ಹೆದ್ದಾರಿ ತಡೆ ಹೋರಾಟಕ್ಕೆ ಯಲ್ಲಾಪುರದಲ್ಲಿ ಜನಸಾಗರ

ಹೆದ್ದಾರಿ ತಡೆ ಹೋರಾಟಕ್ಕೆ ಯಲ್ಲಾಪುರದಲ್ಲಿ ಜನಸಾಗರ

ಹೆದ್ದಾರಿ ತಡೆ ಹೋರಾಟಕ್ಕೆ ಯಲ್ಲಾಪುರದಲ್ಲಿ ಜನಸಾಗರ

ಯಲ್ಲಾಪುರ: ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆಗಳ ವಿರುದ್ಧ ಬೇಡ್ತಿ– ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸುವ ಹೋರಾಟದಲ್ಲಿ ಸಾವಿರಾರು ಜನರು ಪಾಲ್ಗೊಂಡು, ಯೋಜನೆ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದವರಲ್ಲಿ ಮಹಿಳೆಯರು, ಯುವಜನರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಇದ್ದರು. ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲಿಸಿದರು.

ಯಲ್ಲಾಪುರ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ– 52ನ್ನು ನಾಲ್ಕು ತಾಸಿಗೂ ಹೆಚ್ಚು ಕಾಲ ತಡೆದು, ಯೋಜನೆ ಕೈಬಿಡಲು ಒಕ್ಕೊರಲಿನಿಂದ ಒತ್ತಾಯಿಸಿದರು. ಸಾವಿರಾರು ಜನರು ಸೇರಿದ್ದರೂ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಲಿಲ್ಲ. ಪ್ರತಿಭಟನೆಯ ಮಧ್ಯೆ ರೋಗಿಗಳನ್ನು ಕರೆದೊಯ್ಯುತ್ತಿದ್ದ ನಾಲ್ಕಾರು ಆಂಬುಲೆನ್ಸ್‌ಗಳಿಗೆ ದಾರಿ ಮಾಡಿಕೊಡಲಾಯಿತು.

ಟಿಎಂಎಸ್ ಸಮೀಪದಲ್ಲಿ ನಡೆದ ಸಭೆಯಲ್ಲಿ ಹೆದ್ದಾರಿ ತಡೆ ಹೋರಾಟ ಸಮಿತಿಯ ಸಂಚಾಲಕ ಎನ್‌.ಕೆ ಭಟ್‌ ಅಗ್ಗಾಶಿಕುಂಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಯೋಜನೆ ಕುರಿತಂತೆ ಜನಪ್ರತಿನಿಧಿಗಳು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವುದು ಬೇಡ. ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ನಾವು ರಸ್ತೆಗೆ ಬರುವ ಅಗತ್ಯ ಬೀಳುವುದಿಲ್ಲ’ ಎಂದರು.

ಬಳಿಕ ಅಲ್ಲಿಂದ ಮೆರವಣಿಗೆ ನಡೆಸಲಾಯಿತು. ಎಲ್‌ಎಸ್‌ಎಂಪಿ ಮೈದಾನದ ಬಳಿ ಸಮಾವೇಶಗೊಂಡ ಸಾವಿರಾರು ಜನರು ಹೆದ್ದಾರಿ ತಡೆದು, ಅಲ್ಲಿಯೇ ಸಭೆ ನಡೆಸಿದರು. ಪ್ರತಿಭಟನೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಟ್ಟಾಗಿ ವೇದಿಕೆ ಹಂಚಿಕೊಂಡರು. ಯೋಜನೆ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

‘ಪ್ರಜಾಪ್ರಭುತ್ವದಲ್ಲಿ ಸಂಘಟಿತ ಜನಶಕ್ತಿಯ ತೀರ್ಮಾನವೇ ಅಂತಿಮ. ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಏನು ಹೇಳುತ್ತಾರೆ ಅನ್ನುವುದನ್ನಷ್ಷೇ ಮುಖ್ಯವಾಗಿಟ್ಟುಕೊಂಡು ಪಕ್ಷತೀತವಾಗಿ ನದಿ ತಿರುವು ಯೋಜನೆ ತಡೆಯಲು ಹೋರಾಡೋಣ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

‘ರಾಜಕಾರಣದಿಂದ ಈ ಹೋರಾಟವನ್ನು ದೂರ ಇಡಿ. ರಾಜಕಾರಣ ಮಾಡಿದರೆ ಹೋರಾಟ ಬಹಳ ದಿನ ನಡೆಯುವುದಿಲ್ಲ. ನದಿ ತಿರುವು ಯೋಜನೆ ನಿಲ್ಲಿಸಲು ಸಾಧ್ಯವಿದ್ದ ಎಲ್ಲ ಶಕ್ತಿ ವಿನಿಯೋಗಿಸುತ್ತೇನೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

‘ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಒಂದಾಗಿ ಮುಂದಿನ ಹೋರಾಟದ ಕಾರ್ಯಸೂಚಿ ತಯಾರಿಸೋಣ’ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೇಳಿದರು.

