
ಶಿಸ್ತು ಉಲ್ಲಂಘಿಸಿದರೆ ಉಚ್ಚಾಟಿಸುವ ಅಧಿಕಾರ ಅಧ್ಯಕ್ಷರಿಗಿದೆ-ಸಂಸದ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ: ಪಕ್ಷದ ನೀತಿ, ನಿಯಮಗಳನ್ನು ಉಲ್ಲಂಘಿಸಿದರೆ ಅಂತಹವರಿಗೆ ನೋಟಿಸ್ ನೀಡಿ ಪಕ್ಷದಿಂದ ಉಚ್ಚಾಟಿಸುವ ಅಧಿಕಾರ ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ಇದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ತನ್ನದೇ ಆದ ಬೈಲಾ ಇದೆ. ಯಾರು ಶಿಸ್ತು ಉಲ್ಲಂಘಿಸುವರೋ, ಶಿಸ್ತು ಉಲ್ಲಂಘಿಸಿ ಮಾತನಾಡುವರೋ ಅವರ ವಿರುದ್ಧ ಕ್ರಮಕೈಗೊಳ್ಳುವರು ಎಂದರು.
ಎಲ್ಲರ ಸಹಕಾರದಿಂದ ನಾವು ಹಮ್ಮಿಕೊಂಡಿದ್ದ ರಾಜ್ಯೋತ್ಸವ ಯಶಸ್ವಿಯಾಯಿತು. ಜನರು ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಹೇಳಿದರು.
ಅಧಿಕಾರಕ್ಕೆ ಬಂದರೆ ಹಾಲಿನ ಪ್ರೋತ್ಸಾಹಧನ ಹೆಚ್ಚಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ ಪ್ರೋತ್ಸಾಹಧನ ಹೆಚ್ಚಿಸಲೇ ಇಲ್ಲ. ಅಧಿಕಾರಕ್ಕೆ ಬಂದ ಈ ಮೂರೂವರೆ ವರ್ಷದಲ್ಲಿ ನಾಲ್ಕನೇ ಬಾರಿ ಹಾಲಿನ ದರ ಹೆಚ್ಚಿಸಿದ್ದಾರೆ. ದರ ಹೆಚ್ಚಿಸಿ ರೈತರಿಗೆ ನೀಡಲಿ. ಆದರೆ ಆ ಹಣವನ್ನು ಗ್ರಾಹಕರ ಮೇಲೆ ಹೊರೆ ಹಾಕುವ ಬದಲು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆದಿರುವ ಮಾರುವೇಷದ ಕಾರ್ಯಾಚರಣೆಯಿಂದ ದೇಶದಲ್ಲಿಯೇ ರಾಜ್ಯಕ್ಕೆ ಕಪ್ಪು ಚುಕ್ಕಿ ಬಿದ್ದಿದೆ. ಇದು ಎಲ್ಲರೂ ತಲೆ ತಗ್ಗಿಸುವ ವಿಚಾರ. ಕಾಗೋಡು ತಿಮ್ಮಪ್ಪ, ಎಸ್.ಬಂಗಾರಪ್ಪ, ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ದೇವರಾಜ ಅರಸು ಹೀಗೆ ಘಟಾನುಘಟಿ ನಾಯಕರ ರಾಜಕೀಯ ಕಾಲದಲ್ಲಿ ಎಂದೂ ಇಂತಹದ್ದನ್ನು ಕೇಳಿರಲಿಲ್ಲ ಎಂದರು.
ವ್ಯಕ್ತಿ ಒಬ್ಬ ಮಲಗುವ ಕೋಣೆಯಲ್ಲಿ ಏನು ಮಾಡುತ್ತಾನೆ ಎನ್ನುವುದು ರಾಜ್ಯ ಮತ್ತು ದೇಶದ ಸುದ್ದಿ ಆಗಿದೆ. ಇದರಿಂದ ರೈತರಿಗೆ, ಜನಸಾಮಾನ್ಯರಿಗೆ ಅನ್ನ ಸಿಗುತ್ತದೆಯೇ? ಅಭಿವೃದ್ಧಿ ಆಗುತ್ತದೆಯೇ? ಯಾರು ಕಾರ್ಯಾಚರಣೆಯ ಹಿಂದಿದ್ದಾರೋ ಅವರನ್ನು ಪತ್ತೆ ಹಚ್ಚಬೇಕು. ಅಂತಹವರು ಅಧಿಕಾರದಲ್ಲಿ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ತನಿಖೆ ನಡೆಯುತ್ತಿರುವ ಅವಧಿಯಲ್ಲಿಯೇ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾಧ್ಯಮಗಳ ಎದುರು ಮಾತನಾಡುವರು. ಮೊದಲು ಆಯುಕ್ತರು ರಾಜೀನಾಮೆ ನೀಡಬೇಕು. ಪ್ರಿಯಾಂಕ್ ಖರ್ಗೆ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಎಂದಿದ್ದಾರೆ. ಹೌದು, ನಾವು ಹಳ್ಳಿಯಿಂದಲೇ ಬಂದಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರ ಮಗ ಆಗಿದ್ದರಿಂದಲೇ ಇವರು ಹಾರ್ವಡ್ ವಿ.ವಿ.ಯಿಂದ ಬಂದಿದ್ದಾರೆ. ಅಧಿಕಾರ ಮದ ತಲೆಯಲ್ಲಿದೆ ಎಂದು ಕಿಡಿಕಾರಿದರು.
