
ಕರುನಾಡೋತ್ಸವ: ತುಳುನಾಡಲ್ಲಿ ಕನ್ನಡದ ದೀಪ ಬೆಳಗಿಸಿದ ಕಯ್ಯಾರ ಕಿಞ್ಞಣ್ಣ ರೈ
'ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ....' ಎಂಬ ಹಾಡು ಹಾಡುವ ಮೂಲಕ ಕಾಸರಗೋಡನ್ನು ಉಳಿಸಿಕೊಳ್ಳಲು ಕನ್ನಡಿಗರು ಹೋರಾಡುವಂತೆ ಕರೆಕೊಟ್ಟವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿರುವ ಕಯ್ಯಾರ ಕಿಞ್ಞಣ್ಣ ರೈ. ಅವರು 1957ರಲ್ಲಿ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಈ ಕರೆ ನೀಡುತ್ತಾರೆ. ಇದನ್ನು ರಾ.ನಂ ಚಂದ್ರಶೇಖರ್ ಅವರು ತಮ್ಮ ‘ಕನ್ನಡ ಸಾಹಿತ್ಯ ವಿರಾಟ್ ರೂಪ’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಕಯ್ಯಾರ ಕಿಞ್ಞಣ್ಣ ರೈ ಅವರ ಕೃತಿ ಕಾವ್ಯದ ಕುರಿತು ಹೇಳುತ್ತಾ ಹೊರಟರೆ ಅದೇ ಒಂದು ಕಿರು ಹೊತ್ತಿಗೆ ಆದೀತು. ಗಡಿ ನಾಡ ಕವಿ ಎಂದೇ ಕರೆಯಲ್ಪಡುವ ರೈ ಅವರು ಕನ್ನಡ ಪರ ಹೋರಾಟಗಾರ, ಕವಿ, ಕೃಷಿಕ, ಶಿಕ್ಷಕ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ, ವಾಗ್ಮಿಯಾಗಿಯೂ ಗುರುತಿಸಿಕೊಂಡವರು.
ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎನ್ನುವ ಅವರ ಹೋರಾಟದ ಕನಸು ಕನಸಾಗಿಯೇ ಉಳಿಯಿತು. ಗಡಿನಾಡಿನ ಈಗಿನ ಕನ್ನಡದ ಪರಿಸ್ಥಿತಿಯ ಕುರಿತು ರೈ ಅವರು ಈ ಹಿಂದೆಯೇ ಗಟ್ಟಿ ಧ್ವನಿಯಲ್ಲಿ ಹೇಳಿದ್ದರು.
ರಾಜ್ಯಗಳ ಪುನರ್ವಿಂಗಡಣಾ ಆಯೋಗದ ವರದಿಯನ್ನು ಒಪ್ಪಿರುವುದಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಪ್ರಕಟಿಸಿದರು. ಈ ವರದಿಯ ಪ್ರಕಾರ ಕಾಸರಗೋಡು ತಾಲೂಕು ಕೇರಳಕ್ಕೆ ಸೇರಿತ್ತು. ಕನ್ನಡಿಗರ ಹೋರಾಟ ಹತ್ತಿಕ್ಕಲು ಅಂದಿನ ಮದ್ರಾಸ್ ಸರ್ಕಾರ ಕಾಸರಗೋಡು ಭಾಗದಲ್ಲಿ 144 ಸೆಕ್ಷನ್ ಜಾರಿ ಮಾಡಿತ್ತು. ಜನಪ್ರತಿನಿಧಿಗಳು ರಾಜಿನಾಮೆ ನೀಡುವ ನಿರ್ಣಯಕ್ಕೂ ಬಂದರು.
