ಪೌಷ್ಟಿಕ ಆಹಾರ: ಕಾದಿವೆ 9,500 ಕುಟುಂಬ

ಪೌಷ್ಟಿಕ ಆಹಾರ: ಕಾದಿವೆ 9,500 ಕುಟುಂಬ

ಪೌಷ್ಟಿಕ ಆಹಾರ: ಕಾದಿವೆ 9,500 ಕುಟುಂಬ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ 8 ತಿಂಗಳುಗಳಿಂದ ಪೌಷ್ಟಿಕ ಆಹಾರ ಕಿಟ್ ಆದಿವಾಸಿಗಳ ಕೈಸೇರಿಲ್ಲ. ಇದರಿಂದ ಪೌಷ್ಟಿಕ ಆಹಾರ ಇಲ್ಲದೇ ಒಟ್ಟು 9,500 ಕುಟುಂಬಗಳು ಕಂಗೆಟ್ಟಿವೆ.

ಇಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಬುಡಕಟ್ಟು ಸಮುದಾಯಗಳಿಗೆ ಸರ್ಕಾರ ಪೌಷ್ಟಿಕ ಆಹಾರ ಕಿಟ್ ನೀಡುತ್ತಿತ್ತು. ದುರ್ಬಲರಾಗಿರುವ ಬುಡಕಟ್ಟು ಜನರು ಈ ಆಹಾರ ಸೇವಿಸುತ್ತಿದ್ದರು. ಆದರೆ, ಸರ್ಕಾರ ಫೆಬ್ರುವರಿ ತಿಂಗಳ ನಂತರದಿಂದ ಇಲ್ಲಿಯವರೆಗೂ ಒಂದೇ ಒಂದು ಪೌಷ್ಠಿಕ ಆಹಾರದ ಕಿಟ್‌ ಅನ್ನು ಸರಬರಾಜು ಮಾಡಿಲ್ಲ.

ಕೊಡಗು ಜಿಲ್ಲೆಯಲ್ಲಿ ಜೇನುಕುರುಬ, ಯರವ, ಕುಡಿಯ, ಕಾಡುಕುರುಬ, ಸೋಲಿಗ ಹಾಗೂ ಮಲೆಕುಡಿಯ ಜನಾಂಗಕ್ಕೆ ಸೇರಿದ ಒಟ್ಟು 9,500 ಕುಟುಂಬದವರಿಗೆ ಪೌಷ್ಟಿಕ ಆಹಾರ ಕಿಟ್ ನೀಡುತ್ತಿದೆ. ರಾಜ್ಯಮಟ್ಟದಲ್ಲಿ ಟೆಂಡರ್ ವಿಚಾರದಲ್ಲಿ ತೊಂದರೆ ಉಂಟಾಗಿದ್ದರಿಂದ ಇದುವರೆಗೂ ಈ ಪೌಷ್ಟಿಕ ಆಹಾರದ ಕಿಟ್ ವಿತರಣೆಯಾಗಿಲ್ಲ.

ಪೌಷ್ಟಿಕ ಆಹಾರ ಕಿಟ್‌ನಲ್ಲಿ ಅರ್ಧಕೆಜಿ ತುಪ್ಪ, 8 ಕೆ.ಜಿ ಅಕ್ಕಿ, ತೊಗರಿಬೇಳೆ 3 ಕೆ.ಜಿ., ಕಡಲೆಕಾಳು 1 ಕೆ.ಜಿ., ಅಲಸಂದೆ 1 ಕೆ.ಜಿ. 30 ಕೋಳಿಮೊಟ್ಟೆ, 2 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ, 1 ಕೆ.ಜಿ ಬೆಲ್ಲ, ಕಡಲೆಬೀಜ 1 ಕೆ.ಜಿ ಒಳಗೊಂಡಿದೆ. ಇಷ್ಟು ಆಹಾರ ಪದಾರ್ಥಗಳನ್ನು ಆದಿವಾಸಿಗಳು ಸೇವಿಸಿ ಅವರು ಆರೋಗ್ಯಯುತ ಜೀವನ ನಡೆಸಲಿ ಎಂಬುದು ಈ ಯೋಜನೆ ಹಿಂದಿನ ಉದ್ದೇಶ.

ಮುಖ್ಯಕವಾಗಿ, ಬಹಳಷ್ಟು ಆದಿವಾಸಿಗಳು ಪೌಷ್ಟಿಕ ಆಹಾರ ಸೇವಿಸದೇ ಇರುವುದರಿಂದ ಅವರಲ್ಲಿ ಬಹುತೇಕ ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮತ್ತೂ ಕೆಲವರು ಅನೇಕ ರೋಗಗಳಿಗೆ ತುತ್ತಾಗಿ ನರಳುತ್ತಿದ್ದಾರೆ. ಇವರಲ್ಲಿನ ಅಪೌಷ್ಟಿಕತೆ ನೀಗಿಸಲು ಸರ್ಕಾರ ಈ ಕಿಟ್ ವಿತರಣೆ ಮಾಡುತ್ತಿತ್ತು.