20 ಸಾವಿರ ನಿವೇಶನ ಕೊಡುವೆ; ಪ್ರದೀಪ್ ಈಶ್ವರ್
‘ಡಾ.ಕೆ.ಸುಧಾಕರ್ ಅವರು 2023ರ ವಿಧಾನಸಭಾ ಚುನಾವಣೆಯ ವೇಳೆ ಗಿಮಿಕ್‌ಗಾಗಿ ನಿವೇಶನದ ಹಕ್ಕುಪತ್ರಗಳನ್ನು ನೀಡಿದ್ದರು. ಅವು ನಕಲಿ ಎಂದು ಸರ್ಕಾರವೇ ಹೇಳಿದೆ’ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ನ.1ರಂದು ಡಾ.ಕೆ.ಸುಧಾಕರ್ ಫೌಂಡೇಷನ್‌ನಿಂದ ಚಿಕ್ಕಬಳ್ಳಾಪುರದಲ್ಲಿ ರಾಜ್ಯೋತ್ಸವ ನಡೆಸಿತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಭಾಗವಹಿಸಿದ್ದರು. ಡಾ.ಕೆ.ಸುಧಾಕರ್ ಅವಧಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಕಾಮಗಾರಿ, ಯೋಜನೆ ಬಗ್ಗೆ ಮಾತನಾಡಿದ್ದರು. ಆದರೆ ಶಾಸಕ ಪ್ರದೀಪ್ ಈಶ್ವರ್ ವಿಡಿಯೊ ಮೂಲಕ ಆರ್.ಅಶೋಕ ಅವರನ್ನು ಟೀಕಿಸಿದ್ದಾರೆ.
ಎಲ್ಲಿ ಜಾಗ, ನಿವೇಶನ ಇದೆಯೊ ಗೊತ್ತಿಲ್ಲ. ಜಾಗವಿಲ್ಲದೆಯೇ ಹಕ್ಕುಪತ್ರಗಳನ್ನು ನೀಡಿದ್ದರು. ನಂತರ ಈ ವಿಚಾರ ಸರ್ಕಾರದ ಮಟ್ಟಕ್ಕೆ ಹೋಯಿತು. ನಕಲಿ ಹಕ್ಕುಪತ್ರ ಎಂದು ಸರ್ಕಾರ ತಿಳಿಸಿತು. ನಾನು ಈಗ 20 ಸಾವಿರ ನಿವೇಶನಗಳನ್ನು ನೀಡುವೆ ಎಂದಿದ್ದಾರೆ.
ವೈದ್ಯಕೀಯ ಶಿಕ್ಷಣ ಕಾಲೇಜಿನ ಕಾಮಗಾರಿಗೆ ₹350 ಕೋಟಿ ಬಿಡುಗಡೆ ಆಗಬೇಕಾಗಿತ್ತು. ಆ ಹಣ ಬಿಡುಗಡೆ ಮಾಡಿಸಿದ್ದೇನೆ. ಮತ್ತಷ್ಟು ಹಣ ತರುವೆ. ಮಂಚೇನಹಳ್ಳಿಯಲ್ಲಿ ತಾಲ್ಲೂಕು ಘೋಷಿಸಿದರು. ಆದರೆ ಅಲ್ಲಿ ಬಸ್ ನಿಲ್ದಾಣ ಸೇರಿದಂತೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇನೆ. ಒಂದು ಸರ್ಕಾರ ಮಾಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಫ್ಲೆಕ್ಸ್ ಅಳವಡಿಸುವುದನ್ನು ನಿಷೇಧಿಸಿದ್ದೇನೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ತೊಂದರೆ ನೀಡುತ್ತಿದ್ದರು. ಅಲ್ಲಿ ಕಾರ್ಯಕ್ರಮಗಳನ್ನು ಮಾಡಬಾರದು ಎಂದು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಡಾ.ಕೆ.ಸುಧಾಕರ್ ಶಾಸಕರಾಗಿದ್ದ ವೇಳೆ ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ? ನಾನು 302 ಹಳ್ಳಿಗಳಿಗೆ ಭೇಟಿ ನೀಡಿ ಜನರ ಕಷ್ಟ ಕೇಳಿದ್ದೇನೆ. ಅಮ್ಮ ಆಂಬುಲೆನ್ಸ್ ಬಿಟ್ಟಿದ್ದೇನೆ. ಸಂಸದರು ಎರಡು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದಾರೆ. ಅವರನ್ನು ಅಭಿನಂದಿಸುವೆ. ಆದರೆ ನಾನು ಮನೆಗಳ ಬಳಿ ಹೋಗಿ 12 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇನೆ. ಆದರೆ ಪ್ರಚಾರ ಪಡೆದಿಲ್ಲ ಎಂದರು.