ಕರುನಾಡೋತ್ಸವ: ರಾ.ನಂ. ಚಂದ್ರಶೇಖರ ಎಂಬ ‘ನಿತ್ಯೋತ್ಸವದ ಕನ್ನಡಿಗ’

ಕರುನಾಡೋತ್ಸವ: ರಾ.ನಂ. ಚಂದ್ರಶೇಖರ ಎಂಬ ‘ನಿತ್ಯೋತ್ಸವದ ಕನ್ನಡಿಗ’

ಕರುನಾಡೋತ್ಸವ: ರಾ.ನಂ. ಚಂದ್ರಶೇಖರ ಎಂಬ ‘ನಿತ್ಯೋತ್ಸವದ ಕನ್ನಡಿಗ’

ಅರವತ್ತು - ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳಲ್ಲಿ ಅನ್ಯಭಾಷಾ ಚಿತ್ರಗಳ ಅಬ್ಬರ ಜೋರಾಗಿತ್ತು. ಆ ಸಂದರ್ಭದಲ್ಲಿ ಮ. ರಾಮಮೂರ್ತಿ, ಅ.ನ.ಕೃ, ನಾಡಿಗೇರ ಕೃಷ್ಣರಾಯರು, ವಾಟಾಳ್‌ ನಾಗರಾಜ್ ಮುಂತಾದವರು ಚಿತ್ರಮಂದಿರಗಳ ಮುಂದೆ ಸೇರಿ ಧಿಕ್ಕಾರ ಕೂಗುತ್ತಿದ್ದರು. ಕನ್ನಡ ಚಿತ್ರಗಳು ಬಿಡುಗಡೆಯಾದರೆ ಉತ್ಸಾಹದಿಂದ ಜನರು ಕನ್ನಡ ಚಿತ್ರಮಂದಿರಗಳಿಗೆ ಬರುವಂತೆ ಕರೆ ನೀಡುತ್ತಿದ್ದರಲ್ಲದೆ, ತಾವೇ ಟಿಕೇಟುಗಳನ್ನು ಖರೀದಿಸಿ, ಜನರನ್ನು ಚಿತ್ರಮಂದಿರಗಳಿಗೆ ಕರೆತುರುತ್ತಿದ್ದರು.

ಕನ್ನಡ ಚಿತ್ರಮಂದಿರದ ಮುಂದೆ ʼಚಿತ್ರಮಂದಿರ ತುಂಬಿದೆʼ ಎಂಬ ಫಲಕವನ್ನು ಹಾಕಿಸುತ್ತಿದ್ದರು. ಕನ್ನಡ ಚಿತ್ರಮಂದಿರ ಭರ್ತಿಯಾದರೆ ಇವರಿಗೆ ಇನ್ನಿಲ್ಲದ ಆನಂದವಾಗುತ್ತಿತ್ತು. ಒಮ್ಮೆ ಕೆಂಪೇಗೌಡ ರಸ್ತೆಯ ಚಿತ್ರಮಂದಿರದಲ್ಲಿ ಪರಭಾಷೆಯ ಚಿತ್ರ ಪ್ರದರ್ಶಿಸಲಾಗುತ್ತಿತ್ತು. ಕನ್ನಡ ಚಳವಳಿಗಾರರೆಲ್ಲ ಗುಂಪು ಸೇರಿದ್ದರು. ಕನ್ನಡಪರ ಘೋಷಣೆಗಳು ಮೊಳಗುತ್ತಿದ್ದವು. ಆಗ ಇದ್ದಕ್ಕಿದ್ದಂತೆ ಹಿಂದಿನಿಂದ ಒಂದು ಕಲ್ಲು ಚಿತ್ರಮಂದಿರದ ಮೇಲೆ ತೂರಿಬಂತು. ಅದಾರೆಂದು ತಿರುಗಿನೋಡಿದರೆ ಸಣಕಲು ದೇಹದ, ಆವೇಶ ತುಂಬಿದ ಯವಕ, ಅಸಾಮಾನ್ಯ ಕನ್ನಡ ಕಾರ್ಯಕರ್ತನೇ ಕಲ್ಲನ್ನು ಬೀರಿದವನು. ಅವರು ಬೇರಾರೂ ಅಲ್ಲ ರಾ.ನಂ. ಚಂದ್ರಶೇಖರ.

