
ಮುಂಡರಗಿ | ತಾತ್ಕಾಲಿಕ ದರ ನಿಗದಿ: ಕಾರ್ಖಾನೆ ಕಾರ್ಯಾರಂಭ
ಮುಂಡರಗಿ: ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿರುವ ವಿಜಯನಗರ ಶುಗರ್ಸ್ ಸಕ್ಕರೆ ಕಾರ್ಖಾನೆಯು ಅಕ್ಟೋಬರ್ 26ರಿಂದ ಕಾರ್ಯಾರಂಭ ಮಾಡಿದ್ದು, ಪ್ರತಿ ಟನ್ ಕಬ್ಬಿಗೆ ತಾತ್ಕಾಲಿಕವಾಗಿ ₹2,800 ದರ ನಿಗದಿಗೊಳಿಸಿ ಕಬ್ಬು ನುರಿಯುವಿಕೆ ನಡೆದಿದೆ.
ತಾಲ್ಲೂಕು ಸೇರಿದಂತೆ ಪಕ್ಕದ ಕೊಪ್ಪಳ, ಶಿರಹಟ್ಟಿ, ಹೂವಿನಹಡಗಲಿ ಮೊದಲಾದ ತಾಲ್ಲೂಕುಗಳ ರೈತರು ಇಲ್ಲಿನ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದು, ಪ್ರತಿದಿನ 5,000– 5,500 ಟನ್ ಕಬ್ಬು ನುರಿಸಲಾಗುತ್ತಿದೆ ಎಂದು ಕಾರ್ಖಾನೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಟನ್ ಕಬ್ಬಿಗೆ ₹5,500 ದರ ನೀಡಬೇಕು, ಕನಿಷ್ಠ ಬೆಂಬಲ ಬೆಲೆಯನ್ನು (ಎಂ.ಎಸ್.ಪಿ) ₹31ರಿಂದ ₹60ಕ್ಕೆ ಹೆಚ್ಚಿಸಬೇಕು, ಕಾರ್ಖಾನೆಗಳಲ್ಲಿ ಪೂರ್ಣ ಪ್ರಮಾಣದ ಎಥಿನಾಲ್ ಉತ್ಪಾದನೆಗೆ ಅವಕಾಶ ನೀಡಬೇಕು ಎಂಬ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕಬ್ಬು ಬೆಳೆಗಾರರು ಪಟ್ಟು ಹಿಡಿದಿದ್ದಾರೆ.
ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಸರ್ಕಾರದ ನಡುವೆ ಜಾಟಾಪಟಿ ಮುಂದುವರಿದಿದ್ದರಿಂದ ಇಲ್ಲಿಯ ಸಕ್ಕರೆ ಕಾರ್ಖಾನೆ ಆರಂಭದ ಕುರಿತು ರೈತರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಸಕಾಲದಲ್ಲಿ ಕಬ್ಬು ಕಟಾವು ಮಾಡದಿದ್ದರೆ, ಒಣಗಿ ತೂಕ ಕಡಿಮೆಯಾಗುತ್ತದೆ. ಹಾಗಾಗಿ ಕಬ್ಬು ಮಾರಾಟ ಮಾಡುವುದೇ ಉತ್ತಮವೆಂದು ಬಹುತೇಕ ರೈತರು ಅಭಿಪ್ರಾಯಪಟ್ಟಿದ್ದರು. ಆದರೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ಕೊಳವೆಬಾವಿಗಳಲ್ಲಿನ ನೀರು ಸಂಪೂರ್ಣ ಬತ್ತುವ ಸಾಧ್ಯತೆ ಇದೆ. ತಾಲ್ಲೂಕಿನ ತುಂಗಭದ್ರಾ ನದಿಯಲ್ಲಿ ನೀರು ಕೂಡಾ ಸದ್ಯದಲ್ಲೇ ಬರಿದಾಗುವ ಆತಂಕವಿದೆ. ಇದರಿಂದ ಕಬ್ಬಿಗೆ ನೀರೊದಗಿಸುವುದು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಈಗಲೇ ಕಬ್ಬು ಮಾರಾಟ ಮಾಡುವುದು ಸೂಕ್ತವೆಂದು ರೈತರು ತೀರ್ಮಾನಿಸಿದರು ಎಂದು ಗೊತ್ತಾಗಿದೆ.
ಸರ್ಕಾರ ನಿಗದಿಗೊಳಿಸುವ ಎಫ್.ಆರ್.ಪಿ. ದರದಂತೆ ಮುಂದೆ ಹಣ ಪಾವತಿಸಲಾಗುವುದು ಎಂಬ ಕಾರ್ಖಾನೆಯ ಒಪ್ಪಂದದ ಮೇರೆಗೆ ರೈತರು ಕಬ್ಬು ಕಟಾವು ಮಾಡಲು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.
ರಿಕವರಿ ಹೆಸರಿನಲ್ಲಿ ಮೋಸ: ಆರೋಪ
‘ಕಬ್ಬಿನ ದರ ನಿಗದಿಯಲ್ಲಿ ಕಬ್ಬಿನಲ್ಲಿರುವ ಸಕ್ಕರೆ ಅಂಶವು (ರಿಕವರಿ) ಪ್ರಮುಖ ಮಾನದಂಡವಾಗಿದ್ದು, ಶೇ 10.5ರಿಂದ ಶೇ 12ರಷ್ಟು ಸಕ್ಕರೆ ಅಂಶವಿರುವ ಕಬ್ಬಿಗೆ ಉತ್ತಮ ದರ ನೀಡಲಾಗುತ್ತದೆ. ಕಬ್ಬಿನಲ್ಲಿರುವ ಸಕ್ಕರೆ ಪ್ರಮಾಣವನ್ನು ಕಾರ್ಖಾನೆಯ ಅಧಿಕಾರಿಗಳು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಇಲ್ಲಿಯ ಕಬ್ಬಿನಲ್ಲಿ ಶೇ 10ಕ್ಕಿಂತ ಹೆಚ್ಚು ಸಕ್ಕರೆ ಅಂಶವಿರುತ್ತದೆ. ಆದರೆ, ಸಕ್ಕರೆ ಪ್ರಮಾಣ ಅಳೆಯುವವರು ಶೇ 9ರಿಂದ ಶೇ10ರಷ್ಟು ಮಾತ್ರ ರಿಕವರಿ ತೋರಿಸುತ್ತಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದ್ದು, ಬೆಳೆಯ ಲಾಭಾಂಶವು ರಿಕವರಿ ಹೆಸರಿನಲ್ಲಿ ಕೈತಪ್ಪುತ್ತದೆ’ ಎಂದು ರೈತರು ಆರೋಪಿಸಿದ್ದಾರೆ.