1956 ಫೆಬ್ರುವರಿ 6ರಂದು 150 ಮಹಿಳೆಯರು ನಿಷೇಧಾಜ್ಞೆ ಉಲ್ಲಂಘಿಸಿ ಸತ್ಯಾಗ್ರಹ ಮಾಡಿದರು. ಕಮಲಾಶೆಟ್ಟಿ, ಪರ್ತಜಿ ಪರಮೇಶ್ವರಿ ಭಟ್, ರಾಧಾ ಕಾಮತ್, ಕೆ.ಪಿ.ಎ. ಸರಸ್ವತಿ ಬಾಯಿ, ಸುವಾಸಿನಿ ಭಂಡಾರಿ, ಲಕ್ಷ್ಮೀದೇವಿ ಕುಣಿಕುಳಾಯ ಮತ್ತು ವಿದ್ಯಾರ್ಥಿನಿ ಯು.ಎಂ. ಲತಾ ಬಂಧನಕ್ಕೊಳಗಾದರು. ದಂಡ ತಪ್ಪಿದರೆ, 3 ದಿನಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದಾಗ ಈ ಕನ್ನಡ ವನಿತೆಯರು ದಂಡಕಟ್ಟದೆ ಸೆರೆವಾಸ ಅನುಭವಿಸಿದರು ಎಂದು ರಾ.ನಂ ಚಂದ್ರಶೇಖರ್ ಅವರು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ವಿದ್ಯಾರ್ಥಿಗಳು ಕೂಡ ಶಾಲೆಗಳನ್ನು ಬಹಿಷ್ಕರಿಸಿ 'ಆಯೋಗದ ವರದಿಗೆ ಧಿಕ್ಕಾರವಿರಲಿ', 'ಕಾಸರಗೋಡು ಕನ್ನಡದ ನೆಲ', 'ನಮ್ಮ ಜೀವ ಕನ್ನಡ, ನಮ್ಮ ರಕ್ತ ಕನ್ನಡ' ಎಂಬ ಘೋಷಣಾ ಫಲಕಗಳನ್ನು ಹಿಡಿದು ಮೆರವಣಿಗೆ ಮಾಡಿದರು. 'ಕಾಸರಗೋಡು ಕನ್ನಡ ನಾಡು ಎಂಬ ಘೋಷಣೆ ಕೂಗುತ್ತಾ ಶಾಲೆ ಶಾಲೆಗಳಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಸೇರಿಸಿ ಕಾಸರಗೋಡು ಕರ್ನಾಟಕಕ್ಕೆ ಸೇರಲೇಬೇಕು ಎಂಬ ಮೆರವಣಿಗಳು ನಡೆಯುತ್ತಿದ್ದವು. ಈ ವೇಳೆ ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಗೆ ಬಂದವರು ಕಯ್ಯಾರ ಕಿಞ್ಞಣ್ಣ ರೈ.
ಕಾಸರಗೋಡು ಜಿಲ್ಲೆಯ ಪೆರ್ಲದ ಬಳಿಯ ಕಯ್ಯಾರ ಎಂಬಲ್ಲಿ 1915ರ ಜೂನ್ 8ರಂದು ಜನಿಸಿದ ಇವರದ್ದು ತುಳು ಮಾತೃಭಾಷೆ. ಆದರೂ, ಕನ್ನಡ ಭಾಷೆಯ ಮೇಲಿನ ಇವರ ಪ್ರೀತಿ ಅನನ್ಯ.
ಕಷ್ಟಗಳ ನಡುವೆ ತಮ್ಮ ವಿದ್ಯಾಭಾಸ ಮುಂದುವರಿಸಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಇವರು, ತಮ್ಮ ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಜ್ಞಾನವಷ್ಟೇ ಅಲ್ಲದೆ ರಾಷ್ಟ್ರಾಭಿಮಾನದ ಜೊತೆಗೆ ನಾಡಿನ ಪ್ರೀತಿಯನ್ನು ಬಿತ್ತಿದವರು. ಯೌವನದಲ್ಲೇ ಸ್ವಾತಂತ್ರ್ಯ ಚಳವಳಿಗೆ ಆಕರ್ಷಿತರಾಗಿ, ಗಾಂಧೀಜಿಯವರ ಆದರ್ಶಗಳಿಂದ ತೀವ್ರವಾಗಿ ಪ್ರಭಾವಿತರಾಗಿದ್ದರು.
ದೇಶಭಕ್ತಿಯೇ ಇವರ ಕಾವ್ಯದ ಮುಖ್ಯ ಉಸಿರಾಗಿತ್ತು. 'ಐಕ್ಯಗಾನ', 'ಪುನರ್ನವ', 'ಶತಮಾನದ ಗಾನ', 'ಚೆಲುವು' ಮತ್ತು 'ಶ್ರೀಮುಖ' ಹೀಗೆ ಹಲವು ಹೆಸರಾಂತ ಕೃತಿಗಳನ್ನು ರಚಿಸುವ ಮೂಲಕ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಇವರ ಬರವಣಿಗೆಯಲ್ಲಿ ತುಳುನಾಡಿನ ಜನಪದ ಸೊಗಡು ಮತ್ತು ಕನ್ನಡದ ಗಂಭೀರತೆ ಎರಡೂ ಸುಂದರವಾಗಿ ರೂಪುಗೊಂಡಿವೆ.
ತುಳು ಭಾಷೆ ಮತ್ತು ಸಂಸ್ಕೃತಿಯೊಂದಿಗೂ ಕಯ್ಯಾರರು ಅತ್ಯಂತ ಆಳವಾದ ನಂಟು ಹೊಂದಿದ್ದರು. ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಇವರು, ತುಳುವಿನ ಮೇಲಿನ ಪ್ರೀತಿ ಹಾಗೂ ಕನ್ನಡದ ಮೇಲಿನ ಅಭಿಮಾನವನ್ನು ಸದಾ ಒಟ್ಟಿಗೆ ಕೊಂಡೊಯ್ದದ್ದು ಇವರ ವ್ಯಕ್ತಿತ್ವದ ವಿಶೇಷತೆ.
