
ಲಂಡನ್ ಮ್ಯೂಸಿಯಂನಲ್ಲಿ ಬಳ್ಳಾರಿ ವೈಭವದ ಚಿತ್ರಪಟಗಳು
ಬಳ್ಳಾರಿ: ಬಳ್ಳಾರಿಯ 200 ವರ್ಷಗಳ ಗತವೈಭವವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ಅಪರೂಪದ ಚಿತ್ರಪಟಗಳು ಲಂಡನ್‌ನ ಬ್ರಿಟಿಷ್ ಗ್ರಂಥಾಲಯದ ಪತ್ರಾಗಾರದಲ್ಲಿವೆ. ಅವು ಪಡೆದು ಜಿಲ್ಲೆಯಲ್ಲಿ ಸಂಗ್ರಹಾಲಯ ಸ್ಥಾಪಿಸಲು ಒತ್ತಾಯ ವ್ಯಕ್ತವಾಗಿದೆ.
‘ದೇಶದ ಅತ್ಯಂತ ಹಳೆ ಆಡಳಿತಾತ್ಮಕ ಜಿಲ್ಲೆಗಳಲ್ಲಿ ಒಂದಾದ ಬಳ್ಳಾರಿಯ ಮೂಲ ಸ್ವರೂಪ, ಬ್ರಿಟಿಷರ ಕಾಲದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆ ವಿವರಿಸುವ ಬೃಹತ್ ದೃಶ್ಯ ಭಂಡಾರ ಅಲ್ಲಿ ಭದ್ರವಾಗಿದೆ’ ಎನ್ನುತ್ತಾರೆ ಬಳ್ಳಾರಿಯ ಸಂಶೋಧಕ ವೆಂಕಟ್ ನಾಗ್ ಕೊಲಾಚಲಂ.
ಬ್ರಿಟಿಷ್ ಲೈಬ್ರರಿಯಲ್ಲಿ ಬಳ್ಳಾರಿ ನಗರಕ್ಕೆ ಸಂಬಂಧಿಸಿದ ಅಂದಾಜು 75 ರಿಂದ 85 ದಾಖಲಿತ ಛಾಯಾಚಿತ್ರಗಳು ಹಾಗೂ 15 ರಿಂದ 20 ಅತ್ಯಂತ ಅಪರೂಪದ ವರ್ಣಚಿತ್ರಗಳಿವೆ. ಈ ಸಂಗ್ರಹದಲ್ಲಿರುವ ಅತ್ಯಂತ ಹಳೆಯ ವರ್ಣಚಿತ್ರವೆಂದರೆ ಕ್ರಿ.ಶ. 1802 ರಲ್ಲಿ ಬ್ರಿಟಿಷ್ ಎಂಜಿನಿಯರ್ ಥಾಮಸ್ ಫ್ರೇಸರ್ ರಚಿಸಿದ ಬಳ್ಳಾರಿ ಕೋಟೆಯ ತೈಲವರ್ಣ ಚಿತ್ರ.
ಇದರ ಜತೆಗೆ, ಕ್ರಿ.ಶ. 1868ರಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ಬಳ್ಳಾರಿಯ ಅತ್ಯಂತ ಹಳೆಯ ಛಾಯಾಚಿತ್ರವೂ ಒಂದು.
ಏಕಶಿಲಾ ಬೆಟ್ಟದ ಮೇಲಿರುವ ಬಳ್ಳಾರಿ ಕೋಟೆ ಹಾಗೂ ನಗರದ ಸಾಂಸ್ಕೃತಿಕ ಕೊಂಡಿಯಾಗಿರುವ ಸುಪ್ರಸಿದ್ಧ ಕನಕ ದುರ್ಗಮ್ಮ ದೇವಾಲಯ, ಕಾಪರ್ ಮೌಂಟೇನ್ (ಮಿಂಚೇರಿ ಬೆಟ್ಟ)ನ ಪ್ರಕೃತಿ ಸೌಂದರ್ಯದ ಚಿತ್ರಗಳು ಅಲ್ಲಿವೆ. ಪ್ರಾಗೈತಿಹಾಸಿಕ ಶಿಲಾಯುಗದ ತಾಣವಾದ ಸಂಗನಕಲ್ಲಿಗೆ ಹತ್ತಿರವಿರುವ ‘ನೆವಿಲು ಗುಡ್ಡ’ ಮೇಲಿನ ಪ್ರಾಗೈತಿಹಾಸಿಕ ಬಂಡೆಗಳ ಮೇಲಿನ ರೇಖಾಚಿತ್ರಗಳು ಮತ್ತು ಶಾಸನಗಳ ಅಪರೂಪದ ಚಿತ್ರಗಳು, ನವಶಿಲಾಯುಗದ ಚರಿತ್ರೆಗೆ ಸಾಕ್ಷಿ ಯಾಗಿರುವ ಕುಡತಿನಿಯ ಐತಿಹಾ ಸಿಕ ಬೂದಿ ದಿಬ್ಬಗಳ ಛಾಯಾಚಿತ್ರಗಳು ಇವೆ.
‘ಛಾಯಾಚಿತ್ರಗಳ ಸಂಗ್ರಹಾಲಯ ಸ್ಥಾಪಿಸಿ’
‘ಬಳ್ಳಾರಿ ಜಿಲ್ಲಾಡಳಿತವು ವಿಶೇಷ ಆಸಕ್ತಿ ವಹಿಸಿ, ಲಂಡನ್‌ನ ಬ್ರಿಟಿಷ್ ಗ್ರಂಥಾಲಯದಿಂದ ಈ ಎಲ್ಲಾ ವರ್ಣಚಿತ್ರಗಳು ಮತ್ತು ಛಾಯಾಚಿತ್ರಗಳ ಹೈಡೆಫಿನೇಷನ್ (ಎಚ್‌ಡಿ) ಡಿಜಿಟಲ್ ಪ್ರತಿಗಳನ್ನು ತರಿಸಿಕೊಳ್ಳಬೇಕು. ಬಳ್ಳಾರಿಯಲ್ಲಿರುವ ಬ್ರಿಟಿಷ್ ಕಾಲದ ಐತಿಹಾಸಿಕ ಪಾರಂಪರಿಕ ಕಟ್ಟಡವೊಂದನ್ನು ಸುಸಜ್ಜಿತವಾಗಿ ನವೀಕರಿಸಿ, ’ಬಳ್ಳಾರಿಯ ಚಾರಿತ್ರಿಕ ಛಾಯಾಚಿತ್ರಗಳ ಸಂಗ್ರಹಾಲಯ’ ವನ್ನಾಗಿ ಪರಿವರ್ತಿಸಬೇಕು’ ಎಂದು ಸಂಶೋಧಕ ವೆಂಕಟ್ ನಾಗ್ ಕೋಲಾಚಲಂ ಹೇಳುತ್ತಾರೆ.