ಬೆಂಗಳೂರಿನ ಹೆಚ್.ಎ.ಎಲ್. ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ ಇವರು ಸಂಜೆಯಾಯಿತೆಂದರೆ ಕನ್ನಡ ಚಳವಳಿಗಾರರ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಚಿಕ್ಕಲಾಲ್‌ ಬಾಗ್‌, ಸರ್ಪಭೂಷಣ ಮಠ ಮೊದಲೆಡೆ ನಡೆಯುತ್ತಿದ್ದ ಸಭೆಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಉಳಿದರೆ ರಾಜ್ಯದಲ್ಲಿ ಕನ್ನಡ ಉಳಿಯುತ್ತದೆಯೆಂಬುದು ಮನವರಿಕೆಯಾಗಿತ್ತು. ಒಮ್ಮೆ ರಾನಂ ಅವರ ಅಣ್ಣ ʼಕೇವಲ ಪರಭಾಷಾ ಚಿತ್ರಮಂದಿರಗಳಿಗೆ ಬಸ್ಸುಗಳಿಗೆ ಕಲ್ಲು ಹೊಡೆದರೆ ಕನ್ನಡಿಗರ ಸಮಸ್ಯೆ ಪರಿಹಾರವಾಗುವುದಿಲ್ಲ. ಅದಕ್ಕೊಂದು ತಾತ್ವಿಕವಾದ ಪರಿಹಾರವನ್ನು ಕಂಡುಕೊಳ್ಳಿರಿʼ ಎಂದು ನೀಡಿದ ಸಲಹೆ ರಾನಂರವರ ಹೋರಾಟವನ್ನು ಬದಲಿಸಿತು.

ಗೋಕಾಕ್‌ ವರದಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸಾಹಿತಿ ಕಲಾವಿದರ ಬಳಗವು ನಡೆಸುತ್ತಿದ್ದ ಹೋರಾಟದಲ್ಲಿ ಭಾಗವಹಿಸಿದರು. ರಾನಂ ಅವರ ಉತ್ಸಾಹವನ್ನು ನೋಡಿದ ಡಾ. ಚಿದಾನಂದಮೂರ್ತಿಯವರು ಪ್ರಶಂಸಿಸಿದರು. ಚಿದಾನಂದಮೂರ್ತಿಯವರ ಸಹಚರ್ಯಕ್ಕೆ ಬಂದಮೇಲೆ ಸಾಹಿತಿಗಳು, ಕಲಾವಿದರು, ಚಳವಳಿಗಾರರ ಸಹಚರ್ಯೆ ಸನಿಹವಾಯಿತು. ಗೋಕಾಕ್‌ ಚಳವಳಿಯ ಸಂದರ್ಭದಲ್ಲಿ ವೇದಿಕೆ ಸಿದ್ಧಪಡಿಸುವುದು, ಚಳವಳಿಯ ರೂಪರೇಶೆ ಸಿದ್ಧಪಡಿಸುವುದು, ಕರಪತ್ರದ ಸಿದ್ಧತೆ, ಮಾಧ್ಯಮಗಳಿಗೆ ಪ್ರಕಟಣೆ ನೀಡುವುದು, ಹೀಗೆ ಹತ್ತು ಹಲವಾರು ಹಿನ್ನೆಲೆಯಲ್ಲಿ ತೊಡಗಿಸಿಕೊಂಡ ರಾ.ನಂ. ಚಳವಳಿಗೆ ಶಕ್ತಿಯಾಗಿದ್ದರು.

ಮುಂದೆ ಕನ್ನಡ ಶಕ್ತಿ ಕೇಂದ್ರ ಸ್ಥಾಪನೆ ಮತ್ತು ಅದರ ಚಳವಳಿ, ಪ್ರತಿಭಟನೆಗಳಲ್ಲಿ ರಾನಂ ಅವರ ಕೊಡುಗೆ ಅಸಾಧಾರಣ. ಉರ್ದು ವಾರ್ತೆ ಹೋರಾಟದ ಸಂದರ್ಭದಲ್ಲಿ, ಹಿಂದಿ ಭಾಷೆಯ ಹೇರಿಕೆ ಸಂದರ್ಭದಲ್ಲಿ ದೂರದರ್ಶನಕ್ಕೆ ಸರಬರಾಜಾಗುತ್ತಿದ್ದ ವಿದ್ಯುತ್‌ ಪರಿವರ್ತಕ ಯಂತ್ರವನ್ನು ಜಕಂ ಮಾಡಿ, ಅಂದು ಪ್ರಸಾರವಾಗದಂತೆ ತಡೆದ ಕೀರ್ತಿ ಇವರದ್ದು. ಇದಕ್ಕಾಗಿ ಬಂಧನ, ಕೋರ್ಟಿನ ಮೆಟ್ಟಿಲುಗಳನ್ನು ಹತ್ತಿದರೂ ಕನ್ನಡಕ್ಕಾಗಿ ಯಾವ ತ್ಯಾಗಕ್ಕಾದರೂ ಸಿದ್ಧರು ಇವರು.

ಕೇಂದ್ರದ ಮಲತಾಯಿ ಧೋರಣೆಗಳನ್ನು ಖಂಡಿಸಿ ನಡೆದ ಚಳವಳಿಗಳಲ್ಲಿ, ಕಾವೇರಿ ತೀರ್ಪಿನ ವಿರುದ್ಧ ನಡೆದ ಚಳವಳಿಗಳಲ್ಲಿ ರಾನಂ ಅವರ ಹೋರಾಟ ಗಮನಾರ್ಹವಾದುದು. ಕೇವಲ ಚಳವಳಿ ಮಾತ್ರವಲ್ಲದೆ ಸೈದ್ಧಾಂತಿಕ ನೆಲೆಗಟ್ಟನ್ನು ಕಟ್ಟಿಕೊಡುವಲ್ಲಿಯೂ ಇವರ ಕಾಣ್ಕೆ ದೊಡ್ಡದು.