ಆದರೆ, ಫೆಬ್ರುವರಿ ತಿಂಗಳ ನಂತರ ಈ ಕಿಟ್ ವಿತರಣೆ ನಿಂತಿದೆ. ಈ ತಿಂಗಳು ಬರುತ್ತದೆ, ಮುಂದಿನ ತಿಂಗಳು ಬರುತ್ತದೆ ಎಂದು ಕಾದು ಕಾದು ಆದಿವಾಸಿಗಳು ಹೈರಣಾಗಿದ್ದಾರೆ.

ಇನ್ನಾದರೂ ಸರ್ಕಾರ ನಿಗದಿತವಾಗಿ ಈ ಪೌಷ್ಟಿಕ ಆಹಾರ ಕಿಟ್ ವಿತರಿಸಬೇಕು ಎಂಬುದು ಆದಿವಾಸಿ ಮುಖಂಡರ ಒತ್ತಾಯವಾಗಿದೆ.

ಹುತ್ತರಿ ಹಬ್ಬದ ಒಳಗೆ ಕಿಟ್ ನೀಡಿ

‘ಕಳೆದ 8 ತಿಂಗಳುಗಳಿಂದ ಸ್ಥಗಿತಗೊಂಡಿರುವ ಪೌಷ್ಟಿಕ ಆಹಾರದ ಕಿಟ್‌ ಅನ್ನು ಇನ್ನು ಹುತ್ತರಿ ಹಬ್ಬದ ಒಳಗೆ ವಿತರಣೆ ಮಾಡಬೇಕು’ ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಎ.ಮುತ್ತಪ್ಪ ಒತ್ತಾಯಿಸಿದರು.

ಪೌಷ್ಟಿಕ ಆಹಾರ ಇಲ್ಲದೇ ಆದಿವಾಸಿಗಳು ಪರಿತಪಿಸುತ್ತಿದ್ದಾರೆ. ಸರ್ಕಾರ ಕೂಡಲೇ ಇವರ ನೆರವಿಗೆ ಧಾವಿಸಬೇಕು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಡಂಚಿನಲ್ಲಿರುವ ಪರಿಶಿಷ್ಟ‍ ‍ಪಂಗಡಕ್ಕೆ ಸೇರಿದ ಮರಾಠ ನಾಯಕ, ಮೇದ ಹಾಗೂ ಕಾಡಂಚಿನಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಅಡಿಯ ಜನಾಂಗದವರಿಗೂ ಈ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಪರಿಶಿಷ್ಟ ಜಾತಿ, ಪರಿಶಿಷ್ಟ ‍ಪಂಗಡಗಳಿಗೆ ಸೇರಿದ ಕಾಲೊನಿಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಅಭಿವೃದ್ಧಿಗೆ ತುರ್ತು ಕ್ರಮ ಕೈಗೊಳ್ಳದೇ ಹೋದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಎ.ಮುತ್ತಪ್ಪ ಎಚ್ಚರಿಕೆ ನೀಡಿದರು.

ಕೆಲವೊಂದು ಕಡೆ ಆಂಬುಲೆನ್ಸ್‌ಗಳು ಸಂಚರಿಸಲೂ ಯೋಗ್ಯ ಇಲ್ಲದ ರಸ್ತೆಗಳಿವೆ. ಕೇವಲ ರಸ್ತೆ ಮಾತ್ರವಲ್ಲ, ಸಮುದಾಯ ಭವನ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದೆ. ಈ ಕೊರತೆಗಳನ್ನು ನೀಗಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ₹ 1 ಕೋಟಿ ಹಣ ನೀಡಬೇಕು ಎಂದು ಅವರು ಒತ್ತಾಯಿಸಿದರು. ಕುಡಿಯ ಸಮಾಜದ ಅಧ್ಯಕ್ಷ ಕೆ.ಕೆ.ಬೋಪಯ್ಯ, ಮುಖಂಡರಾದ ಕೆ.ಕೆ.ಪೊನ್ನಪ್ಪ, ಎಂ.ಡಿ.ಚಂದ್ರ, ಎಂ.ಡಿ.ಚಿಣ್ಣಪ್ಪ, ಎಂ.ಎ.ವಿನೋದ್ ಭಾಗವಹಿಸಿದ್ದರು.

ಆದಿವಾಸಿಗಳಿಗೆ ಒಂದು ತಿಂಗಳ ಪೌಷ್ಟಿಕ ಆಹಾರ ಕಿಟ್‌ಗಳ ವಿತರಣೆ ಆರಂಭವಾಗಿದ್ದು, ಹಂತ ಹಂತವಾಗಿ ತಾಲ್ಲೂಕುವಾರು ವಿತರಿಸಲಾಗುವುದು ಎಚ್.ಸಿ.ಭಾಗಿರಥಿ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