
ಒಟಿಟಿಗೆ ಬರಲು ಸಜ್ಜಾದ ‘ಹನುಮಾನ್ ಅಂಶ್’: ಸ್ಟ್ರೀಮಿಂಗ್ ಯಾವಾಗ?
ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಹಾಗೂ ಬೋಧನೆಗಳ ಆಧಾರಿತ ‘ಹನುಮಾನ್ ಅಂಶ್’ ಸಿನಿಮಾ ಇದೀಗ ಒಟಿಟಿ ವೇದಿಕೆಗೆ ಬರಲು ಸಜ್ಜಾಗಿದೆ. ವಿಶ್ವದಾದ್ಯಂತ ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಚಿತ್ರವು ನವೆಂಬರ್ 27ರಿಂದ ‘ಸೋನಿ ಲಿವ್’ (SonyLIV) ಒಟಿಟಿಯಲ್ಲಿ ಪ್ರಸಾರವಾಗಲಿದೆ.
ಒಟಿಟಿ ಬಿಡುಗಡೆ ಕುರಿತು ‘ಸ್ವಯಂಭೂ ಮೀಡಿಯಾ ನೆಟ್‌ವರ್ಕ್’ ಮೂಲಕ ಚಿತ್ರದ ನಿರ್ದೇಶಕ ಡಾ. ವಿಶಾಲ್ ಚತುರ್ವೇದಿ ಹಾಗೂ ನಮ್ರತಾ ಜಿ. ಸಿಂಗ್ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾವು ಜಾಗತಿಕ ಮಟ್ಟದಲ್ಲಿ ಭಾರಿ ಯಶಸ್ಸು ಸಾಧಿಸಿ ₹452.86 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು. ಇದೀಗ ಸಿನಿಮಾ ಒಟಿಟಿಗೆ ಬರುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಡಾ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಸಿನಿಮಾದ ಕಥೆಯು ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಸಾಗುತ್ತದೆ. ತಾಯಿಯನ್ನು ಕಳೆದುಕೊಂಡ ಲಕ್ಷ್ಮಿ ನಾರಾಯಣ್ ಎಂಬ ಬಾಲಕ ದೇವರನ್ನು ಹುಡುಕುತ್ತಾ ಹೊರಡುತ್ತಾನೆ. ಉತ್ತರ ಭಾರತದ ವಿವಿಧ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಆತನಿಗೆ ಎದುರಾಗುವ ಅನುಭವಗಳು, ಆತನನ್ನು ನೀಮ್ ಕರೋಲಿ ಬಾಬಾ ಆಗುವತ್ತ ಕರೆದೊಯ್ಯುವ ಪಯಣವನ್ನು ಸಿನಿಮಾದಲ್ಲಿ ರೋಚಕವಾಗಿ ಚಿತ್ರಿಸಲಾಗಿದೆ.