ಆದರೆ, ಕಯ್ಯಾರರ ಜೀವನದ ಅತ್ಯಂತ ದೊಡ್ಡ ಹೋರಾಟವೆಂದರೆ ಅದು ಗಡಿನಾಡ ಕಾಸರಗೋಡಿನ ರಕ್ಷಣೆಗಾಗಿ ನಡೆದದ್ದು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕಾಸರಗೋಡು ಕರ್ನಾಟಕದಿಂದ ಬೇರ್ಪಟ್ಟಿತು. ಆ ಸಂದರ್ಭದಲ್ಲಿ ಕನ್ನಡಿಗರ ಹಕ್ಕುಗಳಿಗಾಗಿ ಮತ್ತು ಕಾಸರಗೋಡು ಕರ್ನಾಟಕದ ಭಾಗವಾಗಬೇಕೆಂದು ಬಲವಾಗಿ ಧ್ವನಿ ಎತ್ತಿದ ಅಗ್ರಗಣ್ಯ ಹೋರಾಟಗಾರರಲ್ಲಿ ಇವರು ಮುಂಚೂನಿಯಲ್ಲಿದ್ದರು.
ಕರ್ನಾಟಕ ಗಡಿನಾಡ ಸಾಹಿತ್ಯ ಸಂಘದ ಮೂಲಕ ಗಡಿನಾಡ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಜೀವಮಾನವೆಲ್ಲ ಶ್ರಮಿಸಿದರು. ಕಾಸರಗೋಡಿನ ಮಣ್ಣಿನಲ್ಲಿ ಕನ್ನಡದ ದೀಪ ಎಂದಿಗೂ ಹಾರಿಹೋಗದಂತೆ ಕಾಪಾಡಿದ ಗಟ್ಟಿಗರು ಇವರು.
ಅವರ ಹೋರಾಟಕ್ಕೆ ಸಾಹಿತ್ಯವೇ ಮುಖ್ಯ ಶಕ್ತಿಯಾಗಿತ್ತು. ತಮ್ಮ ವಿಚಾರಗಳನ್ನು ಜನರಿಗೆ ತಲುಪಿಸಲು ಕವನ, ಲೇಖನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ನಾಡು ಮತ್ತು ನುಡಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವರ ಸಾಹಿತ್ಯದ ಮುಖ್ಯ ಉದ್ದೇಶವಾಗಿತ್ತು. ಅವರ ಬರಹಗಳು ಕೇವಲ ಓದುಗರ ಮನರಂಜನೆಗೆ ಸೀಮಿತವಾಗಿರದೆ, ಜನರನ್ನು ಗಂಭೀರ ಚಿಂತನೆಗೆ ಹಚ್ಚುವ ಮತ್ತು ಸಮಾಜದ ಬಗ್ಗೆ ಜವಾಬ್ದಾರಿ ಮೂಡಿಸುವ ಶಕ್ತಿಯನ್ನು ಹೊಂದಿದ್ದವು. ಹೀಗಾಗಿ ಅವರ ಸಾಹಿತ್ಯಿಕ ಬದುಕು ಮತ್ತು ಹೋರಾಟದ ಬದುಕು ಒಂದಕ್ಕೊಂದು ಪೂರಕವಾಗಿದ್ದವು.
ನಾಡಿನ ಸೇವೆಗಾಗಿ ಇವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ 'ಪಂಪ ಪ್ರಶಸ್ತಿ', 'ನಾಡೋಜ ಪ್ರಶಸ್ತಿ' ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಒಲಿದುಬಂದಿದ್ದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ. ಕಾಸರಗೋಡು ಕರ್ನಾಟಕದೊಂದಿಗೆ ವಿಲೀನಗೊಳ್ಳಬೇಕೆಂಬ ಇವರ ಕನಸು ಕೊನೆಯವರೆಗೆ ನನಸಾಗಲಿಲ್ಲವಾದರೂ, ಗಡಿಭಾಗದ ಕನ್ನಡಿಗರ ಹಕ್ಕುಗಳಿಗಾಗಿ ಇವರು ನಡೆಸಿದ ಸುದೀರ್ಘ ಹೋರಾಟ ಚರಿತ್ರೆಯಲ್ಲಿ ಅಳಿಸಲಾಗದ ಮುದ್ರೆಯೊತ್ತಿದೆ.
ಕಯ್ಯಾರ ಕಿಞ್ಞಣ್ಣ ರೈ ಅವರು 2015ರ ಆಗಸ್ಟ್ 9ರಂದು ತಮ್ಮ ನೂರನೇ ವಯಸ್ಸಿನಲ್ಲಿ ನಿಧನರಾದರು. ಭೌತಿಕವಾಗಿ ಅವರು ನಮ್ಮೊಂದಿಗಿಲ್ಲದಿದ್ದರು, ಅವರು ಹಚ್ಚಿಟ್ಟ ಕನ್ನಡದ ದೀಪ ಮತ್ತು ಅವರು ಬಿಟ್ಟುಹೋದ ಸಾಹಿತ್ಯಿಕ ಹಾಗೂ ಹೋರಾಟದ ಹಾದಿ ಎಂದಿಗೂ ದಾರಿದೀಪ.