‘ಕನ್ನಡ ಕನ್ನಡಿಗ ಕರ್ನಾಟಕ’ ಕೃತಿ

ಡಾ. ಎಂ. ಚಿದಾನಂದಮೂರ್ತಿಯವರೊಂದಿಗೆ ಕನ್ನಡಿಗರಿಗೆ ಅತ್ಯವಶ್ಯಕವಾಗಿ ಬೇಕಾದ ʼಕನ್ನಡ ಕನ್ನಡಿಗ ಕರ್ನಾಟಕʼ ಕೃತಿಯನ್ನು ಸಂಪಾದಿಸಿದ್ದಾರೆ. ಎಸ್.ಎಲ್.‌ ಬೈರಪ್ಪ ಅವರು ಹೇಳಿದಂತೆ ಈ ಕೃತಿಯು ಕನ್ನಡಿಗರ ಅನಧಿಕೃತ ಸಂವಿಧಾನದಂತಿದೆ. ಕನ್ನಡ ಚಳವಳಿ ಹೋರಾಟವನ್ನು ಕನ್ನಡ ಹೋರಾಟಗಳು ಒಂದು ನೋಟ, ಕನ್ನಡ ಹಾದಿಯ ಕೈಮರಗಳು, ಕನ್ನಡ ಡಿಂಡಿಮ,ಕನ್ನಡ ಮಾರ್ದನಿ, ಕನ್ನಡ ಶಕ್ತಿಯ ವಿರಾಟ್‌ ಸ್ವರೂಪ ಮೊದಲಾದ ಮೂವತ್ತಕ್ಕೂ ಹೆಚ್ಚಿನ ಕೃತಿಗಳು ಬರೆದಿದ್ದಾರೆ.

ಸಾಮಾನ್ಯವಾಗಿ ಚಳವಳಿಗಳಲ್ಲಿ ತೊಡಗಿಕೊಂಡವರು ಬರವಣಿಗೆಯಲ್ಲಿ ಹಿಂದಿರುತ್ತಾರೆ. ಆದರೆ ರಾನಂ ಅವರು ಚಳವಳಿ, ಸಂಘಟನೆ, ಬರವಣಿಗೆ ಎಲ್ಲದಕ್ಕೂ ಸೈ ಎನ್ನಿಸಿಕೊಂಡಿದ್ದಾರೆ. ಕನ್ನಡಿಗರ ಉದ್ಯೋಗ ಪುರಾಣ ಕೃತಿಯಲ್ಲಿ ಕನ್ನಡಪರ ಕಾಳಜಿಯೊಂದಿದ್ದರೆ ಸಾಲದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂಬುದಕ್ಕೆ ಸಾಕ್ಷಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿರುವ ಉದ್ಯೋಗಾವಕಾಶಗಳ ಬಗೆಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ.

ರಾನಂ ಸಂಪಾದಿಸಿರುವ ಕನ್ನಡ ಕಿಸೆಗನ್ನಡಿ ಎಲ್ಲರ ಬಳಿಯಲ್ಲಿರಬೇಕಾದ ಪುಟ್ಟ ಕೃತಿಯಾಗಿದೆ. ಕನ್ನಡಪರ ಆಜ್ಞೆಗಳು – ಆದೇಶಗಳು ಇದುವರೆಗಿನ ಪ್ರಮುಖವಾದ ಆದೇಶಗಳನ್ನು ಒಂದೆಡೆ ಸಂಗ್ರಹಿಸಿ ಸಂಪಾದಿಸಿದ್ದಾರೆ. ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆಯೆಂದು ಮನಗಂಡಿರುವ ಇವರು ಕನ್ನಡ ಶಾಲೆಯಲ್ಲಿ ಓದಿದ, ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡುತ್ತಿದ್ದಾರೆ. ತಮಗೆ ಬಂದ ಪ್ರಶಸ್ತಿ ಪುರಸ್ಕಾರಗಳ ಸಂಭಾವನೆಯನ್ನು ಸರ್ಕಾರಿ ಶಾಲೆಗಳು ಉಳುವಿಗೆ ಬಳಸಿದ ಹಿರಿಮೆ ಇವರದು.

ಕನ್ನಡ ಗೆಳೆಯರ ಬಳಗದ ಮೂಲಕ ಪ್ರತಿ ತಿಂಗಳು ಮಾಸದ ಮಾತು ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವ ರಾನಂ ಅವರು ಕೇವಲ ನವೆಂಬರ್‌ ತಿಂಗಳ ಕನ್ನಡಿಗರಲ್ಲ, ನಿತ್ಯೋತ್ಸವದ ಕನ್ನಡಿಗರು. ಅನುದಿನವೂ ಕನ್ನಡ, ಕನ್ನಡಿಗ, ಕರ್ನಾಟಕದ ಬಗೆಗೆ ಚಿಂತಿಸುವ ಮತ್ತು ಆ ನನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಅಪರೂಪದ ಸಾಮಾನ್ಯ ಆದರೆ ಅಸಾಮಾನ್ಯರಾಗಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