ನವದೆಹಲಿ: ಶೋಭಾ ಕರಂದ್ಲಾಜೆ, ಅನುಪ್ರಿಯಾ ಸಿಂಗ್ ಪಟೇಲ್, ಮೀನಾಕ್ಷಿ ಲೇಖಿ ಸೇರಿದಂತೆ ಏಳು ಮಹಿಳಾ ಸದಸ್ಯರು ಬುಧವಾರ (ಜು.7) ಪ್ರಧಾನಿ ನೇತೃತ್ವದ ಸಚಿವ ಸಂಪುಟ ಸೇರಿದ್ದು, ಈ ಮೂಲಕ ಮಹಿಳಾ ಸಚಿವರ ಸಂಖ್ಯೆ 11ಕ್ಕೇರಿದೆ.
ಬುಧವಾರ 15 ಹೊಸ ಕ್ಯಾಬಿನೆಟ್ ಮಂತ್ರಿಗಳು ಮತ್ತು 28 ರಾಜ್ಯ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಕೇಂದ್ರ ಮಂತ್ರಿ ಮಂಡಲದ ಒಟ್ಟು ಸಂಖ್ಯೆ 78ಕ್ಕೆ ಏರಿಕೆಯಾಗಿದೆ.
ರಾಜ್ಯ ಸಚಿವರಾಗಿ ಶೋಭಾ ಕರಂದ್ಲಾಜೆ, ದರ್ಶನಾ ವಿಕ್ರಮ್ ಜರ್ದೋಶ್, ಮೀನಾಕ್ಷಿ ಲೇಖಿ, ಅನ್ನಪೂರ್ಣ ದೇವಿ, ಪ್ರತಿಮಾ ಭೌಮಿಕ್, ಡಾ.ಭಾರತಿ ಪ್ರವೀಣ್ ಪವಾರ್ ಮತ್ತು ಅಪ್ನಾ ದಳದ ಅನುಪ್ರಿಯಾ ಸಿಂಗ್ ಪಟೇಲ್ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಮೂವರು ಸಂಸದರು ಮೊದಲ ಬಾರಿಗೆ ಆಯ್ಕೆಯಾದವರಾಗಿದ್ದಾರೆ.
ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ (ಇಬ್ಬರೂ ಕ್ಯಾಬಿನೆಟ್ ಮಂತ್ರಿಗಳು), ಸಾಧ್ವಿ ನಿರಂಜನ್ ಜ್ಯೋತಿ ಮತ್ತು ರೇಣುಕಾ ಸಿಂಗ್ ಸಾರುಟಾ ಅವರು ಈಗಾಗಲೇ ಕೇಂದ್ರ ಮಂತ್ರಿ ಪರಿಷತ್ತಿನಲ್ಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ರಾಜ್ಯ ಸಚಿವೆಯಾಗಿದ್ದ ದೇಬಶ್ರೀ ಚೌಧರಿ ಬುಧವಾರ ಬೆಳಗ್ಗೆ ರಾಜೀನಾಮೆ ನೀಡಿದ್ದರು. 2014-19ರ ಮೊದಲ ಮೋದಿ ಸರ್ಕಾರದಲ್ಲಿ ಆರು ಕ್ಯಾಬಿನೆಟ್ ದರ್ಜೆ ಸಚಿವರು ಸೇರಿ ಒಂಬತ್ತು ಮಹಿಳೆಯರಿದ್ದರು.