‘ಸರ್ಕಾರ ಬೇಡವಾದ ಯೋಜನೆಗಳನ್ನು ಜಿಲ್ಲೆಗೆ ತಂದು ಹೇರುತ್ತಿದೆ. ಜಿಲ್ಲೆಯ ಎಲ್ಲ ಶಾಸಕರು ಒಟ್ಟಾದರೆ ಯೋಜನೆ ನಿಲ್ಲಿಸುವುದು ದೊಡ್ಡದಲ್ಲ. ಎಲ್ಲ ಶಾಸಕರು ಒಟ್ಟಾಗಿ ಬೆಳಗಾವಿ ಅಧಿವೇಶನದಲ್ಲಿ ವಿರೋಧಿಸೋಣ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಬೇಡ್ತಿ– ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಹರಿಪ್ರಕಾಶ ಕೋಣೆಮನೆ ಮಾತನಾಡಿದರು.‌

ಯೋಜನೆ ಸ್ಥಗಿತಗೊಳಿಸಲುಒತ್ತಾಯಿಸಿ ಸರ್ಕಾರಕ್ಕೆ ಬರೆದ ಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒಡಾ.ದಿಲೀಷ್‌ ಶಶಿ ಅವರಿಗೆ ಸಲ್ಲಿಸಲಾಯಿತು.

‘ವಾಸ್ತವಿಕ ಅಧ್ಯಯನ ನಡೆದಿಲ್ಲ’

‘ನದಿಗಳು ಸಮುದ್ರ ಸೇರುವುದು ಪ್ರಕೃತಿಯ ಶಾಶ್ವತ ನಿಯಮವಾಗಿದ್ದು, ಅದನ್ನು ಅರ್ಥಮಾಡಿಕೊಳ್ಳದೆ ರೂಪಿಸುವ ಯೋಜನೆಗಳು ವಿನಾಶಕಾರಿ ಆಗಲಿವೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದ ಎತ್ತಿನಹೊಳೆ ಯೋಜನೆಯಿಂದ ಇಂದಿಗೂ ನಿರೀಕ್ಷಿತ ನೀರು ಸಿಕ್ಕಿಲ್ಲ. ಇಂತಹ ಯೋಜನೆಗಳು ಜನರಿಗೆ ನೀರು ಕೊಡುವುದಕ್ಕಿಂತ ಕೇವಲ ಹಣದ ಹರಿವಿಗಷ್ಟೇ ಸೀಮಿತವಾಗುತ್ತಿವೆ ಎಂಬ ಶಂಕೆ ಇದೆ. ಸರ್ಕಾರವು 18.5 ಟಿಎಂಸಿ ನೀರು ಲಭ್ಯವಿದೆ ಎಂದು ಹೇಳುತ್ತಿರುವುದು ಸಂಪೂರ್ಣ ಅವೈಜ್ಞಾನಿಕ ಲೆಕ್ಕಾಚಾರವಾಗಿದೆ. ಬೇಡ್ತಿ ಕಣಿವೆಯ ನೈಜ ನೀರಿನ ಲಭ್ಯತೆ ಮತ್ತು ಪರಿಸರ ಪ್ರಭಾವದ ಬಗ್ಗೆ ವಾಸ್ತವಿಕ ಅಧ್ಯಯನ ನಡೆಸದೆ ಮುಂದುವರಿಯುತ್ತಿರುವುದು ಸರಿಯಲ್ಲ’ ಎಂದು ಆರ್ಥಿಕ ತಜ್ಞ ಬಿ.ಎಂ.ಕುಮಾರಸ್ವಾಮಿ ಆಕ್ಷೇಪಿಸಿದರು.

ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು 15 ದಿನದೊಳಗೆ ಯೋಜನೆಗೆ ತಡೆ ಹಾಕುವ ಬಗ್ಗೆ ಗಟ್ಟಿ ತೀರ್ಮಾನ ಕೈಗೊಳ್ಳಬೇಕು

ಮಾರಕ ಯೋಜನೆಗಳಿಂದ ಆತಂಕಕ್ಕೆ ಸಿಲುಕಿರುವ ಜನರು ಕೇಂದ್ರ ಮತ್ತು ರಾಜ್ಯದ ಮಂತ್ರಿಗಳು/ ಜನಪ್ರತಿನಿಧಿಗಳ ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕಾರ ಹಾಕುವಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಬಹುದು.

ಪಶ್ಚಿಮ ಘಟ್ಟಪ್ರದೇಶದ ಸೂಕ್ಷ್ಮ ಮತ್ತು ಅತಿ ಮಹತ್ವದ ಪರಿಸರದ ಸಂರಕ್ಷಣೆಗಾಗಿ ಮುಂಬರುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಮತದಾನ ಬಹಿಷ್ಕಾರದಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬರಬಹುದು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