
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಶಿಕ್ಷಣ ನೀತಿ ಆಯೋಗವೂ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದೆ. ಮಾತೃಭಾಷೆ ಕನ್ನಡ ಹಾಗೂ ಇಂಗ್ಲಿಷ್ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸುವ ಶಿಫಾರಸು ಸೇರಿದಂತೆ 19 ಶಿಫಾರಸುಗಳನ್ನು ಮಾಡಿ, ರಾಜ್ಯ ಸರ್ಕಾರಕ್ಕೆ ತಮ್ಮ ಅಂತಿಮ ವರದಿಯನ್ನ ಸಲ್ಲಿಕೆ ಮಾಡಿದೆ. ಶಾಲಾ ಶಿಕ್ಷಣದಲ್ಲಿ 2+8+4 ಸೂತ್ರ, ದ್ವಿಭಾಷಾ ನೀತಿ (ಕನ್ನಡ ಹಾಗೂ ಇಂಗ್ಲೀಷ್) ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಮಾಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಪರ್ಯಾಯವಾಗಿ ರಾಜ್ಯಕ್ಕೆ ಒಂದು ಶಿಕ್ಷಣ ನೀತಿಯನ್ನು ರೂಪಿಸಲು ರಾಜ್ಯ ಶಿಕ್ಷಣ ಆಯೋಗವನ್ನು ಸರ್ಕಾರ ರಚನೆ ಮಾಡಿತ್ತು. ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಅಕ್ಟೊಬರ್ 11 2023ರಂದು ಆದೇಶ ಹೊರಡಿಸಿದೆ ಶಿಜ್ಷಣ ನೀತಿಯನ್ನು ರೂಪಿಸಲು ನೇಮಿಸಿತ್ತು. ಪ್ರೊ.ಸುಖದೇವ್ ಥೋರಾಟ್ ಅವರ ಅಧ್ಯಕ್ಷತೆಯಲ್ಲಿ 17 ಸದಸ್ಯರು, 6 ವಿಷಯ ತಜ್ಞರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿಯೊಂದಿಗೆ ಈ ಆಯೋಗವನ್ನು ಕಾರ್ಯಾರಂಭ ಮಾಡಿತ್ತು.
ಈಗಾಗಲೇ ಈ ಸಂಬಂಧ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದೆ. ವರದಿಯಲ್ಲಿ ಪ್ರಮುಖವಾಗಿ ಮಾತೃ ಭಾಷೆ ಕನ್ನಡ, ಇಂಗ್ಲಿಷ್ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸಲು ಶಿಫಾರಸು ಮಾಡಲಾಗಿದೆ. ಶಾಲಾ ಹಂತದಲ್ಲಿ 2+8+4 ಸೂತ್ರ ಅಳವಡಿಸಲು ಆಯೋಗ ಶಿಫಾರಸು ಮಾಡಿದೆ. (2 ವರ್ಷ ಪ್ರಾಥಮಿಕ-ಪೂರ್ವ, 8 ವರ್ಷ ಪ್ರಾಥಮಿಕ, 4 ವರ್ಷ ಮಧ್ಯಮಿಕ ಶಿಕ್ಷಣ). ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳನ್ನ ಸ್ಥಾಪಿಸಿ. ರಾಜ್ಯಾದ್ಯಂತ ಮಾಧ್ಯಮಿಕ ಶಿಕ್ಷಣವನ್ನ ಸಾರ್ವತ್ರೀಕರಣಗೊಳಿಸಿ. ಬಸ್ ಸೌಲಭ್ಯವಿಲ್ಲದ ಮಾರ್ಗಗಳಲ್ಲಿ ಹೊಸ ಶಾಲೆಗಳನ್ನು ಸ್ಥಾಪಿಸಿ. ಎಲ್ಲಾ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ/ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸಿ. ದ್ವಿಭಾಷಾ ನೀತಿ ಅನುಷ್ಠಾನಗೊಳಸಿ (ಕನ್ನಡ/ಮಾತೃಭಾಷೆ + ಇಂಗ್ಲಿಷ್) ಎಂಬ ಶಿಫಾರಸುಗಳು ವರದಿಯಲ್ಲಿವೆ.


