧಿಸಿದಂತಾಗಿದೆ.
ಏಷ್ಯಾದ ಅತ್ಯಂತ ಹಳೆಯ ಫುಟ್‌ಬಾಲ್ ಟೂರ್ನಿಯಲ್ಲಿ ‘ಕೋಲ್ಕತ್ತ ಡರ್ಬಿ’ಯ ಈ ಪಂದ್ಯವು ಉಭಯ ತಂಡಗಳಿಗೆ ಪ್ರತಿಷ್ಠೆಯಾಗಿತ್ತು. ಆದರೆ, ಆಂಟೋನಿಯೋ ಲೋಪೆಜ್ ಹಬಾಸ್ ಮಾರ್ಗದರ್ಶನದ ಈಸ್ಟ್ ಬೆಂಗಾಲ್ ತಂಡವು ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಮೊದಲಾರ್ಧದಲ್ಲೇ ಭರ್ಜರಿ ನಾಲ್ಕು ಗೋಲುಗಳನ್ನು ಬಾರಿಸಿದ ತಂಡವು ಎದುರಾಳಿ ತಂಡಕ್ಕೆ ಆಘಾತ ನೀಡಿತು.
ಪಂದ್ಯದ 10ನೇ ನಿಮಿಷದಲ್ಲಿ ರಶೀದ್ ನೀಡಿದ ಪಾಸ್‌ನಿಂದ ಬಿಪಿನ್ ಸಿಂಗ್ ಮೊದಲ ಗೋಲು ಬಾರಿಸಿ, ಈಸ್ಟ್ ತಂಡಕ್ಕೆ ಮುನ್ನಡೆ ಒದಗಿಸಿದರು. ಜೆಸಿನ್ ಟಿ.ಕೆ. ಅವರ ಬದಲು ಫಾರ್ವರ್ಡ್ ಆಟಗಾರನಾಗಿ ಕಣಕ್ಕಿಳಿದಿದ್ದ ಲಾಲ್ರಿಂಡಿಕಾ ಅವರು 12ನೇ ಮತ್ತು 22ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.
33ನೇ ನಿಮಿಷದಲ್ಲಿ ಮನ್‌ವೀರ್ ಸಿಂಗ್ ಅವರು ಮೋಹನ್ ಬಾಗನ್ ಪರ ಏಕೈಕ ಗೋಲು ಬಾರಿಸಿ, ಹಿನ್ನಡೆ ತಗ್ಗಿಸುವ ಪ್ರಯತ್ನ ನಡೆಸಿದರು. ಆದರೆ, 44ನೇ ನಿಮಿಷದಲ್ಲಿ ರಶೀದ್ ನೀಡಿದ ಪಾಸ್‌ನಿಂದ ಮತ್ತೊಮ್ಮೆ ಕಾಲ್ಚಳಕ ಮೆರೆದ ಲಾಲ್ರಿಂಡಿಕಾ ತಮ್ಮ ಹ್ಯಾಟ್ರಿಕ್ ಗೋಲು ಪೂರ್ಣಗೊಳಿಸಿದರು.
ಪಂದ್ಯದ ದ್ವಿತೀಯಾರ್ಧದಲ್ಲಿ ಯಾವುದೇ ತಂಡಕ್ಕೆ ಗೋಲುಗಳು ಲಭಿಸಲಿಲ್ಲ. ಗುಂಪು ಹಂತದಲ್ಲಿ ಮೋಹನ್ ಬಾಗಾನ್ ತಂಡವು 1–0ಯಿಂದ ಈಸ್ಟ್ ಬೆಂಗಾಲ್ ತಂಡವನ್ನು ಮಣಿಸಿತ್ತು. ಆದರೆ, ಹಾಲಿ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಈಸ್ಟ್ ಬೆಂಗಾಲ್ ತಂಡವು ಫೈನಲ್‌ನಲ್ಲಿ ಶಿಸ್ತುಬದ್ಧ ಆಟವಾಡಿ ಪಂದ್ಯವನ್ನು ವಶಪಡಿಸಿಕೊಂಡಿತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-51-1598329666