
ಹಿಡಿಯಾದರೆ ಬಾಳೇವು, ಪುಡಿಯಾದರೆ ಮಣ್ಣಾವೆವು: ಮಾಜಿ ಸಂಸದ ಸಂಗಣ್ಣ ಕರಡಿ
ಕೊಪ್ಪಳ: 'ಹಿಡಿಯಾದರೆ ಬಾಳೇವು, ಪುಡಿಯಾದರೆ ಮಣ್ಣಾವೆವು ಎಂಬ ರಾಣಿ ಚನ್ನಮ್ಮರ ಮಾತನ್ನು ನೆನಪಿಟ್ಟುಕೊಂಡು ನಾವೆಲ್ಲ ಒಗ್ಗಟಾಗಿ ಪಂಚಮಸಾಲಿ ಸಮಾಜದ ಉನ್ನತಿಗೆ ಶ್ರಮಿಸಬೇಕಿದೆ’ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ವೀರಶೈವ ಲಿಂಗಾಯತ ಪಂಚಮಸಾಲಿ ತಾಲ್ಲೂಕು ಸಂಘದಿಂದ ನಡೆದ ಕಿತ್ತೂರಿನ ರಾಣಿ ಚನ್ನಮ್ಮ ಅವರ 202ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪಂಚಮಸಾಲಿ ಎಂಬುದರ ಬಗ್ಗೆ ಎಷ್ಟೋ ವರ್ಷಗಳ ಕಾಲ ಮಾಹಿತಿಯೇ ಇರಲಿಲ್ಲ. ಅಲ್ಲಿಯವರೆಗೆ ನಾವೆಲ್ಲ ಲಿಂಗಾಯತ ಎಂತಲೇ ಅಂದುಕೊಂಡಿದ್ದೆವು. ಈ ಬಗ್ಗೆ ನಮಗೆಲ್ಲ ಅರಿವು ಮೂಡಿಸಿದ ಬಿ.ಎಂ. ಹನುಮನಾಳ ಅವರನ್ನು ಎಷ್ಟು ಸ್ಮರಿಸಿದರೂ ಸಾಲದು. ಮೀಸಲಾತಿ ಪಡೆಯುವ ವಿಚಾರವಾಗಿ ನಾವೆಲ್ಲ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವುದು ಸಮಂಜಸವಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಬೇಕಿದೆ. ಎಲ್ಲರೂ ಶ್ರಮವಹಿಸಿದರೆ ಇದು ಖಂಡಿತ ಸಾಧ್ಯ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ‘ನಾವೆಲ್ಲ ಈ ನಾಡಿನ ಸ್ವಾಭಿಮಾನ, ದೇಶಪ್ರೇಮದ ಪ್ರತೀಕವಾಗಿರುವ ಕಿತ್ತೂರಿನ ರಾಣಿ ಚನ್ನಮ್ಮನವರ ಸಮುದಾಯದವರು ಎಂಬುದು ಹೆಮ್ಮೆ. ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರೊಂದಿಗೆ ಹೋರಾಡಿ ವಿಜಯಿಯಾದದ್ದು ಅಗ್ಗಳಿಕೆ’ ಎಂದರು.
‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಸುಮಾರು ವರ್ಷಗಳಿಂದ ಹೋರಾಟಗಳು ನಡೆಯುತ್ತಲೆ ಇವೆ. ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಆಗ ಸರ್ಕಾರ 2ಡಿ ಮೀಸಲಾತಿ ನೀಡಲು ಪ್ರಯತ್ನಿಸಿತ್ತು. ಆದರೆ ಅದು ಇನ್ನೂ ನಮ್ಮ ಕೈ ಸೇರಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ವೀರಶೈವ ಲಿಂಗಾಯತ ಎಂಬುದು ಒಡೆದು ಚೂರಾಗಿಬಿಟ್ಟಿದೆ’ ಎಂದು ಹೇಳಿದರು.
ಹರಿಹರ ಪೀಠದ ವಚನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್, ಮಾಜಿ ಸಂಸದ ಶಿವರಾಮಗೌಡ, ಮುಖಂಡರಾದ ದೇವೇಂದ್ರಪ್ಪ ಬಳೂಟಗಿ, ಶಂಭುಲಿಂಗನಗೌಡ ಪಾಟೀಲ್, ಸಮಾಜ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ, ತಾಲ್ಲೂಕು ಘಟಕದ ಅಧ್ಯಕ್ಷ ಕರಿಯಪ್ಪ ಮೇಟಿ, ಕರಿಯಪ್ಪ ಮೇಟಿ, ಸುಮಂಗಲಾ ಹಂಚಿನಾಳ, ಮಂಜುಳಾ ಕರಡಿ, ಪ್ರತಿಭಾ ಪಾಟೀಲ, ಸುಜಾತಾ ಪಟ್ಟಣಶೆಟ್ಟಿ, ಸದಾಶಿವ ಪಾಟೀಲ್, ಶರಣಪ್ಪ ಬಳಿಗಾರ, ಸಿ.ವಿ ಜಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.