
ಸ್ಟಿಕಿ ನೋಟ್‌ನಲ್ಲಿ 150 ಪದ ಬರೆದು ಗಿನ್ನೆಸ್ ವಿಶ್ವದಾಖಲೆ ಮಾಡಿದ ಪುಷ್ಪಜ್ಯೋತಿ
ಸ್ಟಿಕಿ ನೋಟ್ ಕಾಗದದ ಮೇಲೆ ಬರೋಬ್ಬರಿ 150 ವಿಭಿನ್ನ ಪದಗಳನ್ನು ಗುಂಡಾಗಿ ಮತ್ತು ಓದಲು ಸ್ಪಷ್ಟವಾಗಿ ಕಾಣುವಂತೆ ಬರೆಯುವ ಮೂಲಕ ಪುಷ್ಪಜ್ಯೋತಿ ರವಿಕುಮಾರ್ ಅವರು ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ಯುಎಇ ಮೂಲದವರಾದ 29 ವರ್ಷದ ಪುಷ್ಪಜ್ಯೋತಿ ರವಿಕುಮಾರ್, ಕ್ಲೌಡ್ ಎಂಜಿನಿಯರ್ ಆಗಿದ್ದಾರೆ. ಪ್ರಸ್ತುತ ಇವರು ದುಬೈನಲ್ಲಿ ವಾಸಿಸುತ್ತಿದ್ದಾರೆ.
ತಮ್ಮ ದಾಖಲೆಯ ಕುರಿತು ಮಾತನಾಡಿರುವ ಅವರು, ‘ಬಾಲ್ಯದಿಂದಲೂ ಗಿನ್ನೆಸ್ ವಿಶ್ವ ದಾಖಲೆಗಳನ್ನು ನೋಡಿಕೊಂಡು ಬಂದಿದ್ದೇನೆ. ನಾನೂ ಕೂಡ ವಿಶ್ವ ದಾಖಲೆ ಮಾಡಬೇಕೆಂಬ ಕನಸನ್ನು ಕಂಡಿದ್ದೆ. ಈ ರೀತಿಯ ದಾಖಲೆಯನ್ನು ಮಾಡಬಹುದಲ್ಲ ಎಂಬ ಯೋಚನೆ ಬಂತು. ಆಗ ಕೂಡಲೇ ಅರ್ಜಿ ಸಲ್ಲಿಸಿದೆ’ ಎಂದು ಹೇಳಿದ್ದಾರೆ.
ಸಣ್ಣ ಕಾಗದದ ತುಂಡಿನ ಮೇಲೆ 150 ಪದಗಳನ್ನು ಗುಂಡಾಗಿ ಮತ್ತು ಸ್ಪಷ್ಟವಾಗಿ ಕಾಣುವಂತೆ ಬರೆಯುವುದು ಸುಲಭವಲ್ಲ. ಪುಷ್ಪಜ್ಯೋತಿ ರವಿಕುಮಾರ್ ಹೇಳುವಂತೆ, ಗರಿಷ್ಠ 3 ಅಕ್ಷರ ಇರುವ ಪದಗಳನ್ನು ಬರೆಯಲು ಆಯ್ಕೆ ಮಾಡಿಕೊಂಡರು. ಬಳಿಕ ನಿಧಾನವಾಗಿ ಬರೆಯುತ್ತ, ಓದಲು ಅರ್ಥವಾಗುತ್ತದೆಯೇ ಎಂದು ಖಚಿತಪಡಿಸಿಕೊಂಡರು. ಹೀಗೆ 150 ಪದಗಳನ್ನು ಬರೆದು ಮೊದಲ ಪ್ರಯತ್ನದಲ್ಲಿಯೇ ಸಫಲರಾದರು.
‘ನಮ್ಮ ಕೌಶಲಗಳನ್ನು ಮುಕ್ತವಾಗಿ ಪ್ರದರ್ಶನ ಮಾಡುವುದು ಒಂದು ದೊಡ್ಡ ಸಾಧನೆಗೆ ಸಮ. ಪ್ರತಿಯೊಬ್ಬರಲ್ಲೂ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಅನಾವರಣಗೊಳಿಸಿ’ ಎಂದು ಹೇಳಿದ್ದಾರೆ. ಈ ಸಾಧನೆ ಮೂಲಕ ಪುಷ್ಪಜ್ಯೋತಿ ರವಿಕುಮಾರ್ ಅವರು ತಮ್ಮ ಬಾಲ್ಯದ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದ್ದಾರೆ.