ವಿಷ ಬೆರೆಸಿ 8 ಜನರನ್ನು ಕೊಂದ ಸೀರಿಯಲ್ ಕಿಲ್ಲರ್ ಅರೆಸ್ಟ್; ಕೊಲೆ ಮಾಡಿದವರ ಶವಸಂಸ್ಕಾರದಲ್ಲೂ ಭಾಗಿ!

ರಾಯ್‌ಪುರ: ಹಳೆಯ ದ್ವೇಷ ಹಾಗೂ ಕ್ಷುಲ್ಲಕ ಕಾರಣಗಳಿಗಾಗಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ತನ್ನದೇ ಗ್ರಾಮದ ಎಂಟು ಜನರಿಗೆ ಮದ್ಯದಲ್ಲಿ ವಿಷ ಬೆರೆಸಿ ಹತ್ಯೆಗೈದಿದ್ದ 46 ವರ್ಷದ ವ್ಯಕ್ತಿಯೊಬ್ಬನನ್ನು ಛತ್ತೀಸ್‌ಗಢದ ಬಲೋಡಾಬಜಾರ್-ಭಟಾಪಾರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಖಾರ್ವೆ ಗ್ರಾಮದ ನಿವಾಸಿ ರಾಮ್ ಸಹಾಯ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಈತ ಫೆಬ್ರವರಿಯಿಂದ ಜೂನ್ ನಡುವೆ ಎಂಟು ಜನರನ್ನು ಕೊಲೆ ಮಾಡಿದ್ದು, ಮತ್ತೊಬ್ಬನನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಒ.ಪಿ. ಶರ್ಮಾ ಅವರ ಪ್ರಕಾರ, ಆರೋಪಿಯು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. “ಹಳೆಯ ಹಗೆತನ, ಕ್ಷುಲ್ಲಕ ದೂರುಗಳು, ನಿಂದನೆ, ನಡತೆಯ ಮೇಲಿನ ಸಂಶಯ ಹಾಗೂ ಮಾಟಮಂತ್ರದ ನಂಬಿಕೆಗಳೇ” ಈ ಕೊಲೆಗಳಿಗೆ ಪ್ರಮುಖ ಕಾರಣಗಳಾಗಿವೆ.

ಮೃತಪಟ್ಟವರೆಲ್ಲರೂ 38 ವರ್ಷ ಮೇಲ್ಪಟ್ಟ ಪುರುಷರಾಗಿದ್ದಾರೆ.

ಗ್ರಾಮದಲ್ಲಿ ಫೆಬ್ರವರಿಯಿಂದ ಮೇ ತಿಂಗಳ ಅವಧಿಯಲ್ಲಿ ಸಾಲು ಸಾಲು ಅನುಮಾನಾಸ್ಪದ ಸಾವುಗಳು ಸಂಭವಿಸಿದ್ದವು. ಇದರಿಂದ ಆತಂಕಗೊಂಡ ಗ್ರಾಮಸ್ಥರು ಜೂನ್ 6 ರಂದು ಪೊಲೀಸರಿಗೆ ದೂರು ನೀಡಿ, ಈ ಸಾವುಗಳ ಹಿಂದೆ ಜೈಸ್ವಾಲ್ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಇದಕ್ಕೆ ಮುಖ್ಯ ಕಾರಣ, ಏಪ್ರಿಲ್ 14 ರಂದು ಆರೋಪಿ ಜೈಸ್ವಾಲ್ ನೀಡಿದ್ದ ಮದ್ಯವನ್ನು ಕುಡಿದು ಕಾರ್ತಿಕ್ ಎಂಬಾತ ತೀವ್ರ ಅಸ್ವಸ್ಥನಾಗಿದ್ದ ಹಾಗೂ ನಂತರ ಆತ ಬದುಕುಳಿದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದ. ಇದಲ್ಲದೆ, ಆರೋಪಿಯು ಗ್ರಾಮದ ವ್ಯಕ್ತಿಯೊಬ್ಬರಿಂದ ಇಲಿ ಪಾಷಾಣ ಪಡೆದುಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಜೈಸ್ವಾಲ್ ರೋಮಾಂಚನಕಾರಿ ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. ತಾನು ತಂದಿದ್ದ ಇಲಿ ಪಾಷಾಣವನ್ನು ಮೊದಲು ನಾಯಿಯೊಂದಕ್ಕೆ ಉಣಿಸಿ, ಅದು ಸತ್ತ ನಂತರವೇ ಮನುಷ್ಯರ ಮೇಲೆ ಪ್ರಯೋಗಿಸಲು ಆರಂಭಿಸಿದ್ದಾಗಿ ಹೇಳಿದ್ದಾನೆ. ಫೆಬ್ರವರಿ 6 ರಂದು ಬದ್ರಿ ಎಂಬಾತನಿಗೆ ಮೊದಲ ಬಾರಿಗೆ ಮದ್ಯದಲ್ಲಿ ವಿಷವಿಟ್ಟು ಕೊಂದಿದ್ದ. ಇದರಿಂದ ಧೈರ್ಯ ಹೆಚ್ಚಿಸಿಕೊಂಡು ಫೆಬ್ರವರಿ 20 ರಂದು ಬುಥಾಲು ಎಂಬ ಮತ್ತೊಬ್ಬ ವ್ಯಕ್ತಿಗೆ ವಿಷ ನೀಡಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸತ್ತವರ ಪೈಕಿ ಏಳು ಜನರ ಶವಗಳನ್ನು ಸಮಾಧಿಯಿಂದ ಹೊರತೆಗೆದು ರಾಯ್‌ಪುರದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಹಾಗೂ ಡಿಎನ್‌ಎ ಮತ್ತು ವಿಸೇರಾ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಮತ್ತೊಬ್ಬ ಮೃತನ ಶವವನ್ನು ಕುಟುಂಬಸ್ಥರು ಆಗಲೇ ಅಂತ್ಯಸಂಸ್ಕಾರ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



source https://suddione.com/serial-killer-who-killed-8-people-arrested-even-attended-the-funerals-of-those-he-murdered/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